ಸ್ವದೇಶಿ ನಿರ್ಮಿತ ಮರುಬಳಕೆಯ ರಾಕೆಟ್‌ನ ಮೊದಲ ರನ್‌ವೇ ಲ್ಯಾಂಡಿಂಗ್ ಪ್ರಯೋಗಕ್ಕೆ ಇಸ್ರೋ ಸಜ್ಜು

Update: 2022-11-08 17:41 GMT

ಹೊಸದಿಲ್ಲಿ, ನ.8: ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ರಕ್ಷಣಾ ಇಲಾಖೆಯ ವೈಮಾನಿಕ ಪರೀಕ್ಷಾ ನೆಲೆಯಲ್ಲಿ ತನ್ನ ಮೇಡ್ ಇನ್ ಇಂಡಿಯಾ ಮರುಬಳಕೆಯ ಉಡಾವಣಾ ವಾಹನ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ (ಆರ್‌ಎಲ್‌ವಿ-ಟಿಡಿ)ನ ಮೊದಲ ರನ್‌ವೇ ಲ್ಯಾಂಡಿಂಗ್ ಪ್ರಯೋಗಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕಾಗಿ ಹವಾಮಾನದ ಮೇಲೆ ನಿಗಾಯಿರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್.ಸೋಮನಾಥ ಅವರು ಮಂಗಳವಾರ ತಿಳಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ‘ಹವಾಮಾನವಿನ್ನೂ ಚೆನ್ನಾಗಿಲ್ಲ,ಸೂಕ್ತ ಹವಾಮಾನಕ್ಕಾಗಿ ನಾವು ಕಾಯುತ್ತಿದ್ದೇವೆ. ಗಾಳಿ ಮತ್ತು ಇತರ ವ್ಯವಸ್ಥೆಗಳು ಸೌಮ್ಯಗೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು.

ಆರ್‌ಎಲ್‌ವಿ ವಿಂಗ್ ಬಾಡಿಯನ್ನು ಹೆಲಿಕಾಪ್ಟರ್ ಬಳಸಿ ಮೂರರಿಂದ ಐದು ಕಿ.ಮೀ.ಎತ್ತರಕ್ಕೆ ಒಯ್ಯಲಾಗುತ್ತದೆ ಮತ್ತು ರನ್‌ವೇಗಿಂತ ಮುನ್ನ ಸುಮಾರು ನಾಲ್ಕರಿಂದ ಐದು ಕಿ.ಮೀ.ಅಂತರದಲ್ಲಿ ಸಮತಲ ವೇಗದೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ. ಬಿಡುಗಡೆಯ ಬಳಿಕ ಆರ್‌ಎಲ್‌ವಿ ಜಾರುತ್ತ ರನ್‌ವೇ ಕಡೆಗೆ ಸಾಗುತ್ತದೆ ಮತ್ತು ಲ್ಯಾಂಡಿಂಗ್ ಗೇರ್‌ನ್ನು ಬಳಸಿ ರನ್‌ವೇದಲ್ಲಿ ಸ್ವಾಯತ್ತವಾಗಿ ಇಳಿಯುತ್ತದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಂಡಿಂಗ್ ಗೇರ್,ಪ್ಯಾರಾಚೂಟ್,ಹುಕ್ ಬೀಮ್ ಅಸೆಂಬ್ಲಿ,ರಾಡಾರ್ ಅಲ್ಟಿಮೀಟರ್ ಮತ್ತು ಸುಡೋಲೈಟ್‌ನಂತಹ ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಮತ್ತು ಅವು ಅಳವಡಿಕೆಗೆ ಅರ್ಹತೆಯನ್ನು ಪಡೆದಿವೆ ಎಂದು ಇಸ್ರೋ ಮೂಲಗಳು ಈ ಹಿಂದೆ ಸುದ್ದಿಸಂಸ್ಥೆಗೆ ತಿಳಿಸಿದ್ದವು.

Similar News