ಆರೆಸ್ಸೆಸ್: ಇದ್ದದ್ದು ಇದ್ದಂತೆ

Update: 2023-06-30 05:57 GMT

ಮಹಾದೇವ ಅವರು ಭಾರತೀಯ ಸಂವಿಧಾನದ ರಕ್ಷಕನ ದೃಷ್ಟಿಕೋನದಿಂದ ಬರೆಯುತ್ತಾರೆ. ಆರೆಸ್ಸೆಸ್ ಮತ್ತು ಬಿಜೆಪಿಯ ಎಲ್ಲಾ ಮಾತುಗಾರ ನಾಯಕರು ವಾಸ್ತವದಲ್ಲಿ ಬಹುತ್ವ, ಜಾತಿ ಮತ್ತು ಲಿಂಗ ಸಮಾನತೆ, ವಾಕ್ ಸ್ವಾತಂತ್ರ್ಯ ಮತ್ತು ಒಕ್ಕೂಟದಂತಹ ಸಾಂವಿಧಾನಿಕ ಮೂಲ ತತ್ವಗಳಿಗೆ ಆಳವಾಗಿ ವಿಮುಖರಾಗಿದ್ದಾರೆ. ‘‘ಭಾರತೀಯ ಸಂವಿಧಾನವನ್ನು ಎಷ್ಟು ಹಾನಿಗೊಳಿಸುತ್ತಾರೋ, ಅವರು ಅಷ್ಟು ವಿಜಯಶಾಲಿಯಾಗುತ್ತಾರೆ’’ ಎಂದು ಸೂಚಿಸುವಷ್ಟು ಮಹಾದೇವ ಅವರು ಸ್ಪಷ್ಟವಾಗಿ ಇದನ್ನು ಹೇಳುತ್ತಾರೆ. ಮುಂದುವರಿದು, ‘‘ಸಂವಿಧಾನವನ್ನು ನಾಶಮಾಡಲು, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳು ಹೇಳಲಾಗದ ಕೃತ್ಯಗಳನ್ನು ಮಾಡುತ್ತಿವೆ. ಅವರು ಆಡಬಾರದ ಆಟಗಳನ್ನು ಆಡುತ್ತಿದ್ದಾರೆ. ರಾಜ್ಯಗಳು ಮತ್ತು ಕೇಂದ್ರ ಸರಕಾರವನ್ನು ಬಂಧಿಸುವ ಮತ್ತು ಸಂವಿಧಾನದ ಮೂಲಾಧಾರವಾಗಿರುವ ಫೆಡರಲಿಸಂ ಅನ್ನು ಉರುಳಿಸಲು ಅವರು ಯುದ್ಧ ನಡೆಸುತ್ತಿದ್ದಾರೆ’’ ಎನ್ನುತ್ತಾರೆ.


ಕನ್ನಡ ಸಾಹಿತ್ಯ ಲೋಕದಲ್ಲಿ ದೇವನೂರ ಮಹಾದೇವ ಅವರು ಮೊದಲು ಗುರುತಿಸಿಕೊಂಡದ್ದು ತಮ್ಮ ಸ್ವೋಪಜ್ಞ ಮತ್ತು ಶಕ್ತಿಯುತ ಸಣ್ಣಕಥೆಗಳು ಮತ್ತು ‘ಕುಸುಮಬಾಲೆ’ ಕಾದಂಬರಿಯ ಮೂಲಕ. ಅಂದಿನಿಂದಲೂ ಅವರು, ಸರಕಾರದ ಪ್ರಲೋಭನೆಗೆಂದೂ ಒಳಗಾಗದ ತಮ್ಮ ರಾಜಕೀಯ ಬದ್ಧತೆ ಮತ್ತು ನೈತಿಕ ದಿಟ್ಟತನಕ್ಕಾಗಿ ಹಾಗೂ ಹಿಂದುಳಿದವರು ಮತ್ತು ತುಳಿತಕ್ಕೊಳಗಾದವರ ಪರವಾದ ತಮ್ಮ ನಿಲುವುಗಳಿಗಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಧಾರ್ಮಿಕ ಸಾಮರಸ್ಯದ ಪ್ರತಿಪಾದಕರಾದ, ಬಹುತ್ವಕ್ಕೆ ಬದ್ಧರಾಗಿರುವ ಅವರು, ಇತ್ತೀಚೆಗೆ ಮೈಸೂರಿನ ಮಾರುಕಟ್ಟೆಗೆ ಹಲಾಲ್ ಮಾಂಸವನ್ನು ಖರೀದಿಸಲು, ಅದರ ಮೇಲೆ ಹಿಂದುತ್ವ ಪ್ರೇರಿತ ಪುಂಡರು ನಿರ್ಬಂಧ ಹೇರಿದ ಸನ್ನಿವೇಶ ಇದ್ದಾಗ ಹೋಗಿದ್ದರು.

ಈ ವರ್ಷ ಜುಲೈನಲ್ಲಿ, ಮಹಾದೇವ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿವರಿಸುವ ಕಿರುಹೊತ್ತಿಗೆಯನ್ನು ಪ್ರಕಟಿಸಿದರು. ಅದು ಮುದ್ರಣವಾದ ಒಂದು ವಾರದ ನಂತರ, ‘ದಿ ನ್ಯೂಸ್ ಮಿನಿಟ್’ ವೆಬ್‌ಸೈಟ್ ವರದಿ ಹೀಗಿತ್ತು: ‘ಆರೆಸ್ಸೆಸ್‌ನ ವಿಮರ್ಶಾತ್ಮಕ ಪರಿಶೋಧನೆಯಾಗಿರುವ ಈ ಪುಸ್ತಕವು ಬಿಡುಗಡೆಯಾದಾಗಿನಿಂದ ದೊಡ್ಡ ಮಟ್ಟದಲ್ಲಿ ಮಾರಾಟವಾಗುತ್ತಿದೆ ಮತ್ತು ರಾಜ್ಯದ ಬಲಪಂಥೀಯ ವ್ಯವಸ್ಥೆಯು ಪುಸ್ತಕ ಮತ್ತು ಲೇಖಕರ ಕುರಿತು ಅಪಖ್ಯಾತಿ ಹಬ್ಬಿಸಲು ತನ್ನೆಲ್ಲಾ ಪ್ರಯತ್ನವನ್ನು ನಡೆಸುವುದಕ್ಕೆ ಪ್ರೇರೇಪಿಸುತ್ತಿದೆ.’
(https://www.thenewsminute.com/article/Devanura-mahadeva-s-new-kannada-book-bestseller-and-sangh-fuming-165974)
ಆಡಳಿತಾರೂಢ ಬಿಜೆಪಿಯ ಸಂಸದರು, ಹಾಗೆಯೇ ಆ ಕಡೆಯ ‘ಬುದ್ಧಿಜೀವಿಗಳು’ ಲೇಖಕರನ್ನು ನಿಂದಿಸುವ ಮೂಲಕ ಹಗುರಾದರು. ಇರಲಿ, ಆ ಕಿರುಹೊತ್ತಿಗೆಯ ಸಾವಿರಾರು ಪ್ರತಿಗಳು ಮಾರಾಟವಾದವು. ರಾಜ್ಯದ ದೂರದ ಮೂಲೆಗಳಲ್ಲೂ ಅದು ಚರ್ಚೆಯಾಯಿತು.
ಕನ್ನಡವನ್ನು ಓದದ ನಮ್ಮಂತಹವರಿಗೆ ಸಂತೋಷದ ಸಂಗತಿಯೆಂದರೆ, ಮಹಾದೇವ ಅವರ ಪುಸ್ತಕವು ಈಗ ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಎಸ್.ಆರ್. ರಾಮಕೃಷ್ಣ ಅವರ ಇಂಗ್ಲಿಷ್ ಅನುವಾದವನ್ನು ನಾನು ಇತ್ತೀಚೆಗೆ ಓದಿದೆ. ಅದು ಶೀಘ್ರದಲ್ಲೇ ಪುಸ್ತಕವಾಗಿ ಪ್ರಕಟವಾಗಲಿದೆ.

ಮುಖ್ಯ ಪಠ್ಯವು ಹಿಂದುತ್ವವನ್ನು ಈಗ ಇರುವಂತೆ ರೂಪಿಸಿದ ಇಬ್ಬರು ವಿಚಾರವಾದಿಗಳಾದ ಎಂ.ಎಸ್. ಗೋಳ್ವಾಲ್ಕರ್ ಮತ್ತು ವಿ.ಡಿ.ಸಾವರ್ಕರ್ ಅವರ ಉದ್ಧರಣಗಳೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ನಾವು ಗೋಳ್ವಾಲ್ಕರ್ ಅವರು ಜಾತಿ ವ್ಯವಸ್ಥೆ ಮತ್ತು ಅದರ ಅಂತರ್‌ನಿರ್ಮಿತ ಶ್ರೇಣಿಗಳನ್ನು ಅವುಗಳಿಗೆ ಧರ್ಮಗ್ರಂಥದ ಅನುಮತಿ ಇದೆ ಎಂಬ ಆಧಾರದ ಮೇಲೆ ಸಮರ್ಥಿಸುವುದನ್ನು ಕಾಣುತ್ತೇವೆ. ಸಾವರ್ಕರ್ ಅವರು ಮನುಸ್ಮತಿಯ ಆರಾಧನೆಯನ್ನು ಒತ್ತಾಯಿಸುತ್ತಾರೆ, ಅದೇನೇ ಇದ್ದರೂ, ಜಾತಿ ಮತ್ತು ಲಿಂಗ ಅಸಮಾನತೆಗಳನ್ನು ಅನುಮೋದಿಸುವುದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಮಹಾದೇವ ಅವರು ಆರಿಸಿಕೊಂಡ ಸಾವರ್ಕರ್ ಉದ್ಧರಣವು ಹೇಳುವುದು ಹೀಗೆ: ‘ಮನುಸ್ಮತಿಯು ನಮ್ಮ ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಹೆಚ್ಚು ಪೂಜಿಸಬಹುದಾದ ಮತ್ತು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ-ಆಚಾರ, ಚಿಂತನೆ ಮತ್ತು ಆಚರಣೆಗಳ ಆಧಾರವಾಗಿದೆ. ಶತಮಾನಗಳಿಂದ ಈ ಗ್ರಂಥವು ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕ ಯಾನವನ್ನು ಕ್ರೋಡೀಕರಿಸಿದೆ. ಇಂದಿಗೂ ಕೋಟ್ಯಂತರ ಹಿಂದೂಗಳು ತಮ್ಮ ಜೀವನ ಮತ್ತು ಆಚರಣೆಯಲ್ಲಿ ಅನುಸರಿಸುತ್ತಿರುವ ನಿಯಮಗಳು ಮನುಸ್ಮತಿಯ ಮೇಲೆ ಆಧಾರಿತವಾಗಿವೆ. ಇಂದು ಮನುಸ್ಮತಿ ಹಿಂದೂ ಕಾನೂನಾಗಿದೆ. ಅದು ಮೂಲಭೂತವಾಗಿದೆ.’ ಗೋಳ್ವಾಲ್ಕರ್ ಅವರ ಇನ್ನೊಂದು ಉದ್ಧರಣವು ಒಕ್ಕೂಟ ವ್ಯವಸ್ಥೆಯನ್ನು ‘ವಿಷಕಾರಿ’ ಎಂದು ಕರೆಯುವ ಆರೆಸ್ಸೆಸ್ ಸಿದ್ಧಾಂತವನ್ನು ಒಳಗೊಂಡಿದ್ದು, ಒಂದು ದೇಶ, ಒಂದು ರಾಜ್ಯ, ಒಂದು ಶಾಸಕಾಂಗ, ಒಂದು ಕಾರ್ಯಾಂಗ ಎಂಬ ಏಕರೂಪದ ತತ್ವವನ್ನು ಆಧರಿಸಿದ ಏಕೀಕೃತ ರಾಜಕೀಯ ವ್ಯವಸ್ಥೆಗಾಗಿ ಒತ್ತಾಯಿಸುತ್ತದೆ.

ದೇವನೂರ ಮಹಾದೇವ ಅವರು ಆರೆಸ್ಸೆಸ್ ಚಿಂತನೆಯ ಹಿಂದಿನ ಕ್ರೂರತೆಯ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಸಂಘದ ಬೈಬಲ್ ಎನ್ನಿಸಿಕೊಂಡಿರುವುದು ಗೋಳ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಎಂಬ ಪುಸ್ತಕ, ಆದರೆ, ಮಹಾದೇವ ಬರೆದಂತೆ, ನೀವು ಈ ಪುಸ್ತಕದೊಳಗೆ ‘ಚಿಂತನೆ’ ಎಂದು ಪರಿಗಣಿಸಬಹುದಾದ ಯಾವುದಕ್ಕಾದರೂ ಹುಡುಕಿದರೆ ಖಂಡಿತವಾಗಿಯೂ ಏನೂ ಇಲ್ಲ ಎಂಬುದು ನಿಮಗೆ ಗೊತ್ತಾಗುತ್ತದೆ. ಇದು ಮನಸೋ ಇಚ್ಛೆಯ, ಅಪಾಯಕಾರಿ ನಂಬಿಕೆಗಳ ಮೊತ್ತ ಮಾತ್ರವಾಗಿದೆ. (ನಾನು ಈ ಪುಸ್ತಕವನ್ನು ಹಲವಾರು ಬಾರಿ ಓದಿದ್ದು, ಮಹಾದೇವರ ಮಾತುಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ). ಆರೆಸ್ಸೆಸ್‌ನ ಸಿದ್ಧಾಂತವು ಎಷ್ಟು ಸಂಕುಚಿತವಾಗಿದೆಯೆಂದರೆ, ಮಹಾದೇವ ಅವರು ಹೇಳುವಂತೆ, ‘‘ಇನ್ನಾರನ್ನೋ ಬಿಡಿ, ಆರೆಸ್ಸೆಸ್ ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಈ ಕೆಟ್ಟ ದೃಷ್ಟಿಕೋನವನ್ನು ಯಾವುದೇ ಸಂವೇದನಾಶೀಲ ಬ್ರಾಹ್ಮಣರೂ ಸಹ ಒಪ್ಪಿಕೊಳ್ಳುವುದಿಲ್ಲ.’’

ಮಹಾದೇವ ಅವರು ಭಾರತೀಯ ಸಂವಿಧಾನದ ರಕ್ಷಕನ ದೃಷ್ಟಿಕೋನದಿಂದ ಬರೆಯುತ್ತಾರೆ. ಆರೆಸ್ಸೆಸ್ ಮತ್ತು ಬಿಜೆಪಿಯ ಎಲ್ಲಾ ಮಾತುಗಾರ ನಾಯಕರು ವಾಸ್ತವದಲ್ಲಿ ಬಹುತ್ವ, ಜಾತಿ ಮತ್ತು ಲಿಂಗ ಸಮಾನತೆ, ವಾಕ್ ಸ್ವಾತಂತ್ರ್ಯ ಮತ್ತು ಒಕ್ಕೂಟದಂತಹ ಸಾಂವಿಧಾನಿಕ ಮೂಲ ತತ್ವಗಳಿಗೆ ಆಳವಾಗಿ ವಿಮುಖರಾಗಿದ್ದಾರೆ. ‘‘ಭಾರತೀಯ ಸಂವಿಧಾನವನ್ನು ಎಷ್ಟು ಹಾನಿಗೊಳಿಸುತ್ತಾರೋ, ಅವರು ಅಷ್ಟು ವಿಜಯಶಾಲಿಯಾಗುತ್ತಾರೆ’’ ಎಂದು ಸೂಚಿಸುವಷ್ಟು ಮಹಾದೇವ ಅವರು ಸ್ಪಷ್ಟವಾಗಿ ಇದನ್ನು ಹೇಳುತ್ತಾರೆ. ಮುಂದುವರಿದು, ‘‘ಸಂವಿಧಾನವನ್ನು ನಾಶಮಾಡಲು, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳು ಹೇಳಲಾಗದ ಕೃತ್ಯಗಳನ್ನು ಮಾಡುತ್ತಿವೆ. ಅವರು ಆಡಬಾರದ ಆಟಗಳನ್ನು ಆಡುತ್ತಿದ್ದಾರೆ. ರಾಜ್ಯಗಳು ಮತ್ತು ಕೇಂದ್ರ ಸರಕಾರವನ್ನು ಬಂಧಿಸುವ ಮತ್ತು ಸಂವಿಧಾನದ ಮೂಲಾಧಾರವಾಗಿರುವ ಫೆಡರಲಿಸಂ ಅನ್ನು ಉರುಳಿಸಲು ಅವರು ಯುದ್ಧ ನಡೆಸುತ್ತಿದ್ದಾರೆ’’ ಎನ್ನುತ್ತಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸಂವಿಧಾನದ ನಿರ್ಣಾಯಕ ಭಾಗವಾಗಿರುವ ಒಕ್ಕೂಟ ವ್ಯವಸ್ಥೆಯನ್ನು ಸಾವಿಗೆ ತಳ್ಳುವ ಮೂಲಕ, ಫೆಡರಲಿಸಂನ್ನು ಸಮಾಧಿ ಮಾಡುವ ಮೂಲಕ ಗೋಳ್ವಾಲ್ಕರ್‌ಗೆ ತನ್ನ ಗುರುದಕ್ಷಿಣೆಯನ್ನು ನೀಡಿದೆ ಎಂದು ಮಹಾದೇವ ಕಟುವಾಗಿ ಟೀಕಿಸುತ್ತಾರೆ.

ಐತಿಹಾಸಿಕ ದಾಖಲೆಯ ವಿರೂಪಗೊಳಿಸುವಿಕೆ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಗಾಗಿ ಹಿಂದಿನಿಂದಲೂ ಗೊತ್ತಾಗಿರುವ, ಈಗ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಅದನ್ನು ಇನ್ನಷ್ಟಾಗಿಸಿರುವ ಹಿಂದೂ ಬಲಪಂಥವು ಸತ್ಯದ ಬಗೆಗೆ ತೋರುವ ಗೌರವವೆಂಥದು ಎಂಬುದನ್ನೂ ಮಹಾದೇವ ಅವರು ಎತ್ತಿ ತೋರಿಸುತ್ತಾರೆ. ಅವರು ಹೇಳುವಂತೆ: ‘‘ಸುಳ್ಳು ಅವರ ಕುಲದೈವ’’. ಆರೆಸ್ಸೆಸ್ ನಿಯಂತ್ರಿಸುವ ಬಿಜೆಪಿ ಸರಕಾರಗಳು ಹೊರಡಿಸಿದ ಪಠ್ಯಪುಸ್ತಕಗಳಲ್ಲಿ ಪ್ರಚಾರ ಮಾಡಲಾದ, ನಮ್ಮ ಮಕ್ಕಳ ಮನಸ್ಸಿನಲ್ಲಿ ಹಿಂದೂಗಳಲ್ಲದ ಭಾರತೀಯರನ್ನು ದ್ವೇಷಿಸುವಂತೆ ಮಾಡುವ ವಿಷಪೂರಿತವಾದ ಅನೇಕ ಸುಳ್ಳುಗಳನ್ನು ಅವರು ಪರಿಶೀಲಿಸುತ್ತಾರೆ.

ಆರೆಸ್ಸೆಸ್ ಮತ್ತು ಬಿಜೆಪಿಯ ಹೊರತಾಗಿ ಇತರ ರಾಜಕೀಯ ಶಕ್ತಿಗಳು ಕೂಡ ಪ್ರಜಾಸತ್ತಾತ್ಮಕ ಅವನತಿಗೆ ಕಾರಣವಾಗಿವೆ ಎಂದು ಮಹಾದೇವ ಒಪ್ಪಿಕೊಂಡಿದ್ದಾರೆ. ಅವರು ಗಮನಿಸಿದಂತೆ: ‘‘ಭಾರತದ ರಾಜಕೀಯ ಪಕ್ಷಗಳನ್ನು ನೋಡಿದಾಗ, ನೀವು ಕಾಣುವ ಅಂಶಗಳು ಇವು: 1) ಏಕವ್ಯಕ್ತಿ ನೇತೃತ್ವದ ಪಕ್ಷ, (2) ಕುಟುಂಬ ನಿಯಂತ್ರಿತ ಪಕ್ಷ, (3) ಸಂವಿಧಾನ ವಿರೋಧಿ ಸಂಘಟನೆಯ ನೇತೃತ್ವದ ಪಕ್ಷ. ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಹಾನಿಕರ.’’ ಆದರೆ, ಕೇಂದ್ರದಲ್ಲಿ ಮತ್ತು ಹಲವು ಪ್ರಮುಖ ರಾಜ್ಯಗಳಲ್ಲಿಯೂ ಬಿಜೆಪಿಯೇ ಅಧಿಕಾರದಲ್ಲಿದೆ. ಸಂಘಪರಿವಾರವು ಇಂದು ಆಕ್ರಮಿಸಿಕೊಂಡಿರುವ ಪ್ರಬಲ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು, ಆರೆಸ್ಸೆಸ್‌ನ ವಿನಾಶಕಾರಿ ಸಾಮಾಜಿಕ ಸಿದ್ಧಾಂತ ಮತ್ತು ಬಿಜೆಪಿಯ ಮೂಲಕ ಅದರ ಅಪಾಯಕಾರಿ ರಾಜಕೀಯ ಅಭಿವ್ಯಕ್ತಿಯ ಮೇಲೆ ಕೇಂದ್ರೀಕರಿಸುವುದು ಮಹಾದೇವ ಅವರಿಗೆ ಅನಿವಾರ್ಯವಾಗಿತ್ತು.

ಆರೆಸ್ಸೆಸ್ ಆಜೀವ ಪ್ರಚಾರಕ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ನೀಡಿದ ಭರವಸೆಗಳಾದ ಕಪ್ಪುಹಣ ವಾಪಸಾತಿ, ಕೃಷಿ ಆದಾಯ ದ್ವಿಗುಣಗೊಳಿಸುವಿಕೆ, ಲಕ್ಷಾಂತರ ಉದ್ಯೋಗಗಳ ಸೃಷ್ಟಿಯಂತಹ ಭರವಸೆಗಳ ಬಗ್ಗೆಯೂ ಮಹಾದೇವ ಮಾತನಾಡುತ್ತಾರೆ. ಈ ಭರವಸೆಗಳು ಸಂಪೂರ್ಣವಾಗಿ ಈಡೇರಿಲ್ಲ. ಬದಲಾಗಿ, ಆರ್ಥಿಕ ಅಸಮಾನತೆಗಳು ಮತ್ತು ಸಂಪತ್ತಿನ ಅಸಮಾನತೆಗಳು ಆತಂಕಕಾರಿಯಾಗಿ ಬೆಳೆದಿವೆ. ಮೋದಿಯವರ ಪ್ರಧಾನ ಮಂತ್ರಿ ಸ್ಥಾನದ ಪ್ರಮುಖ ಫಲಾನುಭವಿಗಳು ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ (ಇಬ್ಬರೂ ಕಾತಾಳೀಯವಾಗಿ ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್‌ನಿಂದ ಬಂದವರು) ಥರದವರು.

ಆದಾಗ್ಯೂ, ಇದು ಆರೆಸ್ಸೆಸ್ ಮತ್ತು ಬಿಜೆಪಿಯ ಆರ್ಥಿಕ ವಿಮರ್ಶೆಗಿಂತ ಸೈದ್ಧಾಂತಿಕ ವಿಮರ್ಶೆಗೆ ಒತ್ತುಕೊಟ್ಟದ್ದಾಗಿದೆ. ಇದು ಆರೆಸ್ಸೆಸ್‌ನ ಸ್ವಭಾವವನ್ನು ಒಂದೆಡೆಗೆ ತರುವ ಮತ್ತು ಅವುಗಳು ಒಂದೇ ಬಗೆಯವೆಂಬುದನ್ನು ನಿರೂಪಿಸುವ ಪ್ರಖರ ಶೋಧವಾಗಿದೆ. ಅದರ ಸ್ವಾಭಾವಿಕ ನಿರಂಕುಶವಾದ, ಜಾತಿವಾದ ಮತ್ತು ಅದರ ಬಹುಸಂಖ್ಯಾತತೆಯನ್ನು ಕೆಲವೇ ಸಾವಿರ ಪದಗಳ ಮೂಲಕ ಮಹಾದೇವ ಬಯಲು ಮಾಡುತ್ತಾರೆ.

ಸೌಮ್ಯವಾಗಿ ಮಾತನಾಡುವ ಆರೆಸ್ಸೆಸ್ ಸರಸಂಘಚಾಲಕರೊಬ್ಬರ ಆಹ್ವಾನದಿಂದ ಪ್ರಭಾವಿತಗೊಂಡು ಇತ್ತೀಚೆಗೆ ಹೊಸದಿಲ್ಲಿಯ ಗಣ್ಯ ಮುಸ್ಲಿಮರ ಗುಂಪೊಂದು ಸಂಘವು ಬದಲಾಗಲು ಮುಕ್ತವಾಗಿದೆ ಎಂದು ಭಾವಿಸತೊಡಗಿದೆ. ಅವರು ದೇವನೂರ ಮಹಾದೇವ ಅವರ ಹೊತ್ತಿಗೆಯನ್ನು ಓದಬೇಕು. ಮುಸಲ್ಮಾನನಾಗಿರಲಿ, ಹಿಂದೂ ಆಗಿರಲಿ ಅಥವಾ ಇಲ್ಲದಿರಲಿ, ಆಲೋಚಿಸಬಲ್ಲ ಪ್ರತಿಯೊಬ್ಬ ಭಾರತೀಯನೂ ಓದಬೇಕು. ಮಹಾದೇವ ಅವರು ದಶಕಗಳ ಅಧ್ಯಯನ ಮತ್ತು ಅನುಭವದಿಂದ ಪಡೆದ ಕಲಿಕೆಗಳನ್ನು ಇಲ್ಲಿ ಹಿಡಿದಿಟ್ಟಿದ್ದಾರೆ. ಅವರು ಅತ್ಯಂತ ಪ್ರಭಾವಿ ಹಿಂದುತ್ವ ಸಿದ್ಧಾಂತಿಗಳ ಪಠ್ಯಗಳನ್ನು ಎಚ್ಚರಿಕೆಯಿಂದ ಓದಿದ್ದಾರೆ ಮತ್ತು ಕರ್ನಾಟಕದಲ್ಲಿ ಸಂಘಪರಿವಾರದ ಕಾರ್ಯಾಚರಣೆಗಳನ್ನು ಖುದ್ದಾಗಿ ಕಂಡಿದ್ದಾರೆ. ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳದಂತಹ ಸಂಘಟನೆಗಳು ರಾಜ್ಯದಲ್ಲಿ ಅಧಿಕಾರಶಾಹಿ, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪದ ಮೂಲಕ, ಧಾರ್ಮಿಕ ಕ್ಷೇತ್ರಗಳ ಸುತ್ತ ಹೊಸ ವಿವಾದಗಳನ್ನು ಹುಟ್ಟುಹಾಕುವ ಮೂಲಕ, ಸಾರಾಸಗಟಾಗಿ ಕೊಲೆಗಡುಕತನದ ಮೂಲಕ ಹೇಗೆ ತಮ್ಮ ಹೆಜ್ಜೆಗುರುತನ್ನು ವಿಸ್ತರಿಸಲು ಶ್ರಮಿಸುತ್ತಿವೆ ಎಂಬುದನ್ನು ಅವರು ನೋಡಿದ್ದಾರೆ. ಸಂಘವು ಕರ್ನಾಟಕದಲ್ಲಿ ಅಂತಿಮವಾಗಿ ವಿಜಯಶಾಲಿಯಾಗಿದ್ದರೆ, ಅದು ರಾಜ್ಯದ ಬಹುತ್ವ ಮತ್ತು ಮಾನವತಾವಾದಿ ಸಂಪ್ರದಾಯಗಳು, ಅದರ ಶ್ರೀಮಂತ ಸಾಹಿತ್ಯ ಮತ್ತು ಬೌದ್ಧಿಕ ಸಂಸ್ಕೃತಿಯ, ಸಾರ್ವಜನಿಕ ಜೀವನದಲ್ಲಿ ವಿವೇಚನೆ ಮತ್ತು ನಾಗರಿಕ ಸಾಧ್ಯತೆಯ ಅಂತ್ಯದ ಸಂಕೇತವಾಗಲಿದೆ ಎಂಬುದು ಮಹಾದೇವ ಅವರಿಗೆ ತಿಳಿದಿದೆ.

ಹೀಗಾಗಿಯೇ ದೇವನೂರ ಮಹಾದೇವ ಅವರು ಗಣರಾಜ್ಯದ ತಳಹದಿಯನ್ನು ಮರುಸ್ಥಾಪಿಸಲು ಮತ್ತು ಮತಾಂಧರಿಂದ ಮತ್ತಷ್ಟು ಧ್ವಂಸಗೊಳ್ಳದಂತೆ ರಕ್ಷಿಸಲು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡಲು ಒಂದು ಸೌಮ್ಯವಾದ ಕರೆಯನ್ನು ನೀಡುತ್ತಾರೆ. ಅವರ ಆ ಕರೆಯನ್ನು ಸ್ವಲ್ಪ ಉಲ್ಲೇಖಿಸುವುದು ಅಗತ್ಯ.

‘‘ಕನಿಷ್ಠ ಈಗಲಾದರೂ, ಪ್ರಗತಿಪರ ಗುಂಪುಗಳು, ಸಂಘಟನೆಗಳು ಮತ್ತು ಪಕ್ಷಗಳು ಕೇವಲ ಸಣ್ಣ ತೊರೆಗಳಂತೆ ಇರದೆ ಒಗ್ಗೂಡಿ ನದಿಯಾಗಿ ಹರಿಯಬೇಕು. ಅದನ್ನು ಮಾಡಬಲ್ಲವರಾಗಲು, ತಾವೇ ಶುದ್ಧ ಮತ್ತು ಇತರರಿಗಿಂತ ಶ್ರೇಷ್ಠರು ಎಂಬ ಅನಾರೋಗ್ಯಕರ ಮನೋಭಾವವನ್ನು ತ್ಯಜಿಸಬೇಕು. ಅಹಂಕಾರವನ್ನು ತ್ಯಜಿಸಬೇಕು ಮತ್ತು ಗುರಿಯನ್ನು ಸಾಧಿಸಲು ನೂರಾರು ಮಾರ್ಗಗಳಿವೆ ಎಂದು ಒಪ್ಪಿಕೊಳ್ಳುವ ನಮ್ರತೆಯನ್ನು ಬೆಳೆಸಿಕೊಳ್ಳಬೇಕು. ಅವರು ತಮ್ಮ ನಾಯಕತ್ವದ ಜಗಳವನ್ನು ಕೊನೆಗೊಳಿಸಬೇಕು. ತಾವು ಮುನ್ನಡೆಸಬೇಕು ಅಥವಾ ತಮ್ಮ ಪಕ್ಷ ಮುನ್ನಡೆಸಬೇಕು ಎಂದು ಸಂಕುಚಿತ ಹಠಕ್ಕೆ ಬೀಳದೆ, ಅವರು ಫೆಡರಲಿಸಂ ಮತ್ತು ಭಾರತೀಯ ಸಂವಿಧಾನ ಮತ್ತು ಭಾರತದ ಜೀವನದ ಉಸಿರಾದ ವೈವಿಧ್ಯತೆಯನ್ನು ಉಳಿಸಲು ವಿಶಾಲ ಮೈತ್ರಿಗೆ ಸೇರಬೇಕು. ಎಲ್ಲಾ ನಾಗರಿಕರು ಮತ್ತು ಸಮುದಾಯಗಳು ಭಾಗವಹಿಸುವ, ಸಹಿಷ್ಣುತೆ, ಪ್ರೀತಿ ಮತ್ತು ಮೇಲು, ಕೀಳು ಎಂಬ ಭೇದವಿಲ್ಲದ ಸಂಸ್ಕೃತಿಯನ್ನು ಸೃಷ್ಟಿಸಲು ಭಾಗವಹಿಸುವ ಪ್ರಜಾಪ್ರಭುತ್ವವನ್ನು ನಿರ್ಮಿಸಲು ಅವರು ಒಗ್ಗೂಡಬೇಕು.’’

Similar News