ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನ ಫೈನಲ್‌ಗೆ

ರಿಝ್ವಾನ್-ಆಝಂ ಭರ್ಜರಿ ಜೊತೆಯಾಟ

Update: 2022-11-09 11:31 GMT

  ಸಿಡ್ನಿ, ನ.9: ಆರಂಭಿಕ ಬ್ಯಾಟರ್‌ಗಳಾದ ಮುಹಮ್ಮದ್ ರಿಝ್ವಾನ್(57 ರನ್, 43 ಎಸೆತ, 5 ಬೌಂಡರಿ) ಹಾಗೂ ಬಾಬರ್ ಆಝಂ(53 ರನ್, 42 ಎಸೆತ, 7 ಬೌಂಡರಿ) ಅರ್ಧಶತಕದ ಕೊಡುಗೆ ಹಾಗೂ ಶಾಹೀನ್ ಶಾ ಅಫ್ರಿದಿ ಅವರ ಉತ್ತಮ ಬೌಲಿಂಗ್ ಸಹಾಯದಿಂದ ಪಾಕಿಸ್ತಾನ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಸೆಮಿ ಫೈನಲ್‌ನಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಗೆಲ್ಲಲು 153 ರನ್ ಗುರಿ ಪಡೆದ ಪಾಕಿಸ್ತಾನ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

ಮೊದಲ ವಿಕೆಟ್‌ನಲ್ಲಿ 12.4 ಓವರ್‌ಗಳಲ್ಲಿ 105 ರನ್ ಜೊತೆಯಾಟ ನಡೆಸಿದ ನಾಯಕ ಬಾಬರ್ ಆಝಂ ಹಾಗೂ ಮುಹಮ್ಮದ್ ರಿಝ್ವೆನ್ ಭರ್ಜರಿ ಆರಂಭ ಒದಗಿಸಿದರು. ಆಝಂ ಅರ್ಧಶತಕ ಪೂರೈಸಿದ ಬೆನ್ನಿಗೆ ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಮಿಚೆಲ್‌ಗೆ ಕ್ಯಾಚ್ ನೀಡಿದರು. 30 ರನ್(26 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿದ ಮುಹಮ್ಮದ್ ಹಾರಿಸ್ ಪಾಕ್ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಲು ನೆರವಾದರು.

ಕಿವೀಸ್ ಪರ ಹಿರಿಯ ವೇಗದ ಬೌಲರ್ ಟ್ರೆಂಟ್ ಬೌಲ್ಟ್(2-33) ಯಶಸ್ವಿ ಬೌಲರ್ ಎನಿಸಿಕೊಂಡರು.
 

Similar News