×
Ad

ಸಹ ಇತಿಹಾಸಕಾರರನ್ನು ಶ್ಲಾಘಿಸುತ್ತಾ...

Update: 2025-11-02 09:32 IST

ನಾನು ಡಾ. ಉಮರ್ ಖಾಲಿದ್ ಅವರನ್ನು ಎಂದೂ ಭೇಟಿಯಾಗಿಲ್ಲ ಅಥವಾ ಮಾತನಾಡಿಸಿಲ್ಲ. ಆದರೂ, ಡಿಸೆಂಬರ್ 2019ರಲ್ಲಿ ಒಂದು ದಿನ, ನಾವಿಬ್ಬರೂ ತಾರತಮ್ಯದ ಕಾನೂನಿನ ವಿರುದ್ಧ ದೇಶಾದ್ಯಂತದ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ದಿಲ್ಲಿಯಲ್ಲಿ ಮತ್ತು ನಾನು ಬೆಂಗಳೂರಿನಲ್ಲಿ ಭಾಗವಹಿಸಿದ್ದೆವು. ಆ ನಂತರದ ವರ್ಷಗಳಲ್ಲಿ, ನಮ್ಮ ಜೀವನವು ತೆಗೆದುಕೊಂಡ ವಿಭಿನ್ನ ಮಾರ್ಗಗಳು ಮತ್ತು ಇದಕ್ಕೆ ಕಾರಣಗಳ ಬಗ್ಗೆ ನಾನು ಕೆಲವೊಮ್ಮೆ ಯೋಚಿಸಿದ್ದೇನೆ. ಅವರು ಮಾಡಲಾಗದಿದ್ದರೂ, ನಾನು ನನ್ನ ಸಂಶೋಧನೆ ಮತ್ತು ಬರವಣಿಗೆಯನ್ನು ಮುಂದುವರಿಸಲು ಸಾಧ್ಯವಾಗಿರುವುದು ನನ್ನ ಮೊದಲ ಹೆಸರು ಉಮರ್ ಅಲ್ಲ, ರಾಮಚಂದ್ರ ಎಂಬುದರಿಂದಾಗಿಯೇ?

ಆರಂಭಿಕ ಪ್ರೇಮ ಉಳಿದುಕೊಳ್ಳುವುದು ಅಪರೂಪ. ಆದರೆ ಆರಂಭಿಕ ವಿದ್ವತ್ ಆಸಕ್ತಿಗಳ ಆಯಸ್ಸು ಜಾಸ್ತಿ ಇರುತ್ತವೆ. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಹೈರಾಣಾಗಿದ್ದ ಅರಣ್ಯ ಸಮುದಾಯಗಳ ಇತಿಹಾಸಕಾರನಾಗಿ. ಅಂದಿನಿಂದ ನಾನು ಇತರ ದಿಕ್ಕುಗಳಿಗೆ ತಿರುಗಿದ್ದರೂ, ನಾನು ಮೊದಲು ಪ್ರಾರಂಭಿಸಿದ ಕ್ಷೇತ್ರದೊಂದಿಗೆ ಯಾವಾಗಲೂ ಸಂಪರ್ಕವನ್ನು ಉಳಿಸಿಕೊಂಡಿದ್ದೇನೆ. ನಾನು ಕಳೆದ ವಾರ ಯುವ ವಿದ್ವಾಂಸರೊಬ್ಬರ ಡಾಕ್ಟರೇಟ್ ಪ್ರಬಂಧವನ್ನು ಓದಿದೆ. ಅದು ಈಗಿನ ಜಾರ್ಖಂಡ್ ರಾಜ್ಯದ ಸಾಮಾಜಿಕ ಮತ್ತು ಪರಿಸರ ಇತಿಹಾಸವನ್ನು ಪರಿಶೋಧಿಸುತ್ತದೆ. ಪ್ರಬಂಧ ಎಷ್ಟು ಉತ್ತಮವಾಗಿದೆ ಎಂದು ನನಗೆ ತುಂಬಾ ಆಶ್ಚರ್ಯವಾಯಿತು. ನಾನು ಅದರ ಬಗ್ಗೆ ಈ ಅಂಕಣದಲ್ಲಿ ಬರೆಯಬೇಕೆಂದು ಭಾವಿಸಿದೆ.

ಪ್ರಬಂಧವು ಬ್ರಿಟಿಷ್ ಆಳ್ವಿಕೆಯಲ್ಲಿ ಸಿಂಗ್‌ಭೂಮ್ ಪ್ರದೇಶದಲ್ಲಿ ಆದಿವಾಸಿ ಸಮಾಜದ ರೂಪಾಂತರಗಳ ಮೇಲೆ ಗಮನವಿಟ್ಟಿದೆ. ಮೊದಲು ಈಸ್ಟ್ ಇಂಡಿಯಾ ಕಂಪೆನಿಯು ಈ ಪ್ರದೇಶದ ಮೇಲೆ ಮಿಲಿಟರಿ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಹೇಗೆ ಸಾಧಿಸಿತು ಎಂಬುದನ್ನು ಇದು ದಾಖಲಿಸುತ್ತದೆ. ನಂತರ ವಸಾಹತುಶಾಹಿಯು ಸಿಂಗ್‌ಭೂಮ್‌ನ ನೈಸರ್ಗಿಕ ಸನ್ನಿವೇಶ, ಕಾನೂನು ಚೌಕಟ್ಟು ಮತ್ತು ಆರ್ಥಿಕ ಮತ್ತು ರಾಜಕೀಯ ರಚನೆಗಳನ್ನು ಆಮೂಲಾಗ್ರವಾಗಿ ಮರುರೂಪಿಸಿತು ಎಂಬುದನ್ನು ನೋಡುತ್ತದೆ. ವಸಾಹತುಶಾಹಿ ಅರಣ್ಯ ನೀತಿಯ ವಾಣಿಜ್ಯ ಪಕ್ಷಪಾತಗಳು, ಹೊಸ ವ್ಯವಸ್ಥೆಯೊಡನೆ ಮಾತುಕತೆ ನಡೆಸಬೇಕಾದ ಗ್ರಾಮ ಮುಖ್ಯಸ್ಥರ ಬದಲಾಗುತ್ತಿರುವ ಸ್ಥಿತಿ ಮತ್ತು ವಸಾಹತುಶಾಹಿ ಆಳ್ವಿಕೆಯು ತಮ್ಮ ಜೀವನದಲ್ಲಿ ಮಾಡಿದ ರೂಪಾಂತರಕ್ಕೆ ಬುಡಕಟ್ಟು ಸಮುದಾಯಗಳ ಪ್ರತಿಕ್ರಿಯೆಗಳು ಈ ಪ್ರಬಂಧದ ಪ್ರಮುಖ ವಿಷಯಗಳಾಗಿವೆ. ಪರಿಸರ ವಿಜ್ಞಾನ, ಸಮಾಜ ಮತ್ತು ರಾಜಕೀಯದ ಮೇಲೆ ಕೇಂದ್ರೀಕರಿಸುವಾಗ, ವಿದ್ವಾಂಸರು ಬೌದ್ಧಿಕ ಇತಿಹಾಸಕ್ಕೂ ಸರಿಯಾದ ಗಮನ ನೀಡುತ್ತಾರೆ. ಸಿಂಗ್‌ಭೂಮ್‌ನ ಬುಡಕಟ್ಟು ಜನಾಂಗದವರ ಕುರಿತು ಯುರೋಪಿಯನ್ ಅಧಿಕಾರಿಗಳು ಮತ್ತು ಭಾರತೀಯ ಮಾನವಶಾಸ್ತ್ರಜ್ಞರ ಕೃತಿಗಳ ತೀಕ್ಷ್ಣ ವಿಶ್ಲೇಷಣೆಗಳನ್ನು ಕೂಡ ಇಲ್ಲಿ ಅವರು ಉಲ್ಲೇಖಿಸುತ್ತಾರೆ.

ಈ ಯುವ ಇತಿಹಾಸಕಾರರ ಕೃತಿಯು ತೋರಿಸಿದ ಆರು ಮಹತ್ವದ ಗುಣಲಕ್ಷಣಗಳನ್ನು ನಾನು ಚರ್ಚಿಸುತ್ತೇನೆ:

ಮೊದಲನೆಯದಾಗಿ, ಜಾರ್ಖಂಡ್‌ನ ಬುಡಕಟ್ಟು ಜನಾಂಗ ಅಥವಾ ಭಾರತದ ಇತರ ಭಾಗಗಳ ಬುಡಕಟ್ಟು ಜನಾಂಗದವರ ಕುರಿತ ಹಿಂದಿನ ಬರಹಗಾರರ ಬರವಣಿಗೆಗಳ ಆಳ ಅಧ್ಯಯನ.

ಎರಡನೆಯದಾಗಿ, ವ್ಯಾಪಕವಾಗಿ ಪ್ರಾಥಮಿಕ ಮೂಲಗಳನ್ನು ಪತ್ತೆಹಚ್ಚುವ ಮತ್ತು ಬಳಸುವ ಸಾಮರ್ಥ್ಯ. ಈ ಪ್ರಬಂಧವು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ದಾಖಲೆಗಳಲ್ಲಿ ಮತ್ತು ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಪ್ರಕಟವಾದ ಪ್ರಬಂಧಗಳು ಮತ್ತು ಪುಸ್ತಕಗಳ ದಿಗ್ಭ್ರಮೆಗೊಳಿಸುವ ಮಟ್ಟದ ಸಂಶೋಧನೆಯನ್ನು ಆಧರಿಸಿದೆ.

ಮೂರನೆಯದಾಗಿ, ಅಧ್ಯಯನದಲ್ಲಿರುವ ಪ್ರದೇಶದಲ್ಲಿ ಕ್ಷೇತ್ರಕಾರ್ಯದ ಮೂಲಕ ಪೂರಕ ಜ್ಞಾನವನ್ನು ಪಡೆಯುವ ಇಚ್ಛೆ. ಒಬ್ಬ ಇತಿಹಾಸಕಾರನಿಗೆ ದಪ್ಪ ಬೂಟುಗಳು ಮತ್ತು ದಪ್ಪ ನೋಟ್‌ಬುಕ್‌ಗಳು ಬೇಕಾಗುತ್ತವೆ ಎಂಬ ಫ್ರೆಂಚ್ ಇತಿಹಾಸಕಾರ ಮಾರ್ಕ್ ಬ್ಲೋಚ್ ಅವರ ಮಾತನ್ನು ಈ ಯುವ ವಿದ್ವಾಂಸ ಖಂಡಿತ ಗ್ರಹಿಸಿದಂತೆ ಕಾಣುತ್ತದೆ.

ನಾಲ್ಕನೆಯದಾಗಿ, ತಮ್ಮ ವಾದಗಳನ್ನು ವಿವರಿಸಲು ಪ್ರಾಥಮಿಕ ಮೂಲಗಳಲ್ಲಿನ ಮಹತ್ವದ ಉಲ್ಲೇಖಗಳತ್ತ ಗಮನ ಹರಿಸುವುದು. ಉದಾಹರಣೆಗೆ, 19ನೇ ಶತಮಾನದ ಬ್ರಿಟಿಷ್ ಅಧಿಕಾರಿಯೊಬ್ಬರು ಕಾಡುಗಳಲ್ಲಿ ಬೇಟೆಯಾಡುವ ಬಗ್ಗೆ ಬರೆದಿದ್ದಾರೆ ಮತ್ತು ಸ್ಪಷ್ಟವಾಗಿ ಯಾವಾಗಲೂ ಬದಲಾಗದ ಬುಡಕಟ್ಟು ಜೀವನದ ವರ್ಣರಂಜಿತ ಚಿತ್ರಣವನ್ನು ಕೊಟ್ಟಿದ್ದಾರೆ: ‘ಹೂವುಗಳು ಮತ್ತು ಗರಿಗಳಿಂದ ಅಲಂಕರಿಸಲ್ಪಟ್ಟ, ಪಿತ್‌ನಿಂದ ಮಾಡಿದ ಸ್ಟ್ರೀಮರ್‌ಗಳಿಂದ ಅಲಂಕರಿಸಲ್ಪಟ್ಟ ಕೊಳಲುಗಳೊಂದಿಗೆ, ಬೊರಾಹ್‌ಭೂಮ್‌ನ ಲಕ್ಕಿಸಿನ್ನೀ ಬೆಟ್ಟಗಳಿಂದ ಬಂದ ಕಾಡು ಕುರ್ರಿಯಾಗಳು ಅಥವಾ ಬೆಟ್ಟದ ಮನುಷ್ಯರೊಂದಿಗೆ ಸದಾ ನೃತ್ಯ ಮಾಡುವ ಮತ್ತು ಹಾಡುವ ಸೊಂಟಾಲ್‌ಗಳು ಇಲ್ಲಿವೆ; ಕೂರ್ಮಿಗಳು, ಟೌಂಟಿಗಳು, ಸೂಂಡೀಸ್, ಗ್ವಾಲಾಗಳು, ಭೂಮಿಜೆಗಳು ಮತ್ತು ಇತರರು, ಸೊನರಸ್ ಡಮ್ಮಾಸ್ ಅಥವಾ ಕೆಟಲ್ ಡ್ರಮ್‌ಗಳು ಮತ್ತಿತರ ಸಂಗೀತದೊಂದಿಗೆ, ಕತ್ತಿಗಳು, ಬುಲ್ವಾಗಳು ಮತ್ತು ಎಲ್ಲಾ ರೀತಿಯ ಬಿಲ್ಲುಗಳು ಹಾಗೂ ಬಾಣಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದಾರೆ; ಹೋಸ್, ಸರಳ ಮತ್ತು ಆಡಂಬರವಿಲ್ಲದ, ಆದರೆ ಭಾರವಾದ ಆಟದ ಚೀಲಗಳನ್ನು ಹೊಂದಿದ್ದಾರೆ...’

ಒಂದು ಶತಮಾನದ ನಂತರ, ಆರ್ಕೈವ್‌ನಲ್ಲಿರುವ ಫೈಲ್‌ನಿಂದ ಪಡೆಯಲಾದ ಮತ್ತೊಂದು ಉಲ್ಲೇಖದಲ್ಲಿ 1920ರ ದಶಕದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದವರೊಬ್ಬರು ಹೀಗೆ ಹೇಳುತ್ತಾರೆ: ‘ಸ್ವರಾಜ್ಯ ಈಗ ಸಿದ್ಧಿಸಿದೆ ಮತ್ತು ಗಾಂಧಿ ಅದರ ಮುಖ್ಯಸ್ಥರಾಗಿದ್ದಾರೆ. ಇಂಗ್ಲಿಷರು ದೇಶ ಬಿಟ್ಟು ಹೋಗುತ್ತಿದ್ದಾರೆ ಮತ್ತು ಚೈಬಾಸಾದಲ್ಲಿರುವ ಕೆಲವೇ ಕೆಲವು ಇಂಗ್ಲಿಷ್ ಜನರು ಮೂರು ಅಥವಾ ನಾಲ್ಕು ತಿಂಗಳಲ್ಲಿ ಓಡಿಹೋಗುತ್ತಾರೆ.’

ಐದನೆಯದಾಗಿ, ಕಡಿಮೆ ಶೈಕ್ಷಣಿಕ ಪರಿಭಾಷೆಯೊಂದಿಗೆ ಸ್ಪಷ್ಟ ಮತ್ತು ಆಗಾಗ ಆಕರ್ಷಕ ಗದ್ಯದಲ್ಲಿ ವಿಷಯವನ್ನು ನಿರೂಪಿಸುವ ಸಾಮರ್ಥ್ಯ.

ಆರನೆಯದಾಗಿ, ಅವರ ವಾದಗಳ ಸೂಕ್ಷ್ಮ ಮತ್ತು ಸ್ಪಷ್ಟ ವಿಸ್ತರಣೆ. ವಸಾಹತುಶಾಹಿ ಅಧಿಕಾರಿಗಳು ಮತ್ತು ಸಮಕಾಲೀನ ಕಾರ್ಯಕರ್ತರಿಗೆ ಸಾಮಾನ್ಯವಾದ ಬುಡಕಟ್ಟು ಜೀವನದ ಸ್ಟೀರಿಯೊಟೈಪ್‌ಗಳನ್ನು ತರದಂತೆ ವಿಶೇಷವಾಗಿ ಜಾಗರೂಕತೆ ವಹಿಸಲಾಗಿದೆ. ವಸಾಹತುಶಾಹಿ ಯುಗದಲ್ಲಿ ಬುಡಕಟ್ಟು ಪ್ರತಿಭಟನೆಗಳು ಮತ್ತು ವರ್ತಮಾನದ ನಡುವೆ ಗೆರೆಯೆಳೆದಂತೆ ಹೇಳುವ ಬರಹಗಳ ಬಗ್ಗೆ ಅವರು ಚಿಂತನಶೀಲ ವಿಮರ್ಶೆಯನ್ನು ಮಂಡಿಸುತ್ತಾರೆ. ‘ಆದಿವಾಸಿಗಳ ಹಿಂದಿನ ಸಹಜವಾದ ಪದ್ಧತಿ ಆಧಾರಿತ ಪ್ರಪಂಚವನ್ನು ಆಧುನಿಕ ಸರಕಾರವು ತೊಂದರೆಗೆ ಈಡುಮಾಡಿದೆ’ ಎಂದು ಬರೆಯುತ್ತಾರೆ. ಈ ಬರಹಗಳು ಆದಿವಾಸಿಗಳನ್ನು ಶತಮಾನಗಳಷ್ಟು ಹಳೆಯದಾದ ಮತ್ತು ಬದಲಾಗದ ಪದ್ಧತಿಗಳು ಮತ್ತು ಸಂಪ್ರದಾಯಗಳ ಮೂಲಕ ಕಾರ್ಯನಿರ್ವಹಿಸುವ ಏಕರೂಪದ ಸಮುದಾಯಗಳಾಗಿ ಇಡುವಲ್ಲಿ ಹೇಗೆ ತಪ್ಪು ಮಾಡಿವೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ. ಮತ್ತೊಂದೆಡೆ, ಅವರ ಸ್ವಂತ ಸಂಶೋಧನೆಯು ಅನೇಕ ಆದಿವಾಸಿಗಳು ಸರಕಾರದ ಆಕ್ರಮಣಗಳನ್ನು ವಿರೋಧಿಸುತ್ತಾರೆ ಎಂದು ತೋರಿಸುತ್ತದೆ. ಆದರೆ ಇತರ ಕೆಲವು ಗುಂಪುಗಳು ಸಹಕರಿಸುತ್ತವೆ, ಕೆಲವರು ತಮ್ಮ ಸಮುದಾಯಗಳಲ್ಲಿನ ಇತರರೊಂದಿಗೆ ಹೋಲಿಸಿದರೆ ತಮ್ಮ ಸ್ಥಾನವನ್ನು ಹೆಚ್ಚಿಸಲು ಸಂಧಾನ ನಡೆಸುತ್ತಾರೆ ಎಂದು ಬರೆಯುತ್ತಾರೆ.

ಆದರೂ, ಈ ಪ್ರಬಂಧವು ದೋಷಗಳಿಂದ ಹೊರತಾಗಿಲ್ಲ. ಭಾರತೀಯ ಮಾನವಶಾಸ್ತ್ರದ ಇತಿಹಾಸದ ಕುರಿತು ಟಿ.ಎನ್. ಮದನ್ ಅವರ ಬರಹಗಳಂತಹ ಅವರ ಕೆಲಸಕ್ಕೆ ನೇರವಾಗಿ ಸಂಬಂಧಿಸಿದ ಕೆಲವು ನಿರ್ಣಾಯಕ ಎರಡನೇ ಮೂಲಗಳನ್ನು ಕಡೆಗಣಿಸಲಾಗಿದೆ. ಅವರು ಜಾನಪದ ಮತ್ತು ಮೌಖಿಕ ಇತಿಹಾಸವನ್ನು ಹೆಚ್ಚು ಬಳಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನನಗೆ ಅನ್ನಿಸಿದೆ ಮತ್ತು ಪ್ರಾಥಮಿಕ ಮೂಲಗಳಿಂದ ಬಂದ ಎಲ್ಲಾ ಉಲ್ಲೇಖಗಳು ನಾನು ಈ ಅಂಕಣದಲ್ಲಿ ಹೈಲೈಟ್ ಮಾಡಿದಷ್ಟನ್ನು ಹೇಳುತ್ತಿಲ್ಲ. ಕೆಲವು ತುಂಬಾ ಉದ್ದವಾಗಿವೆ ಮತ್ತು ನಿರೂಪಣೆಯನ್ನು ದುರ್ಬಲಗೊಳಿಸಿವೆ.

ಅದೇನೇ ಇದ್ದರೂ, ನಾನು ಓದಿದ ಭಾರತೀಯರೊಬ್ಬರ ಅತ್ಯಂತ ಮಹತ್ವದ ಡಾಕ್ಟರೇಟ್ ಪ್ರಬಂಧಗಳಲ್ಲಿ ಇದು ಒಂದು. ಸಾಮಾನ್ಯವಾಗಿ ಈ ಗುಣಮಟ್ಟದ ಪ್ರಬಂಧವನ್ನು ಕೆಲವು ವರ್ಷಗಳ ನಂತರ ಪುಸ್ತಕವಾಗಿ ಪ್ರಕಟಿಸಲಾಗುತ್ತದೆ. ಅದರ ನ್ಯೂನತೆಗಳನ್ನು ಒಳ್ಳೆಯ ಸಂಪಾದಕರು ಸರಿಪಡಿಸುತ್ತಾರೆ. ಪರಿಸರ/ಸಾಮಾಜಿಕ ಇತಿಹಾಸದ ಈ ಕ್ಷೇತ್ರದಲ್ಲಿ ಹೋಲಿಸಬಹುದಾದ ಕೃತಿಗಳಾದ ನಂದಿನಿ ಸುಂದರ್ ಅವರ Subalterns and Sovereigns ಮತ್ತು ಮಹೇಶ್ ರಂಗರಾಜನ್ ಅವರ Fencing the Forest ಅನ್ನು ನೋಡಿದರೆ, ಅವೆರಡೂ ಪ್ರಬಂಧ ಸಲ್ಲಿಕೆ ಮತ್ತು ಪುಸ್ತಕ ಪ್ರಕಟಣೆಯ ನಡುವೆ ಕೆಲವು ವರ್ಷಗಳೇ ಆಗಿಹೋಗಿದ್ದವು. ಡಾಕ್ಟರೇಟ್ ಪ್ರಬಂಧಗಳಾಗಿ ಬರೆಯಲಾರಂಭಿಸಿದ್ದ ಭವಾನಿ ರಾಮನ್, ಆದಿತ್ಯ ಬಾಲಸುಬ್ರಮಣಿಯನ್, ನಿಖಿಲ್ ಮೆನನ್ ಮತ್ತು ದಿನ್ಯಾರ್ ಪಟೇಲ್ ಅವರ ಇತ್ತೀಚಿನ ಐತಿಹಾಸಿಕ ಪ್ರಬಂಧಗಳಿಗೂ ಇದೇ ರೀತಿಯ ಸಮಯದ ವಿಳಂಬವಾಗಿದೆ.

ಈ ಪುಸ್ತಕಗಳನ್ನು ವ್ಯಾಪಕವಾಗಿ ಓದಲಾಗಿದೆ ಮತ್ತು ಮೆಚ್ಚಲಾಗಿದೆ. ನಾನು ಈಗಷ್ಟೇ ಓದಿದ ಪ್ರಬಂಧವು ಪುಸ್ತಕವಾಗಿ ಪ್ರಕಟವಾದಾಗ ವ್ಯಾಪಕವಾಗಿ ಮೆಚ್ಚುಗೆ ಪಡೆಯುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ದುರಂತವೆಂದರೆ, ಪ್ರಬಂಧವನ್ನು 2018 ರಲ್ಲಿ ಸಲ್ಲಿಸಲಾಗಿದ್ದರೂ, ಅದು ಇನ್ನೂ ಪುಸ್ತಕ ರೂಪದಲ್ಲಿ ಕಾಣಿಸಿಕೊಂಡಿಲ್ಲ. ಏಕೆಂದರೆ ವಿದ್ವಾಂಸರ ಹೆಸರು ಉಮರ್ ಖಾಲಿದ್. ಕ್ರೂರ ಮತ್ತು ಶಿಕ್ಷಾರ್ಹ ಸರಕಾರ, ವಿಳಂಬ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸೇರಿ, ಈ ಪ್ರತಿಭಾನ್ವಿತ ಇತಿಹಾಸಕಾರನನ್ನು ಜಾಮೀನು ಇಲ್ಲದೆ ಮತ್ತು ಔಪಚಾರಿಕ ಆರೋಪಗಳನ್ನು ದಾಖಲಿಸದೆ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಇರಿಸಿದೆ.

ನಾನು ಡಾ. ಉಮರ್ ಖಾಲಿದ್ ಅವರನ್ನು ಎಂದೂ ಭೇಟಿಯಾಗಿಲ್ಲ ಅಥವಾ ಮಾತನಾಡಿಸಿಲ್ಲ. ಆದರೂ, ಡಿಸೆಂಬರ್ 2019ರಲ್ಲಿ ಒಂದು ದಿನ, ನಾವಿಬ್ಬರೂ ತಾರತಮ್ಯದ ಕಾನೂನಿನ ವಿರುದ್ಧ ದೇಶಾದ್ಯಂತದ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ದಿಲ್ಲಿಯಲ್ಲಿ ಮತ್ತು ನಾನು ಬೆಂಗಳೂರಿನಲ್ಲಿ ಭಾಗವಹಿಸಿದ್ದೆವು. ಆ ನಂತರದ ವರ್ಷಗಳಲ್ಲಿ, ನಮ್ಮ ಜೀವನವು ತೆಗೆದುಕೊಂಡ ವಿಭಿನ್ನ ಮಾರ್ಗಗಳು ಮತ್ತು ಇದಕ್ಕೆ ಕಾರಣಗಳ ಬಗ್ಗೆ ನಾನು ಕೆಲವೊಮ್ಮೆ ಯೋಚಿಸಿದ್ದೇನೆ. ಅವರು ಮಾಡಲಾಗದಿದ್ದರೂ, ನಾನು ನನ್ನ ಸಂಶೋಧನೆ ಮತ್ತು ಬರವಣಿಗೆಯನ್ನು ಮುಂದುವರಿಸಲು ಸಾಧ್ಯವಾಗಿರುವುದು ನನ್ನ ಮೊದಲ ಹೆಸರು ಉಮರ್ ಅಲ್ಲ, ರಾಮಚಂದ್ರ ಎಂಬುದರಿಂದಾಗಿಯೆ?

ನಾನು ಇಲ್ಲಿ ಡಾ. ಖಾಲಿದ್ ಬಗ್ಗೆ ಬರೆದಿದ್ದೇನೆ. ಏಕೆಂದರೆ, ಆಧುನಿಕ ಭಾರತದ ಇತಿಹಾಸಕಾರನಾಗಿ, ಅವರ ಪಾಂಡಿತ್ಯಪೂರ್ಣ ಕೆಲಸದ ಆಳ ಮತ್ತು ಶ್ರೀಮಂತಿಕೆಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಈ ಅಂಕಣವನ್ನು ಮುಗಿಸುತ್ತಿರುವಾಗ, ತಮ್ಮ ರಾಜಕೀಯ ಯಜಮಾನರ ಆದೇಶದ ಮೇರೆಗೆ ಪೊಲೀಸರು ತರಾತುರಿಯಲ್ಲಿ ದಾಖಲಿಸಿದ ಸಂಶಯಾಸ್ಪದ ಆರೋಪಗಳ ಅಡಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವ ಅನೇಕ ಉತ್ತಮ, ಪ್ರಾಮಾಣಿಕ ಪುರುಷರು ಮತ್ತು ಮಹಿಳೆಯರಲ್ಲಿ ಅವರು ಒಬ್ಬರು ಎಂಬುದನ್ನು ನಾನು ಗಮನಿಸಬೇಕು. ಈ ಭಾರತೀಯರಲ್ಲಿ ಕೆಲವರು ವಿದ್ವಾಂಸರು ಮತ್ತು ಸಂಶೋಧಕರು ಕೂಡ ಆಗಿದ್ದಾರೆ. ಇನ್ನು ಕೆಲವರು ಸಮಾಜ ಕಾರ್ಯಕರ್ತರು ಮತ್ತು ನಾಗರಿಕ ಸಮಾಜ ಕಾರ್ಯಕರ್ತರು, ಅವರು ತಮ್ಮ ಜೀವನ ಮತ್ತು ಕೆಲಸದಲ್ಲಿ ಅಹಿಂಸೆ ಮತ್ತು ಭಾರತೀಯ ಸಂವಿಧಾನದ ಸ್ಥಾಪಕ ಮೌಲ್ಯಗಳಿಗೆ ದೃಢವಾಗಿ ಬದ್ಧರಾಗಿದ್ದಾರೆಂದು ತೋರಿಸಿದ್ದಾರೆ. ಅವರು ಆಳುವ ಆಡಳಿತದ ಸರ್ವಾಧಿಕಾರಿ ಮತ್ತು ಬಹುಸಂಖ್ಯಾತ ಪ್ರವೃತ್ತಿಗಳಿಗೆ ಬಲಿಯಾಗುವಂತೆ ಮಾಡಿರುವುದು ಬಹುತ್ವ ಮತ್ತು ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆಯೇ ಹೊರತು ಬೇರೇನೂ ಅಲ್ಲ. ನಮ್ಮ ಈ ಗಮನಾರ್ಹ ಯುವ ಭಾರತೀಯರು ನಮ್ಮ ಗಣರಾಜ್ಯದ ಜೀವನಕ್ಕೆ ಅಪಾರ ಕೊಡುಗೆ ನೀಡಬಹುದಾದಾಗ, ತಮ್ಮ ಅತ್ಯುತ್ತಮ ವರ್ಷಗಳನ್ನು ಕತ್ತಲೆಯಾದ, ಕೊಳಕು ಮತ್ತು ಅನಾರೋಗ್ಯಕರ ಜೈಲುಗಳಲ್ಲಿ ಕಳೆಯುತ್ತಿದ್ದಾರೆ. ನಮ್ಮ ನ್ಯಾಯಾಧೀಶರು ಪ್ರಸ್ತುತ ಅವರೆಲ್ಲರಿಗೂ ನಿರಾಕರಿಸಲ್ಪಟ್ಟಿರುವ ಸ್ವಾತಂತ್ರ್ಯವನ್ನು ನೀಡುವ ಸಭ್ಯತೆ ಮತ್ತು ಧೈರ್ಯವನ್ನು ಕಂಡುಕೊಳ್ಳುವ ಸಮಯ ಖಂಡಿತವಾಗಿಯೂ ಮೀರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಮಚಂದ್ರ ಗುಹಾ

contributor

Similar News