ಐಸಿಸಿ ಹಣಕಾಸು, ವಾಣಿಜ್ಯ ವ್ಯವಹಾರಗಳ ಸಮಿತಿ ಮುಖ್ಯಸ್ಥರಾಗಿ ಜಯ್ ಶಾ ಆಯ್ಕೆ: ವರದಿ

Update: 2022-11-13 14:20 GMT

ಹೊಸದಿಲ್ಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ನ ಹಣಕಾಸು ಹಾಗೂ  ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಭಾವಶಾಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಳಿತ ಮಂಡಳಿಯ ಹಣಕಾಸು ಹಾಗೂ  ವಾಣಿಜ್ಯ ವ್ಯವಹಾರಗಳ ಸಮಿತಿಯು ಐಸಿಸಿ ಕಾರ್ಯಕ್ರಮಗಳಿಗೆ ಬಜೆಟ್ ಹಂಚಿಕೆಗಳನ್ನು ನಿರ್ಧರಿಸುತ್ತದೆ. ಒಟ್ಟಾರೆ ಆದಾಯದಿಂದ ಸದಸ್ಯ ರಾಷ್ಟ್ರಗಳಿಗೆ ಹಣದ ವಿತರಣೆಯನ್ನು ನೋಡಿಕೊಳ್ಳುತ್ತದೆ.

ಮೆಲ್ಬೋರ್ನ್‌ನಲ್ಲಿ ಈ ವಾರಾಂತ್ಯದಲ್ಲಿ ನಡೆಯುವ  ಐಸಿಸಿ ಮಂಡಳಿಯ ಸಭೆಗಳಿಗೆ ಒಂದು ವಾರಕ್ಕೂ ಮೊದಲು  ಜಯ್ ಶಾ ಹಾಗೂ  ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ನೇತೃತ್ವದ ಬಿಸಿಸಿಐ ತಂಡವು ಆಸ್ಟ್ರೇಲಿಯಾಕ್ಕೆ ಆಗಮಿಸಿದೆ.

ಐಸಿಸಿ ಬೋರ್ಡ್‌ನಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ಶಾ ಭಾಗವಹಿಸಲಿದ್ದಾರೆ. 2019 ರಿಂದ ಅಕ್ಟೋಬರ್‌ವರೆಗೆ ಬಿಸಿಸಿಐ ಅಧ್ಯಕ್ಷರಾದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಐಸಿಸಿ ಮಂಡಳಿಯಲ್ಲಿ ಬಿಸಿಸಿಐನ ಪ್ರತಿನಿಧಿಯಾಗಿದ್ದರು.

Similar News