ಇಸ್ಲಮಾಬಾದ್ ಗೆ ರ್ಯಾಲಿ ಇಂದು ಪುನರಾರಂಭ: ಪಿಟಿಐ ಘೋಷಣೆ

Update: 2022-11-07 17:57 GMT

ಲಾಹೋರ್, ನ.7: ದೇಶದಲ್ಲಿ ಶೀಘ್ರ ಚುನಾವಣೆಗೆ ಆಗ್ರಹಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ನೇತೃತ್ವದಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(Tehreek-e-Insaf)(ಪಿಟಿಐ) ಪಕ್ಷ ಆಯೋಜಿಸಿರುವ ಇಸ್ಲಮಾಬಾದ್ವರೆಗಿನ ದೀರ್ಘ ರ್ಯಾಲಿ ನವೆಂಬರ್ 8(ಇಂದು) ಪುನರಾರಂಭಗೊಳ್ಳಲಿದೆ ಎಂದು ಪಕ್ಷದ ಮುಖಂಡರು ಘೋಷಿಸಿದ್ದರು.

ಕಳೆದ ಗುರುವಾರ ವಝೀರಾಬಾದ್ (Wazirabad)ನಲ್ಲಿ ರ್ಯಾಲಿಯ ಸಂದರ್ಭ ಗುಂಡೇಟಿನಿಂದ ಗಾಯಗೊಂಡಿರುವ ಇಮ್ರಾನ್ ಖಾನ್  ಚೇತರಿಸಿಕೊಳ್ಳುವವರೆಗೆ ರ್ಯಾಲಿಯ ನೇತೃತ್ವವನ್ನು ಮಾಜಿ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಶಿ(Shah Mahmood Qureshi) ವಹಿಸಲಿದ್ದಾರೆ. ಖಾನ್ ಒಂದು ವೇಳೆ ಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ ರಾವಲ್ಪಿಂಡಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಇಮ್ರಾನ್ ದೇಶದ್ರೋಹ ಮಾಡುತ್ತಿದ್ದಾರೆ: ಸಚಿವ ರಾಣಾ ಸನಾವುಲ್ಲಾ

 ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ವಿರುದ್ಧ ದೇಶದ್ರೋಹ ಮಾಡುತ್ತಿದ್ದಾರೆ ಮತ್ತು ನ್ಯಾಯಾಂಗದಂತಹ ಸಂಸ್ಥೆಗಳು ತಮ್ಮ ‘ದರಿದ್ರ ಅಜೆಂಡಾ’ದ ಪರ ನಿಲ್ಲುವಂತೆ ಒತ್ತಾಯಿಸಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಅವರಿಗಿರುವ ಏಕೈಕ ಬೇಡಿಕೆಯೆಂದರೆ ಅವರನ್ನು ಪ್ರಧಾನಿ ಗದ್ದುಗೆಯಲ್ಲಿರಿಸಲು ಎಲ್ಲಾ ಸಂಸ್ಥೆಗಳೂ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದಾಗಿದೆ. ಆದರೆ ಸಂಸ್ಥೆಗಳು, ಸರಕಾರ, ಸಂಸತ್ತು ಮತ್ತು ನ್ಯಾಯಾಂಗ ಅವರ ದರಿದ್ರ ಅಜೆಂಡಾದ ವಿರುದ್ಧ ನಿಲ್ಲಬೇಕು. ಇಮ್ರಾನ್ ಪಾಕ್ ವಿರುದ್ಧ ದೇಶದ್ರೋಹ ಮಾಡುತ್ತಿದ್ದಾರೆ ಎಂದು ಸನಾವುಲ್ಲಾ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಗುಂಡೇಟು ಬಿದ್ದ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ತಡವಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸನಾವುಲ್ಲಾ, ದೇಶದ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಅಡೆತಡೆ ಇರುತ್ತದೆ. ವಂಚಕನು ತನ್ನ ಸ್ವಹಿತಾಸಕ್ತಿಗಾಗಿ ಪ್ರಕರಣ ದಾಖಲಿಸಲು ಬಯಸಿದರೆ ಅದನ್ನು ನಿರಾಕರಿಸುವ ಹಕ್ಕನ್ನು ಪೊಲೀಸರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಶಾರುಖ್, ಸಲ್ಮಾನ್‌ಗಿಂತ ಇಮ್ರಾನ್ ಉತ್ತಮವಾಗಿ ನಟಿಸಿದ್ದಾರೆ: ಪಾಕ್ ಮುಖಂಡ

ನಟನಾ ಕೌಶಲ್ಯದಲ್ಲಿ ಇಮ್ರಾನ್ಖಾನ್ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ಖಾನ್ರನ್ನು ಮೀರಿಸಿದ್ದಾರೆ ಎಂದು ಪಾಕಿಸ್ತಾನ್ ಡೆಮೊಕ್ರಾಟ್ ಮೂವ್ಮೆಂಟ್(ಪಿಡಿಎಂ) ಅಧ್ಯಕ್ಷ ಮೌಲಾನಾ ಫಝಲ್ಉರ್ ರೆಹ್ಮಾನ್ ಹೇಳಿದ್ದಾರೆ.

Similar News