'ಮೂಕಾರ್ಜಿ ವಿಳಾಸ' ಪತ್ತೆ ಹಚ್ಚಿದವರಿಗೆ ನಗದು ಬಹುಮಾನ ಘೋಷಿಸಿದ ಉಡುಪಿ ತಾಪಂ ಆಡಳಿತಾಧಿಕಾರಿ !

ಮೇಲಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ

Update: 2022-11-09 12:24 GMT

ಉಡುಪಿ: ಮಹಿಳೆಯರಿಗೆ ದೌರ್ಜನ್ಯ ನಡೆಸುತ್ತಿದ್ದಾರೆಂಬ ಸುಳ್ಳು ಆರೋಪ ಹೊರಿಸಿ ಮೇಲಾಧಿಕಾರಿಗಳ ವಿರುದ್ಧ ಮೂಕಾರ್ಜಿ ಬರೆಯುವ ತಂಡವೊಂದು ಉಡುಪಿ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದನ್ನು ತಡೆಗಟ್ಟುವ ಪ್ರಯತ್ನ ಅಗತ್ಯವಾಗಿ ನಡೆಯಬೇಕು ಎಂದು ಉಡುಪಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಯೋಜನಾ ನಿರ್ದೇಶಕ ಬಾಬು ಎಂ. ತಿಳಿಸಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಗ್ರಾಮ ಪಂಚಾಯತ್‌ಗಳ ಸಿಬ್ಬಂದಿಗಳೇ ಕುಳಿತು ಇಂತಹ ಸುಳ್ಳು ಅರ್ಜಿಗಳನ್ನು ಬರೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ. ಇಂತಹ ಸುಳ್ಳು ಅರ್ಜಿಗಳ ವಿಳಾಸ ಹುಡುಕಿ ಕೊಟ್ಟವರಿಗೆ 10,000ರೂ. ನಗದು ಬಹುಮಾನವನ್ನು ಸಭೆಯಿಂದಲೇ ಘೋಷಿಸುತ್ತೇನೆ ಎಂದರು.

ಬಾಲ್ಯ ವಿವಾಹ ಸಮಸ್ಯೆ

18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಅಂತಹವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ನಮ್ಮ ಜಿಲ್ಲೆಯಲ್ಲಿ ಎಲ್ಲೂ ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕಿ ವೀಣಾ ವಿವೇಕಾನಂದ ತಿಳಿಸಿದರು.

ಕೆಲವರು ಉತ್ತರ ಕರ್ನಾಟಕದಲ್ಲಿ ಬಾಲ್ಯ ವಿವಾಹವಾಗಿ ಗರ್ಭಿಣಿಯಾದ ಬಳಿಕ ನಮ್ಮ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಆಗಮಿಸಿದಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ವಲಸೆ ಕಾರ್ಮಿಕರು ವಾಸವಾಗಿರುವ ಪ್ರದೇಶಗಳಿಗೆ ತೆರಳಿ ಶಿಬಿರಗಳನ್ನು ನಡೆಸಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡ ಬೇಕು. ಇದರಿಂದ ನಿಯಂತ್ರಣ ಆಗಬಹುದು ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಸೂಕ್ತ ಸ್ಪಂದಿಸವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳನ್ನು ಪ್ರತಿಸ್ಪಂದಕರಾಗಿ ಸರಕಾರ ನೇಮಕ ಮಾಡಲಾಗಿದೆ ಎಂದು ಉಪನಿರ್ದೇಶಕಿ ವೀಣಾ ವಿವೇಕಾನಂದ  ಸಭೆಗೆ ಮಾಹಿತಿ ನೀಡಿದರು.

ದೇವಸ್ಥಾನಗಳಿಗೆ ಇಂಟರ್‌ಲಾಕ್ ಹಾಕಲು ಅವಕಾಶ ಇಲ್ಲ. ಹಾಗೆ ಮಾಡಿ ದರೆ ಅದು ತಪ್ಪು ಆಗುತ್ತದೆ. ಯಾರೋ ಹೇಳಿದರು ಅಂತ ಮಾಡುವುದು ಸರಿಯಲ್ಲ ಎಂದು ಆಡಳಿತಾಧಿಕಾರಿ ಬಾಬು ಎಂ., ಪಂಚಾಯತ್‌ರಾಜ್ ಇಂಜಿ ನಿಯರ್ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್‌ಗೆ ಸೂಚನೆ ನೀಡಿದರು.

ತಾಪಂ ಆವರಣದಲ್ಲಿರುವ ಎರಡು ಅಂಗಡಿಗಳಿಂದ ಕೇವಲ 2200ರೂ. ಬಾಡಿಗೆ ವಸೂಲಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, 10 ಸಾವಿರ ರೂ. ಬಾಡಿಗೆ ಬರುವಂತಹ ಸ್ಥಳದಲ್ಲಿರುವ ಅಂಗಡಿಗಳಿಂದ ಇಷ್ಟು ಸಣ್ಣ ಮೊತ್ತ ಪಡೆಯುತ್ತಿರುವುದು ಸರಿಯಲ್ಲ. ಇಲ್ಲಿ ಯಾರ ಒತ್ತಡ ಕೆಲಸ ಮಾಡುತ್ತಿದೆಯೋ ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದರು.

553 ಹೆಕ್ಟೇರ್ ಬೆಳೆಹಾನಿ

ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಒಟ್ಟು 553 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರ ಬಗ್ಗೆ ವರದಿ ತಯಾರಿಸಿ ತಹಸೀಲ್ದಾರ್ ಅವರಿಗೆ ಸಲ್ಲಿಸಿದ್ದಾರೆ. ಅಲ್ಲಿಂದ ಫಲಾನುಭವಿಗಳಿಗೆ ಪರಿಹಾರ ಮೊತ್ತ ಪಾವತಿಯಾಗಿದೆ ಎಂದು  ಉಡುಪಿ ಕೃಷಿ ಇಲಾಖೆಯ ಅಧಿಕಾರಿ ಮೋಹನ್‌ರಾಜ್ ತಿಳಿಸಿದರು.

ನಮ್ಮಲ್ಲಿ ಸಾವಯವ ಗೊಬ್ಬರದ ದಾಸ್ತಾನು ಇಲ್ಲ. ಎಲ್ಲವೂ ಖಾಲಿಯಾಗಿದೆ. ಹೆಚ್ಚುವರಿ ಗೊಬ್ಬರ ಬೇಕಾಗಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಎಲ್ಲ ಹಣ ಪಾವತಿಯಾಗಿದೆ. ನಮ್ಮಲ್ಲಿ ಇಕೆವೈಸಿ ಶೇ.75 ಸಾಧನೆಯಾಗಿದೆ. ಈಗ ಇಕೆವೈಸಿ  ಕಡ್ಡಾಯ ಮಾಡಲಾಗಿದೆ. ಕಳೆದ ವರ್ಷ ಇಲಾಖೆಯಿಂದ 5ಲಕ್ಷ ರೂ. ಮೊತ್ತದ ಒಳಗಿನ ಒಟ್ಟು 15 ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ಥೋಮಸ್ ಬಾಂಜಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

ಭತ್ತಕ್ಕೆ ಬೆಂಬಲ ಬೆಲೆ ನೀಡದಿದ್ದರೆ ರೈತರಿಗೆ ನಷ್ಟ

ನಮ್ಮಲ್ಲಿ ಭತ್ತದ ಕಟಾವು ಕಾರ್ಯ ನಡೆಯುತ್ತಿದ್ದು, ಕಟಾವಿಗೆ ಯಂತ್ರದ ಕೊರತೆ ಇರುವುದರಿಂದ ಖಾಸಗಿಯಾಗಿ ತಮಿಳುನಾಡು, ಆಂಧ್ರಪ್ರದೇಶಗಳಿಂದ ಆಗಮಿಸಿದ ಕಟಾವು ಯಂತ್ರಗಳಿಂದ ಕಟಾವು ಮಾಡಲಾಗುತ್ತಿದೆ. ಇವರು ರೈತರಿಂದ ಹೆಚ್ಚು ಬಾಡಿಗೆ ವಸೂಲಿ ಮಾಡಿದರೆ ಅವರ ವಿರುದ್ಧ ಪೊಲೀಸರಿಗೆ ದೂರ ನೀಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿ ಮೋಹನ್‌ರಾಜ್ ತಿಳಿಸಿದರು.

ಭತ್ತಕ್ಕೆ ಬೆಂಬಲ ಬೆಲೆ ಈವರೆಗೆ ಘೋಷಣೆ ಮಾಡಿಲ್ಲ. ಎಪಿಎಂಸಿ, ಆಹಾರ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹಣ ನಿಗದಿ ಪಡಿಸಿ ಸರಕಾರಕ್ಕೆ ಕಳುಹಿಸ ಲಾಗಿದೆ. ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ರೈತರು ಭತ್ತವನ್ನು ಮಿಲ್ಲಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ. ಬೆಂಬಲ ಬೆಲೆ ಘೋಷಣೆ ಮಾಡಿದರೆ ಮಿಲ್‌ಗಳೂ ಹಣ ಜಾಸ್ತಿ ಮಾಡುತ್ತವೆ. ಇದರಿಂದ ರೈತರು ಕಡಿಮೆ ದರದಲ್ಲಿ ಮಾರಾಟ ಮಾಡುವುದು ತಪ್ಪುತ್ತದೆ ಎಂದು ಅವರು ಹೇಳಿದರು.

Similar News