ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ: ಅಶ್ವತ್ಥ್ ನಾರಾಯಣ ಸ್ಪಷ್ಟನೆ

►ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಪ್ರಕರಣ ►ಬಾಡಿಗೆಗೆ ಜನ ಬೇಕಾಗೋದು ಕಾರ್ಯಕರ್ತರಿಲ್ಲದ ಕಾಂಗ್ರೆಸ್‌ಗೆ

Update: 2022-11-19 09:58 GMT

ಮಂಗಳೂರು, ನ.19: ಬಾಡಿಗೆಗೆ ಜನ ಬೇಕಾಗೋದು ಕಾಂಗ್ರೆಸ್ ಪಕ್ಷಕ್ಕೆ. ಅದು ಕಾರ್ಯಕರ್ತರಿಲ್ಲದ ಪಕ್ಷ. ಚುನಾವಣಾ ಅಕ್ರಮಗಳನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿರುವ ಪಕ್ಷವದು. ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗೆ ಅದರ  ಅವಶ್ಯಕತೆಯು ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಪ್ರಕರಣದಲ್ಲಿ ಸಚಿವರ ವಿರುದ್ಧದ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಚಿಲುಮೆ ಸಂಸ್ಥೆಯವರು ಗೊತ್ತಿಲ್ಲ ಅಂತ ಹೇಳಲ್ಲ. ಅವರು ನನ್ನ ಪರಿಚಯಸ್ಥರೇ. ಅವರನ್ನು ನಾನು ಯಾರಿಗೂ ಸಜೆಸ್ಟ್ ಮಾಡಿಲ್ಲ, ನಾನು ಬಳಕೆಯೂ ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. ನನ್ನ ಕ್ಷೇತ್ರ ಸಂಬಂಧ ಯಾವುದಾದರೂ ಬಂದಿದೆಯಾ ಎಂದು ಪ್ರಶ್ನಿಸಿದ ಅವರು, ಯಾವುದನ್ನು ಮುಚ್ಚಿಡುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಚುನಾವಣಾ ಅಕ್ರಮಗಳು ಕಾಂಗ್ರೆಸ್‌ಗೆ ಬೇಕು. ಅದು ಅಸ್ತಿತ್ವ, ಸಿದ್ಧಾಂತ, ಕಾರ್ಯಕರ್ತರು ಇಲ್ಲದ ಪಕ್ಷ ಎಂದು ಆರೋಪಿಸಿದರು.

ಬಿಬಿಎಂಪಿ ತನಿಖೆ ಮಾಡಲು ದೂರು ದಾಖಲು ಮಾಡಿದೆ. ಚಿಲುಮೆ ಸಂಸ್ಥೆಯಿಂದ ಏನು ಬಯಸಿದ್ದಾರೆ ಎಂದು ಗೊತ್ತಿಲ್ಲ. ಚುನಾವಣಾ ಆಯೋಗದ ಅವಶ್ಯಕತೆ ಪ್ರಕ್ರಿಯೆಯನ್ನು ಸಂಸ್ಥೆ ಮಾಡುತ್ತಿದೆ. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್ ಓ ನೇಮಕಕ್ಕೆ ಅವಕಾಶ ಇದೆ. ಮತದಾರರನ್ನು ಸೇರಿಸಲು, ಡಿಲೀಟ್ ಮಾಡಲು ನಮಗೆ ಅವಕಾಶ ಇಲ್ಲ. ಈಗ ನಡೆಯುತ್ತಿರುವ ಪ್ರಕ್ರಿಯೆ ಆಧಾರ್ ಅಪ್ ಡೇಟ್ ಗೆ ಸಂಬಂಧಿಸಿದ್ದು. ಹಾಗಾಗಿ  ಅಂತಹ ಅಕ್ರಮ ಮಾಡುವ ಉದ್ದೇಶ ಇದ್ದಿದ್ದರೆ ತನಿಖೆಗೆ ಆದೇಶ ಯಾಕೆ ಮಾಡುತ್ತಿದ್ದೆವು ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ನವರ ಕೀಳುಮಟ್ಟ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಹೆಸರಿನ ಪ್ರತಿಷ್ಠಾನ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡುತ್ತದೆ. ಮೊದಲು ಚೆಕ್ ಕೊಡಲಾಗುತ್ತಿತ್ತು. ಈಗ ಅನ್ ಲೈನ್ ನಲ್ಲೇ ನಡೆಯುತ್ತದೆ ಎಂದು ಅವರು ಹೇಳಿದರು.

ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಗಳಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದು, ಇದರ ಬಗ್ಗೆಯೂ ತನಿಖೆಯಾಗಲಿ ಎಂದು ಅವರು ಈ ಸಂದರ್ಭ ಹೇಳಿದರು.

Similar News