7.6 ಲಕ್ಷ ಕೋಟಿ ರೂ.ಹೂಡಿಕೆಯ ಒಡಂಬಡಿಕೆಗೆ ಸಹಿ: ಸಚಿವ ಮುರುಗೇಶ್ ನಿರಾಣಿ

Update: 2022-11-02 14:25 GMT

ಬೆಂಗಳೂರು, ನ. 2: ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶದ ಮೊದಲ ದಿನ ಸುಮಾರು 7.6 ಲಕ್ಷ ಕೋಟಿ ರೂ. ಹೂಡಿಕೆಯ ಒಡಂಬಡಿಕೆ(ಎಂಒಯು) ಗಳಿಗೆ ಸಹಿ ಹಾಕಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಬುಧವಾರ ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ.4ರಂದು ಸಂಜೆ 4 ಗಂಟೆಗೆ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮ ಮುಗಿದ ಬಳಿಕ ಸ್ವತಃ ಮುಖ್ಯಮಂತ್ರಿಯೆ ಯಾವ ಯಾವ ಸಂಸ್ಥೆಗಳು, ಎಷ್ಟು ಬಂಡವಾಳವನ್ನು ಯಾವ ಯೋಜನೆಗಳಿಗೆ, ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಮಾಹಿತಿ ನೀಡಲಿದ್ದಾರೆ ಎಂದರು.

ಅಲ್ಲದೇ, 2025ರ ಜನವರಿಯಲ್ಲಿ ಪುನಃ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸರಕಾರ ನಿರ್ಧರಿಸಿದೆ. ಈ ಬಾರಿಯ ಸಮಾವೇಶವನ್ನು ಜನವರಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಚುನಾವಣೆ ವರ್ಷವಾಗಿರುವುದರಿಂದ ನವೆಂಬರ್‍ನಲ್ಲಿ ಮಾಡಿದ್ದೇವೆ ಎಂದು ಅವರು ಹೇಳಿದರು. 

ಅತೀ ಹೆಚ್ಚು ಹೂಡಿಕೆಯೂ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಬಂದಿದೆ. ಬೆಂಗಳೂರಿನಾಚೆ(ಬಿಯಾಂಡ್ ಬೆಂಗಳೂರು) ಅತೀ ಹೆಚ್ಚು ಹೂಡಿಕೆ ಬಂದಿದೆ. ಮುಂದಿನ ಸಾಲಿನ ಮಾರ್ಚ್ ತಿಂಗಳ ಮುಂಚೆ ಹಾಸನ, ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ದಾವಣಗೆರೆ, ಬಾಗಲಕೋಟೆಯ ಬಾದಾಮಿ, ಕೊಪ್ಪಳ, ರಾಯಚೂರು ಹಾಗೂ  ಚಿಕ್ಕಮಗಳೂರಿನಲ್ಲಿಯೂ ವಿಮಾನ ನಿಲ್ದಾಣ ನಿರ್ಮಿಸಲು ಗಮನ ಹರಿಸಲಾಗಿದೆ. ಜೊತೆಗೆ, ಬಂದರುಗಳ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ, ರೈಲ್ವೆ ಪ್ರಯಾಣ ಅವಧಿ ಕಡಿತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಜಾಗತಿಕ ಹೂಡಿಕೆದಾರರ ಸಮಾವೇಶವು ಅತ್ಯಂತ ಯಶಸ್ವಿಯಾಗಲಿದೆ. ನಮ್ಮ ನಿರೀಕ್ಷೆ ಐದು ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಿತ್ತು. ಆದರೆ, ಹೂಡಿಕೆಯ ಪ್ರಮಾಣ ಗಮಿಸಿದರೆ ಸುಮಾರು 8 ಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಅವಕಾಶಗಳು ಸಿಗಬಹುದು ಎಂಬ ನಿರೀಕ್ಷೆ ಮೂಡುತ್ತಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Similar News