×
Ad

ಮಂಗಳೂರು: ‘ನಿವೀಸ್ ಮ್ಯಾರಥಾನ್’ ಯಶಸ್ವಿ

Update: 2022-11-06 17:27 IST

ಮಂಗಳೂರು, ನ.6: ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಮಂಗಳೂರು ರನ್ನರ್ಸ್‌ ಕ್ಲಬ್ ವತಿಯಿಂದ ರವಿವಾರ ನಗರದಲ್ಲಿ ‘ನಿವೀಸ್ ಮಂಗಳೂರು ಮ್ಯಾರಥಾನ್-2022 ನಡೆಯಿತು.

ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡು ಮ್ಯಾರಥಾನ್ ಯಶಸ್ಸಿಗೆ ಸಹಕರಿಸಿದರು. 5 ವರ್ಷದ ಮಗುವಿನಿಂದ ಹಿಡಿದು 82 ವರ್ಷ ಪ್ರಾಯದ ಹಿರಿಯರು ಕೂಡ ಲವಲವಿಕೆಯಿದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಿ ಶ್ರೀಧರ್ ಮತ್ತು ಎಸಿಪಿ ಟ್ರಾಫಿಕ್ ಗೀತಾ ಕುಲಕರ್ಣಿ 21 ಕಿ.ಮೀ.ನ  ಹಾಫ್ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಅಲ್ಲದೆ ಸ್ವತಃ ತಾವೂ ಓಟದಲ್ಲಿ ಪಾಲ್ಗೊಂಡರು.

ನಗರದ ಮಂಗಳಾ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್ ಕೂಳೂರು ಫೆರಿ ರಸ್ತೆ-ಕೊಟ್ಟಾರ ಚೌಕಿ-ಕೂಳೂರು ಸೇತುವೆ, ತಣ್ಣೀರಬಾವಿ ಬೀಚ್‌ವರೆಗೆ ಸಾಗಿ ಅಲ್ಲಿಂದ ಮರಳಿ ಅದೇ ದಾರಿಯಾಗು ಓಟಗಾರರು ಮಂಗಳಾ ಕ್ರೀಡಾಂಗಣಕ್ಕೆ ಹಿಂತಿರುಗುವ ಮೂಲಕ ಮ್ಯಾರಥಾನ್ ಸಮಾಪ್ತಿಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮೇಯರ್ ಜಯಾನಂದ ಅಂಚನ್,  ಶಾಸಕ ಡಿ.ವೇದವ್ಯಾಸ್ ಕಾಮತ್, ಕೆಎಂಸಿಯ ಡಾ.ಉನ್ನಿ ಕೃಷ್ಣನ್, ಕೆಎಂಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಗೀರ್ ಸಿದ್ಧಿಕಿ, ನಿವೀಸ್‌ನ ಶಿಶಿರ್ ಶೆಟ್ಟಿ, ಮಂಗಳೂರು ಮ್ಯಾರಥಾನ್ 2022ರ ರೇಸ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಹಾಗೂ ಮಂಗಳೂರು ರನ್ನರ್ಸ್‌ ಕ್ಲಬ್‌ನ ಅಧ್ಯಕ್ಷ ಅಮಿತಾ ಡಿಸೋಜ ಉಪಸ್ಥಿತರಿದ್ದರು.

*ಮುಂಬೈ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಯ ಓಟಗಾರರು ಹಾಫ್ ಮ್ಯಾರಥಾನ್ (21ಕಿ.ಮೀ), 10 ಕಿಮೀ, 5 ಕಿಮೀ ಮತ್ತು 2 ಕಿಮೀ ವಿಭಾಗಗಳಲ್ಲಿ ಭಾಗವಹಿಸಿದ್ದರು.

*ಮಂಗಳೂರು ಮ್ಯಾರಥಾನ್‌ನಲ್ಲಿ ವಿಶೇಷ ಚೇತನ ಮಕ್ಕಳು ಕೂಡ ಪಾಲ್ಗೊಂಡು ಮ್ಯಾರಥಾನ್‌ನಲ್ಲಿ ಗಮನ ಸೆಳೆದರು. ಚೇತನ ಶಿಶು ಅಭಿವೃದ್ಧಿ ಕೇಂದ್ರದ ಮಕ್ಕಳು ಮತ್ತು  ಸರ್ವಮಂಗಲ ಟ್ರಸ್ಟ್‌ನ ದೃಷ್ಟಿ ವಿಕಲಚೇತನರು ಓಟದ ಭಾಗವಾಗಿದ್ದರು.

*ಓಟದಲ್ಲಿ ಭಾಗವಹಿಸಿ ಅಂತಿಮ ಗುರಿ ತಲುಪಿದ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ಜತೆಗೆ ಪದಕಗಳನ್ನು ನೀಡಲಾಯಿತು.

*ಹಾಫ್ ಮ್ಯಾರಥಾನ್ ಓಪನ್ ಪುರುಷರ ವಿಭಾಗದಲ್ಲಿ ಸಚಿನ್ (ಪ್ರ), ರಾಹುಲ್ ಶುಕ್ರಾ(ದ್ವಿ), ವೆಂಕಟೇಶ್ (ತೃ). ಮಹಿಳೆಯರ ವಿಭಾಗದಲ್ಲಿ ದೀಪಾ ನಾಯಕ್ (ಪ್ರ),ಮೆಹ್ವಿಶ್ ಹುಸೇನ್ (ದ್ವಿ), ಸಂಧ್ಯಾ ಕೆ(ತೃ) ಮತ್ತು 10 ಕಿ.ಮೀ ಓಟದ ಮುಕ್ತ ಪುರುಷರ ವಿಭಾಗದಲ್ಲಿ ಸಿಬಿನ್ ಚಂಗಪ್ಪ  (ಪ್ತ), ದಶರತ್ ಎನ್.ಟಿ (ದ್ವಿ), ಲಾರಾ ಫ್ರಾನ್ಸಿಸ್(ತೃ) ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪಂದನಾ (ಪ್ರ), ಧನಸ್ಸು (ದ್ವಿ), ಚೈತ್ರಾ (ತೃ) ಬಹುಮಾನ ಪಡೆದುಕೊಂಡರು.

Similar News