×
Ad

ಗಾಝಾದ ಆಚೆಗೆ

Update: 2025-10-19 11:14 IST

ಜೋ ಸ್ಲೋವೊ ಮತ್ತು ಆಕ್ಟೇವಿಯೊ ಪಾಝ್

ಕದನ ವಿರಾಮಕ್ಕೆ ಮುಂಚಿನ ವಾರಗಳಲ್ಲಿ ನಾನು ಎರಡು ಪುಸ್ತಕಗಳನ್ನು ಓದಿದೆ. ಅವೆರಡೂ ಗಾಝಾ ಕದನ ವಿರಾಮದ ನಂತರ ಏನಾಗಬಹುದು ಅಥವಾ ಬಹುಶಃ ಹೆಚ್ಚು ನಿಖರವಾಗಿ ಏನಾಗಬೇಕು ಎಂಬುದರ ಕುರಿತು ಕೆಲವು ಗಮನಾರ್ಹವಾದ ಭಾಗಗಳನ್ನು ಒಳಗೊಂಡಿವೆ. ಎರಡೂ ಪುಸ್ತಕಗಳನ್ನು 1980ರ ದಶಕದ ಆರಂಭದಲ್ಲಿ ಬರೆಯಲಾಗಿದೆ ಮತ್ತು ಎರಡೂ ಬಹಳ ವಿಶಾಲವಾದ ಕ್ಯಾನ್ವಾಸ್ ಅನ್ನು ಹೊಂದಿವೆ. ಇದರಲ್ಲಿ ಇಸ್ರೇಲಿಗರು ಮತ್ತು ಫೆಲೆಸ್ತೀನಿಯನ್ನರ ನಡುವಿನ ಸಂಘರ್ಷವು ಕೇವಲ ಒಂದು ಉಪ ಪ್ರದರ್ಶನವಾಗಿದೆ. ಆದರೂ ಅವರು ನಲವತ್ತು ವರ್ಷಗಳ ಹಿಂದೆ ಈ ಸಂಘರ್ಷದ ಬಗ್ಗೆ ಹೇಳಿದ್ದು ಇಂದಿಗೂ ನೆನಪಿಗೆ ಬರುತ್ತದೆ.

ಗಾಝಾದಲ್ಲಿ ಕೊನೆಗೂ ಕದನ ವಿರಾಮ ಜಾರಿಗೆ ಬಂದಿರುವುದರಿಂದ, ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿರುವುದರಿಂದ, ಇಸ್ರೇಲಿ ಸೈನ್ಯ ಮತ್ತು ವಾಯುಪಡೆ (ಕನಿಷ್ಠ ಈಗಲಾದರೂ) ಘೋರ ಯುದ್ಧವನ್ನು ನಿಲ್ಲಿಸಿರುವುದರಿಂದ, ಆಹಾರ, ಔಷಧಗಳು ಮತ್ತು ಇತರ ಪರಿಹಾರಗಳು ಸಂಕಷ್ಟದಲ್ಲಿರುವ ಫೆಲೆಸ್ತೀನಿಯರನ್ನು ಕಡೆಗೂ ತಲುಪಬಹುದು ಎಂಬ ನಿರಾಳತೆ ಯಾವುದೇ ದೇಶದವರು, ಯಾವುದೇ ಧರ್ಮದವರೆನ್ನದೆ ಸಂವೇದನಾಶೀಲರಾದ ಎಲ್ಲರಲ್ಲೂ ಮೂಡಲೇಬೇಕು. ಆದರೆ ಅದೇ ಸಮಯದಲ್ಲಿ, ಈ ಕದನ ವಿರಾಮವು ಕೇವಲ ಒಂದು ಸಾಧಾರಣ ಮೊದಲ ಹೆಜ್ಜೆಯಾಗಿದೆ ಮತ್ತು ಶಾಂತಿ ಮತ್ತು ನ್ಯಾಯದ ಹಾದಿಯು ಇನ್ನೂ ಕಠಿಣ ಮತ್ತು ಪ್ರಯಾಸಕರವಾಗಿದ್ದು, ಜಯಿಸಲು ಹಲವು ಅಡೆತಡೆಗಳಿವೆ ಎಂದು ಪ್ರತಿಯೊಬ್ಬ ಸಂವೇದನಾಶೀಲ ವ್ಯಕ್ತಿಗೂ ತಿಳಿದಿದೆ.

ಕದನ ವಿರಾಮಕ್ಕೆ ಮುಂಚಿನ ವಾರಗಳಲ್ಲಿ ನಾನು ಎರಡು ಪುಸ್ತಕಗಳನ್ನು ಓದಿದೆ. ಅವೆರಡೂ ಗಾಝಾ ಕದನ ವಿರಾಮದ ನಂತರ ಏನಾಗಬಹುದು ಅಥವಾ ಬಹುಶಃ ಹೆಚ್ಚು ನಿಖರವಾಗಿ ಏನಾಗಬೇಕು ಎಂಬುದರ ಕುರಿತು ಕೆಲವು ಗಮನಾರ್ಹವಾದ ಭಾಗಗಳನ್ನು ಒಳಗೊಂಡಿವೆ. ಎರಡೂ ಪುಸ್ತಕಗಳನ್ನು 1980ರ ದಶಕದ ಆರಂಭದಲ್ಲಿ ಬರೆಯಲಾಗಿದೆ ಮತ್ತು ಎರಡೂ ಬಹಳ ವಿಶಾಲವಾದ ಕ್ಯಾನ್ವಾಸ್ ಅನ್ನು ಹೊಂದಿವೆ. ಇದರಲ್ಲಿ ಇಸ್ರೇಲಿಗರು ಮತ್ತು ಫೆಲೆಸ್ತೀನಿಯನ್ನರ ನಡುವಿನ ಸಂಘರ್ಷವು ಕೇವಲ ಒಂದು ಉಪ ಪ್ರದರ್ಶನವಾಗಿದೆ. ಆದರೂ ಅವರು ನಲವತ್ತು ವರ್ಷಗಳ ಹಿಂದೆ ಈ ಸಂಘರ್ಷದ ಬಗ್ಗೆ ಹೇಳಿದ್ದು ಇಂದಿಗೂ ನೆನಪಿಗೆ ಬರುತ್ತದೆ.

ಮೊದಲ ಪುಸ್ತಕ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಜೋ ಸ್ಲೋವೊ ಅವರ ಆತ್ಮಚರಿತ್ರೆ. ಲಿಥುವೇನಿಯಾದಲ್ಲಿ ಜನಿಸಿದ ಸ್ಲೋವೊ, 1930ರ ದಶಕದಲ್ಲಿ ಯುರೋಪಿನಲ್ಲಿ ಯಹೂದಿಗಳ ಕಿರುಕುಳ ತೀವ್ರಗೊಂಡಾಗ ತನ್ನ ಕುಟುಂಬದೊಂದಿಗೆ ವಲಸೆ ಬಂದರು. ಅವರು ಜೋಹಾನ್ಸ್‌ಬರ್ಗ್‌ನಲ್ಲಿ ನೆಲೆಸಿದರು. ಅಲ್ಲಿ ಸ್ಲೋವೊ 1960ರ ದಶಕದ ಆರಂಭದವರೆಗೆ ವಾಸಿಸಿದ್ದರು. ನಂತರ ದೇಶಭ್ರಷ್ಟರಾದರು. ವರ್ಣಭೇದ ನೀತಿಯ ಪತನದ ನಂತರ, ಅವರು ದಕ್ಷಿಣ ಆಫ್ರಿಕಾಕ್ಕೆ ಮರಳಿದರು ಮತ್ತು ಕ್ಯಾನ್ಸರ್‌ನಿಂದ ಸಾಯುವ ಮೊದಲು ನೆಲ್ಸನ್ ಮಂಡೇಲಾ ಅವರ ಸಂಪುಟದಲ್ಲಿ ವಸತಿ ಸಚಿವರಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು.

ಸ್ಲೋವೊ ಅವರ ಪುಸ್ತಕವು ಮುಖ್ಯವಾಗಿ ಎರಡು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಕಮ್ಯುನಿಸ್ಟ್ ಪಕ್ಷದಲ್ಲಿನ ಅವರ ಕ್ರಿಯಾಶೀಲತೆ ಮತ್ತು ವರ್ಣಭೇದ ನೀತಿ ವಿರೋಧಿ ಹೋರಾಟ ಹಾಗೂ ಬಿಳಿಯರ ದಕ್ಷಿಣ ಆಫ್ರಿಕಾದ ಆಡಳಿತದ ಜನಾಂಗೀಯ ನಡವಳಿಕೆ ಮತ್ತು ದಂಡನಾತ್ಮಕ ವಿಧಾನಗಳು. ಆದರೆ ಈ ವಿಷಯಗಳಿಗೆ ಬರುವ ಮೊದಲು ಅವರು ಎರಡನೇ ಮಹಾಯುದ್ಧದ ಕೊನೆಯ ಹಂತದಲ್ಲಿ ಇಟಲಿಯಲ್ಲಿ ಹೇಗೆ ಸೇವೆ ಸಲ್ಲಿಸಿದರು ಎಂಬುದನ್ನು ಹೇಳುತ್ತಾರೆ. ಯುದ್ಧ ಮುಗಿದ ನಂತರ ಅವರು ಮೊದಲು ಯುರೋಪಿನಲ್ಲಿ ಇನ್ನೂ ಕೆಲವು ತಿಂಗಳುಗಳನ್ನು ಕಳೆದರು. ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ ನಂತರ ಅವರು ದಾರಿಯಲ್ಲಿ ಫೆಲೆಸ್ತೀನ್‌ನಲ್ಲಿ ನಿಲ್ಲಲು ನಿರ್ಧರಿಸಿದರು. ಒಬ್ಬ ಯಹೂದಿಯಾಗಿ, ಕಿಬ್ಬುಟ್ಜ್ ವಸಾಹತನ್ನು ನೋಡಲು ಅವರಿಗೆ ಕುತೂಹಲವಿತ್ತು.

1946ರಲ್ಲಿ ಟೆಲ್ ಅವೀವ್ ಬಳಿಯ ಕಮ್ಯೂನ್‌ಗೆ ಭೇಟಿ ನೀಡಿದ ಬಗ್ಗೆ ಸ್ಲೋವೊ ಬರೆಯುತ್ತಾರೆ. ‘ಪ್ರತ್ಯೇಕವಾಗಿ ನೋಡಿದಾಗ, ಕಿಬ್ಬುಟ್ಜ್ ಸಮಾಜವಾದಿ ಜೀವನಶೈಲಿಯದ್ದಾಗಿರುವಂತೆ ಕಾಣುತ್ತದೆ. ಪಾಶ್ಚಿಮಾತ್ಯ ಮಹಾನಗರದಲ್ಲಿ ತಮ್ಮ ಸಂಪತ್ತನ್ನು ಸಂಗ್ರಹಿಸಿದ್ದ ಶ್ರೀಮಂತ ಯಹೂದಿಗಳ ಆದರ್ಶವಾದಿ ಪುತ್ರರು ಮತ್ತು ಪುತ್ರಿಯರು ಅದರಲ್ಲಿ ಮುಖ್ಯವಾಗಿ ವಾಸಿಸುತ್ತಿದ್ದರು. ಅವರು ಇಚ್ಛಾಶಕ್ತಿ ಮತ್ತು ಮಾನವತಾವಾದದ ಮೂಲಕ ಒಂದು ಕಾರ್ಖಾನೆಯಲ್ಲಿ ಅಥವಾ ಒಂದು ಕಿಬ್ಬುಟ್ಜ್‌ನಲ್ಲಿ ಸಮಾಜವಾದವನ್ನು ತರಬಹುದು ಎಂಬ ನಂಬಿಕೆಯಿಂದ ಪ್ರೇರಿತರಾಗಿದ್ದರು’ ಎನ್ನುತ್ತಾರೆ. ‘ಅದು ಪ್ರಯೋಗದ ಉದಾತ್ತ ಭಾಗವಾಗಿತ್ತು. ಆದರೆ, ಹತ್ತಿರದಿಂದ ನೋಡಿದಾಗ ಕಂಡಿದ್ದೇನು?’ ಎಂದು ಸ್ಲೋವೊ ಬರೆದಿದ್ದಾರೆ. ‘ಈ ಕಿಬ್ಬುಟ್ಜ್ ಮತ್ತು ಇತರರ ಮೇಲಿನ ಪ್ರಾಬಲ್ಯದ ಸಿದ್ಧಾಂತವು ಫೆಲೆಸ್ತೀನ್ ಭೂಮಿಯನ್ನು ಪ್ರತಿಯೊಬ್ಬ ಯಹೂದಿ ಹಕ್ಕು ಸಾಧಿಸಬೇಕು ಮತ್ತು ಹೋರಾಡಬೇಕು ಎಂಬ ಬೈಬಲ್‌ನ ಆದೇಶವಾಗಿತ್ತು ಮತ್ತು ಇದು 5,000 ವರ್ಷಗಳಿಗೂ ಹೆಚ್ಚು ಕಾಲ ಈ ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಲಕ್ಷಾಂತರ ಜನರನ್ನು ಬೇರುಸಹಿತ ಕಿತ್ತುಹಾಕುವುದು ಮತ್ತು ಚದುರಿಸುವುದು ಎಂದಾದರೆ, ಅದು ಹೆಚ್ಚು ವಿಷಾದಕರ’ ಎಂದಿದ್ದಾರೆ.

1980ರ ದಶಕದಲ್ಲಿ ಬರೆದ ತಮ್ಮ ಆತ್ಮಚರಿತ್ರೆಯಲ್ಲಿ ಸ್ಲೋವೊ, 1940ರ ದಶಕದಲ್ಲಿ ಆ ಕಿಬ್ಬುಟ್ಜ್‌ನಲ್ಲಿನ ಸಿದ್ಧಾಂತದ ವಿಜಯದ ಪರಿಣಾಮಗಳನ್ನು ಹಿಂದಿರುಗಿ ನೋಡುತ್ತಾರೆ. ಕೆಲವೇ ವರ್ಷಗಳಲ್ಲಿ ಬಲವರ್ಧನೆ ಮತ್ತು ವಿಸ್ತರಣೆಯ ಯುದ್ಧಗಳು ಪ್ರಾರಂಭವಾದವು. ವಿಪರ್ಯಾಸವೆಂದರೆ, ಹತ್ಯಾಕಾಂಡದ ಭಯಾನಕತೆಯು ಫೆಲೆಸ್ತೀನ್‌ನ ಸ್ಥಳೀಯ ಜನರ ವಿರುದ್ಧ ನರಮೇಧದ ಕೃತ್ಯಗಳನ್ನು ಮುಂದುವರಿಸಲು ತರ್ಕಬದ್ಧತೆಯನ್ನೊದಗಿಸಿತ್ತು ಎಂದು ಬರೆಯುತ್ತಾರೆ.

ನಾನು ಓದಿದ ಎರಡನೇ ಪುಸ್ತಕದಲ್ಲಿ ಫೆಲೆಸ್ತೀನ್ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ಹೇಳಲಾಗಿದೆ. ಇದು ಮಹಾನ್ ಮೆಕ್ಸಿಕನ್ ಬರಹಗಾರ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಪ್ರಾಸಂಗಿಕವಾಗಿ ಭಾರತಕ್ಕೆ ಮಾಜಿ ಮೆಕ್ಸಿಕನ್ ರಾಯಭಾರಿಯೂ ಆಗಿದ್ದ ಆಕ್ಟೇವಿಯೊ ಪಾಝ್ ಅವರ ಪ್ರಬಂಧಗಳ ಸಂಗ್ರಹವಾಗಿದೆ. ಇದು ‘ಒನ್ ಅರ್ಥ್, ಫೋರ್ ಆರ್ ಫೈವ್ ವರ್ಲ್ಡ್ಸ್: ರಿಫ್ಲೆಕ್ಷನ್ಸ್ ಆನ್ ಕಂಟೆಂಪರರಿ ಹಿಸ್ಟರಿ’ ಎಂಬ ಹೆಸರಿನ ಪುಸ್ತಕವಾಗಿದೆ. 1983ರಲ್ಲಿ ಪ್ರಕಟವಾದ ಇದು ಉತ್ತರ ಮತ್ತು ದಕ್ಷಿಣ ಅಮೆರಿಕದಲ್ಲಿ ಹಾಗೂ ಭಾರತದಲ್ಲಿ ರಾಜಕೀಯ ಮತ್ತು ಸಂಸ್ಕೃತಿಯ ಕುರಿತ ಪ್ರಬಂಧಗಳನ್ನು ಒಳಗೊಂಡಿದೆ. ಇವು ನಿಜಕ್ಕೂ ಮಧ್ಯಪ್ರಾಚ್ಯದ ಕುರಿತಾದ ಪ್ರಬಂಧಗಳಂತೆಯೇ ಒಳನೋಟವುಳ್ಳವುಗಳಾಗಿವೆ.

1960 ಮತ್ತು 1970ರ ದಶಕಗಳಲ್ಲಿ ಫೆಲೆಸ್ತೀನಿಯನ್ ಗೆರಿಲ್ಲಾಗಳು ಇಸ್ರೇಲಿ ಕ್ರೀಡಾಪಟುಗಳನ್ನು ಕೊಂದು ಇಸ್ರೇಲಿ ವಿಮಾನಗಳನ್ನು ಅಪಹರಿಸಿದ್ದರು. ಫೆಲೆಸ್ತೀನಿಯನ್ ಸ್ವಾಯತ್ತೆಗಾಗಿ ಹೋರಾಡುವ ಗುಂಪುಗಳು ಮಾಡಿದ ಈ ಭಯೋತ್ಪಾದನಾ ಕೃತ್ಯಗಳನ್ನು ಪಾಝ್ ತಿರಸ್ಕರಿಸುತ್ತಾರೆ. ಅವರು ಒಪ್ಪಿಕೊಂಡಂತೆ, ತಮ್ಮ ಹಕ್ಕಿಗಾಗಿ ಹೋರಾಡುವ ಫೆಲೆಸ್ತೀನಿಯನ್ ವಿಧಾನಗಳು ಬಹುತೇಕ ವಿನಾಯಿತಿ ಇಲ್ಲದವಾಗಿವೆ, ಅಸಹ್ಯಕರವಾಗಿವೆ ಎಂಬುದು ನಿಜ. ಅವರ ನೀತಿಯು ಮತಾಂಧ ಮತ್ತು ನಿಷ್ಠುರವಾಗಿದೆ. ಆದರೂ, ಇದೆಲ್ಲವೂ ಎಷ್ಟೇ ಗಂಭೀರವಾಗಿದ್ದರೂ ಮತ್ತು ಇನ್ನೂ ಇದ್ದರೂ, ಅದು ಅವರ ಆಕಾಂಕ್ಷೆಯ ನ್ಯಾಯಸಮ್ಮತತೆಯನ್ನು ತಳ್ಳಿಹಾಕುವುದಿಲ್ಲ ಎಂದು ಬರೆಯುತ್ತಾರೆ. ಏಕೆಂದರೆ, 1980ರ ದಶಕದಲ್ಲಿ ಪಾಝ್ ಗಮನಿಸಿದಂತೆ, ಇಸ್ರೇಲಿ ನಿಷ್ಠುರತೆ ಎಂಬುದು ಫೆಲೆಸ್ತೀನಿಯನ್ ನಾಯಕರ ಜನಾಭಿಪ್ರಾಯ ಮತ್ತು ಮತಾಂಧತೆಯ ನಾಣ್ಯದ ಇನ್ನೊಂದು ಬದಿಯಾಗಿತ್ತು.

ಯಹೂದಿಗಳು ಮತ್ತು ಅರಬರು ಒಂದೇ ಕಾಂಡದ ಶಾಖೆಗಳು ಎಂದು ಪಾಝ್ ಗಮನಿಸುತ್ತಾರೆ. ಹಿಂದೆ ಅವರು ಸಹಬಾಳ್ವೆ ನಡೆಸಲು ಸಾಧ್ಯವಾದರೆ, ಈಗ ಅವರು ಒಬ್ಬರನ್ನೊಬ್ಬರು ಏಕೆ ಕೊಲ್ಲುತ್ತಿದ್ದಾರೆ? ಈ ಭಯಾನಕ ಹೋರಾಟದಲ್ಲಿ ಮೊಂಡುತನವು ಆತ್ಮಹತ್ಯಾ ಕುರುಡುತನವಾಗಿ ಮಾರ್ಪಟ್ಟಿದೆ. ಯಾವುದೇ ಸ್ಪರ್ಧಿಗಳು ನಿರ್ಣಾಯಕ ಗೆಲುವು ಸಾಧಿಸಲು ಅಥವಾ ಶತ್ರುವನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಯಹೂದಿಗಳು ಮತ್ತು ಫೆಲೆಸ್ತೀನಿಯನ್ನರು ಅಕ್ಕಪಕ್ಕದಲ್ಲಿ ಬದುಕುವುದು ಅನಿವಾರ್ಯ ಎಂದು ಬರೆದಿದ್ದಾರೆ.

ಪಾಝ್ ಬರೆಯುತ್ತಿದ್ದ ಸಮಯದಲ್ಲಿ ಫೆಲೆಸ್ತೀನ್‌ನಲ್ಲಿನ ಸಮಸ್ಯೆಗೆ ಸಂಭಾವ್ಯ ದ್ವಿರಾಷ್ಟ್ರ ಪರಿಹಾರದ ಬಗ್ಗೆ ಕೆಲವೇ ಜನರು ಯೋಚಿಸುತ್ತಿದ್ದರು. 1967ರಲ್ಲಿ ತಾವು ವಶಪಡಿಸಿಕೊಂಡ ಪ್ರದೇಶವನ್ನು ಬಿಟ್ಟುಕೊಡುವ ಯಾವುದೇ ಲಕ್ಷಣಗಳು ಇಸ್ರೇಲಿಗರಿಗೆ ಕಂಡುಬಂದಿಲ್ಲ. ಆದರೆ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ 1967ರ ಪೂರ್ವದ ಗಡಿಗಳಲ್ಲಿಯೂ ಇಸ್ರೇಲ್ ಅಸ್ತಿತ್ವಕ್ಕೆ ಯಾವುದೇ ಹಕ್ಕನ್ನು ಹೊಂದಿದೆ ಎಂದು ಗುರುತಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೂ ಎರಡೂ ಪಕ್ಷಗಳ ರಾಜಿಯಾಗದ ನಿಲುವು ಅನೈತಿಕ ಮತ್ತು ಕಾರ್ಯಸಾಧ್ಯವಲ್ಲ ಎಂದು ಮೆಕ್ಸಿಕನ್ ಬರಹಗಾರನಿಗೆ ಅರ್ಥವಾಗಿತ್ತು. ಈ ಭಯಾನಕ ಹೋರಾಟಕ್ಕೆ ಪರಿಹಾರವು ಮಿಲಿಟರಿಯಾಗಿರಬಾರದು, ಅದು ರಾಜಕೀಯವಾಗಿರಬೇಕು ಮತ್ತು ಶಾಂತಿ ಮತ್ತು ನ್ಯಾಯ ಎರಡನ್ನೂ ಖಾತರಿಪಡಿಸುವ ಒಂದೇ ತತ್ವವನ್ನು ಆಧರಿಸಿರಬೇಕು. ಯಹೂದಿಗಳಂತೆ ಫೆಲೆಸ್ತೀನಿಯನ್ನರು ತಾಯ್ನಾಡಿನ ಹಕ್ಕನ್ನು ಹೊಂದಿರಬೇಕು ಎಂಬುದು ಅವರಿಗೆ ಸ್ಪಷ್ಟವಾಗಿತ್ತು.

ಸಂಘರ್ಷಕ್ಕೆ ಏಕೈಕ ಶಾಶ್ವತ ಪರಿಹಾರವೆಂದರೆ ಫೆಲೆಸ್ತೀನಿಯನ್ನರು ಮತ್ತು ಯಹೂದಿಗಳು ತಮ್ಮದೇ ಎಂದು ಕರೆಯಬಹುದಾದ ತಾಯ್ನಾಡನ್ನು ಹೊಂದಿರುವುದು ಎಂದು ಪಾಝ್ ಹೇಳಿದ ಒಂದು ದಶಕದ ನಂತರ, ಫೆಲೆಸ್ತೀನಿಯನ್ ಸ್ವಾಯತ್ತೆಗಾಗಿ ಹೋರಾಡುವ ಪಿಎಲ್‌ಒ ಮತ್ತು ಇಸ್ರೇಲಿ ಸರಕಾರವು ಓಸ್ಲೋ ಒಪ್ಪಂದಗಳಿಗೆ ಸಹಿ ಹಾಕಿದವು. ಪಿಎಲ್‌ಒ ಇಸ್ರೇಲ್‌ನ ಅಸ್ತಿತ್ವದ ಹಕ್ಕನ್ನು ಗುರುತಿಸಿತು. ಇಸ್ರೇಲ್ ಫೆಲೆಸ್ತೀನಿಯನ್ನರಿಗೆ ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಪಟ್ಟಿಯಿಂದ ರಚಿಸಲಾದ ಅದರದೇ ಆದ ರಾಜ್ಯ ಬೇಕು ಎಂದು ಒಪ್ಪಿಕೊಂಡಿತು. ಕಳೆದ ಮೂವತ್ತು ವರ್ಷಗಳಲ್ಲಿ ಇಸ್ರೇಲ್ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಪ್ರಾದೇಶಿಕವಾಗಿ ಬಲದಿಂದ ಬಲಕ್ಕೆ ಸಾಗುತ್ತಿರುವಾಗ, ಓಸ್ಲೋ ಒಪ್ಪಂದಗಳಲ್ಲಿನ ಭರವಸೆಗಳನ್ನು ಕಡೆಗಣಿಸಲಾಗಿರುವುದನ್ನು ಫೆಲೆಸ್ತೀನಿಯನ್ನರು ನೋಡಿದ್ದಾರೆ. ಶಾಂತಿಪ್ರಿಯ ಇಸ್ರೇಲಿ ಪ್ರಧಾನಿ ಯಿಟ್ಜಾಕ್ ರಾಬಿನ್ ಅವರನ್ನು ಜಿಯೋನಿಸ್ಟ್ ಭಯೋತ್ಪಾದಕನೊಬ್ಬ ಹತ್ಯೆ ಮಾಡಿದ್ದು ಮೊದಲ ಹೊಡೆತವಾಗಿತ್ತು. ನಂತರ ವೆಸ್ಟ್ ಬ್ಯಾಂಕ್ ನಲ್ಲಿ ಯಹೂದಿ ವಸಾಹತುಗಳ ಸ್ಥಿರ ವಿಸ್ತರಣೆ ಬಂತು. ಇಸ್ರೇಲಿ ಸೈನ್ಯದ ಸಹಾಯ, ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ ವಸಾಹತುಗಾರರು ವಶಪಡಿಸಿಕೊಂಡ ಫೆಲೆಸ್ತೀನಿಯನ್ ಭೂಮಿಯಲ್ಲಿ ಅವುಗಳ ನಿರ್ಮಾಣವಾಯಿತು. ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಹೊಂದಿಕೊಂಡಿಲ್ಲ ಎಂಬ ಅಂಶವು ಈಗಾಗಲೇ ರಾಷ್ಟ್ರ ಸ್ಥಾನಮಾನವನ್ನು ತಡೆಯುವ ಅಂಶವಾಗಿತ್ತು. ವೆಸ್ಟ್ ಬ್ಯಾಂಕ್ ಅನ್ನು ಎರಡು ವಿಭಿನ್ನ ವಲಯಗಳಾಗಿ ಪರಿವರ್ತಿಸುವ ಮೂಲಕ ವಸಾಹತುಗಳು ಇನ್ನಷ್ಟು ಹಾನಿಕಾರಕವೆಂದು ಸಾಬೀತಾಗಿದೆ. ಸವಲತ್ತು ಪಡೆದ ಮತ್ತು ಸಂರಕ್ಷಿತ ಯಹೂದಿಗಳ ವಲಯ ಒಂದಾದರೆ, ಕಿರುಕುಳಕ್ಕೊಳಗಾದ ಫೆಲೆಸ್ತೀನಿಯನ್ನರ ವಲಯ ಇನ್ನೊಂದು. ಈ ಪರಿಸ್ಥಿತಿಯು ವರ್ಣಭೇದ ನೀತಿಯ ಯುಗದ ದಕ್ಷಿಣ ಆಫ್ರಿಕಾವನ್ನೇ ಸಂಪೂರ್ಣವಾಗಿ ಹೋಲುತ್ತದೆ.

ಯಹೂದಿ ಮತ್ತು ಫೆಲೆಸ್ತೀನಿಯನ್ ನಡುವಿನ ಸಂಘರ್ಷದ ಕುರಿತು ಜೋ ಸ್ಲೊವೊ ಅವರ ಚಿಂತನೆಗಳು ದೂರದೃಷ್ಟಿಯದ್ದಾಗಿದ್ದವು ಮತ್ತು ಬಹುಶಃ ಇನ್ನೂ ಹೆಚ್ಚಾಗಿ, 1980ರ ದಶಕದಲ್ಲಿ ಆಕ್ಟೇವಿಯೊ ಪಾಝ್ ಅವರ ಚಿಂತನೆಗಳು ಸಹ ಇದ್ದವು. ಪಾಝ್ ಈಗ ಜೀವಂತವಾಗಿದ್ದರೆ, ಹಮಾಸ್‌ನ ವಿಧಾನಗಳು ಹಿಂದಿನ ಫೆಲೆಸ್ತೀನಿಯನ್ ಗೆರಿಲ್ಲಾಗಳಿಗಿಂತ ಹೆಚ್ಚು ಮತಾಂಧ ಮತ್ತು ಅಸಹ್ಯಕರವಾಗಿವೆ ಎಂದು ಒಪ್ಪಿಕೊಂಡ ಮೊದಲ ವ್ಯಕ್ತಿ ಅವರಾಗುತ್ತಿದ್ದರು. ಆದರೂ ಅವರು ಇಸ್ರೇಲಿ ಮಿಲಿಟರಿಯ ಕ್ರೂರ ನಿಷ್ಠುರತೆಯನ್ನು ಕ್ಷಮಿಸುತ್ತಿರಲಿಲ್ಲ ಅಥವಾ ಫೆಲೆಸ್ತೀನಿಯನ್ನರ ತಮ್ಮದೇ ರಾಷ್ಟ್ರದ ಬೇಡಿಕೆಯ ನ್ಯಾಯಸಮ್ಮತತೆಯನ್ನು ನಿರಾಕರಿಸುತ್ತಿರಲಿಲ್ಲ.

ಆಕ್ಟೇವಿಯೊ ಪಾಝ್ ತಮ್ಮ ಪುಸ್ತಕದ ಒಂದು ಭಾಗದಲ್ಲಿ ಹೀಗೆ ಹೇಳುತ್ತಾರೆ: ‘ಎರಡನೇ ಮಹಾಯುದ್ಧದ ಸಮಯದಲ್ಲಿ, ಆಂಡ್ರೆ ಬ್ರೆಟನ್, ಜಗತ್ತು ಯಹೂದಿ ಜನರಿಗೆ ಪರಿಹಾರ ನೀಡಬೇಕಿದೆ ಎಂದು ಬರೆದಿದ್ದಾರೆ. ಅದನ್ನು ಓದಿದ ತಕ್ಷಣ, ಆ ಮಾತುಗಳು ನನ್ನ ಹೃದಯವನ್ನು ತಟ್ಟಿದವು. ನಲವತ್ತು ವರ್ಷಗಳ ನಂತರ ನಾನು ಹೇಳುತ್ತೇನೆ: ಇಸ್ರೇಲ್ ಫೆಲೆಸ್ತೀನಿಯನ್ನರಿಗೆ ಪರಿಹಾರ ನೀಡಬೇಕಿದೆ’.

ನಲವತ್ತು ವರ್ಷಗಳ ನಂತರ ಬರೆಯುತ್ತಿರುವಾಗ, ಪಾಝ್ ಅವರ ನಿಲುವುಗಳನ್ನು ಅನುಮೋದಿಸುತ್ತಾ ನಾನು ಎರಡು ತಿದ್ದುಪಡಿಗಳನ್ನು ಮಾಡುತ್ತೇನೆ. ಮೊದಲನೆಯದಾಗಿ, ಹತ್ಯಾಕಾಂಡದ ನಂತರ ಯಹೂದಿ ಜನರಿಗೆ ಪರಿಹಾರ ನೀಡಬೇಕಾಗಿದ್ದು ಇಡೀ ಜಗತ್ತಲ್ಲ, ಆದರೆ ನಿರ್ದಿಷ್ಟವಾಗಿ ಪಶ್ಚಿಮ ಮತ್ತು ಪೂರ್ವ ಯುರೋಪಿನ ದೇಶಗಳು. ಎರಡನೆಯದಾಗಿ, 2025ರಲ್ಲಿ ಇಸ್ರೇಲ್ ಫೆಲೆಸ್ತೀನಿಯನ್ನರಿಗೆ ಪರಿಹಾರ ನೀಡಬೇಕಾಗಿದ್ದರೂ, ಇಸ್ರೇಲ್‌ನ ವಿಸ್ತರಣಾವಾದಿ ಮತ್ತು ವಸಾಹತುಶಾಹಿ ನೀತಿಗಳನ್ನು ಬೆಂಬಲಿಸಿದ ದೇಶಗಳಾದ ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕ ಸಹ ಪರಿಹಾರ ನೀಡಬೇಕಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಮಚಂದ್ರ ಗುಹಾ

contributor

Similar News