×
Ad

ಮೂಡುಬಿದಿರೆ: ಶಾಲಾ ಬಸ್-ಕಾರು ಢಿಕ್ಕಿ; ಚಾಲಕನಿಗೆ ಗಾಯ

Update: 2022-11-02 20:04 IST

ಮೂಡುಬಿದಿರೆ: ಶಾಲಾ ಬಸ್ಸಿಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಅಲಂಗಾರು ಬಳಿ ಬುಧವಾರ ಸಂಜೆ ನಡೆದಿದ್ದು, ಅಪಘಾತದಲ್ಲಿ ಕಾರಿನ ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಡುಬಿದಿರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಆಲಂಗಾರಿನಲ್ಲಿ ಸಂಜೆ ವೇಳೆ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೂಡುಬಿದಿರೆ ಆಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಮಕ್ಕಳನ್ನು ಮನೆಗೆ ಬಿಡಲು ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಆಲಂಗಾರು ಬಳಿ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ಢಿಕ್ಕಿ ಹೊಡೆದಿದೆ.  ಕಾರು ಚಾಲಕ ಕಾರ್ಕಳ ಮೂಲದ ರಾಜೇಶ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

Similar News