ಈ ವಾರ ಮೆಟಾದಿಂದ ನೌಕರರ ವಜಾ ಸಾಧ್ಯತೆ; ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ: ವರದಿ

Update: 2022-11-07 09:02 GMT

ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಇದರ ಮಾತೃ ಸಂಸ್ಥೆಯಾಗಿದೆ ಮೆಟಾ ಫ್ಲಾಟ್‍ಫಾರ್ಮ್ಸ್‌. ಈ ವಾರ ದೊಡ್ಡ ಮಟ್ಟದ ಲೇ-ಆಫ್(ಉದ್ಯೋಗಿಗಳನ್ನು ವಜಾ ಮಾಡುವುದು) ನಡೆಸಲಿದೆ ಎಂಬ ಮಾಹಿತಿಯಿದ್ದು ಸಂಸ್ಥೆಯ ಈ ಕ್ರಮದಿಂದ ಸಾವಿರಾರು ಉದ್ಯೋಗಿಗಳು ಬಾಧಿತರಾಗುವ ನಿರೀಕ್ಷೆಯಿದೆ. ಬುಧವಾರ ಈ ಲೇ-ಆಫ್‍ಗಳು ನಡೆಯಬಹುದೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ಈ ಕುರಿತು ಮೆಟಾ ಪ್ರತಿಕ್ರಿಯಿಸಲು ನಿರಾಕರಿಸಿದೆ.

ತ್ರೈಮಾಸಿಕದ ಆದಾಯ ನಿರೀಕ್ಷಿತ ಮಟ್ಟದಲ್ಲಿಲ್ಲದೇ ಇರುವುದು ಹಾಗೂ ಮೆಟಾ ಸ್ಟಾಕ್ ಮೌಲ್ಯ ಸುಮಾರು 67 ಬಿಲಿಯನ್ ಡಾಲರ್‍ನಷ್ಟು ಕಡಿಮೆಯಾಗಿರುವುದು ಸಂಸ್ಥೆಯ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡಿದೆಯೆನ್ನಲಾಗಿದೆ.

ಜೊತೆಗೆ ಜಾಗತಿಕ ಆರ್ಥಿಕ ನಿಧಾನಗತಿ, ಟಿಕ್ ಟಾಕ್, ಆಪಲ್ ಮುಂತಾದ ಕಂಪೆನಿಗಳಿಂದ ಸ್ಪರ್ಧೆ ಹಾಗೂ ಮೆಟಾವರ್ಸ್‍ಗೆ ವ್ಯಯಿಸಿದ ದೊಡ್ಡ ಮೊತ್ತ ಸಂಸ್ಥೆಗೆ ಹೊರೆಯಾಗಿದೆ ಎಂದೇ ತಿಳಿಯಲಾಗಿದೆ.

ಮೆಟಾವರ್ಸ್ ಮೇಲೆ ಮಾಡಲಾಗಿರುವ ಹೂಡಿಕೆಗಳು ಫಲ ನೀಡಲು ಒಂದು ದಶಕ ಬೇಕಾದೀತೆಂದು ಮೆಟಾ ಮುಖ್ಯಸ್ಥ ಮಾರ್ಕ್ ಝುಕೆರ್ಬರ್ಗ್ ಈಗಾಗಲೇ ಹೇಳಿದ್ದಾರೆ.ಜೂನ್ ತಿಂಗಳಿನಿಂದಲೇ ಹೊಸ ಇಂಜಿನಿಯರ್‍ಗಳ ನೇಮಕಾತಿಯನ್ನು ಸಂಸ್ಥೆ ಶೇ 30 ರಷ್ಟು ಕಡಿತಗೊಳಿಸಿತ್ತು.

Similar News