ಇಂಡೋನೇಶ್ಯಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 44 ಮಂದಿ ಮೃತ್ಯು, 700ಕ್ಕೂ ಹೆಚ್ಚು ಮಂದಿಗೆ ಗಾಯ

Update: 2022-11-21 16:44 GMT

ಜಕಾರ್ತ, ನ.21: ಇಂಡೋನೇಶ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಟ 56 ಮಂದಿ ಮೃತಪಟ್ಟಿದ್ದು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

‌ಪಶ್ಚಿಮ ಜಾವಾದ ಸಿಯಾಂಜರ್ ವಲಯದಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪದಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಭೂಕಂಪದ ಕಾರಣ ಸುಮಾರು 400 ಕಿ.ಮೀ ದೂರದ ರಾಜಧಾನಿ ಜಕಾರ್ತದಲ್ಲೂ ಭೂಮಿ ಕಂಪಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ಮಾಹಿತಿ ನೀಡಿದೆ. ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆಗೆ ಅಡ್ಡಿಯಾದ ಕಾರಣ ಹಲವೆಡೆ ಆಸ್ಪತ್ರೆಯ ಹೊರಗಡೆ ತಾತ್ಕಾಲಿಕ ವಾರ್ಡ್ ಸ್ಥಾಪಿಸಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ.

ಭೂಮಿ ಕಂಪಿಸಿದಾಗ  ಆತಂಕಗೊಂಡ ಜನತೆ ಮನೆಯಿಂದ ಹೊರಗೆ ಧಾವಿಸಿದರು. ಇದುವರೆಗಿನ ಮಾಹಿತಿ ಪ್ರಕಾರ  ಸುಮಾರು 1000 ಮನೆಗಳಿಗೆ ಹಾನಿಯಾಗಿದೆ ಎಂದು ಸಿಯಾಂಜರ್ ನಗರಾಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ನಗರದಲ್ಲಿ ಅಂಗಡಿಗಳು, ಆಸ್ಪತ್ರೆ, ಬೋರ್ಡಿಂಗ್ ಶಾಲೆಗೆ ತೀವ್ರ ಹಾನಿಯಾಗಿದೆ. ಆಸ್ಪತ್ರೆಯ ಕಟ್ಟಡ ಕುಸಿದಾಗ ಕನಿಷ್ಟ 20 ಮಂದಿ ಮೃತಪಟ್ಟಿದ್ದು 300ರಷ್ಟು ಮಂದಿ ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕುಸಿದು ಬಿದ್ದ ಕಟ್ಟಡಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು ಮೃತರ ಅಥವಾ ಗಾಯಾಳುಗಳ ಸಂಖ್ಯೆ ಹೆಚ್ಚಬಹುದು  ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕುಸಿದ ಕಟ್ಟಡಗಳ ಅವಶೇಷಗಳು ರಸ್ತೆ ಮೇಲೆ ಬಿದ್ದಿರುವುದರಿಂದ ರಸ್ತೆ ಸಂಚಾರ ಮೊಟಕುಗೊಂಡಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಹಳ್ಳಿಗಳಿಂದ ಆಸ್ಪತ್ರೆಗೆ ಆಂಬ್ಯುಲೆನ್ಸ್ಗಳು ಬರುತ್ತಲೇ ಇವೆ. ಸಮೀಪದ ಗ್ರಾಮದಲ್ಲಿ ಹಲವು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದು ಅಲ್ಲಿಗೆ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಭೂಕುಸಿತದ ಸ್ಥಳದಿಂದ ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ್ದರೂ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ  ಎಂದು ಇಂಡೊನೇಶ್ಯಾದ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥರು ಹೇಳಿದ್ದಾರೆ.

ರಾಜಧಾನಿ ಜಕಾರ್ತದಲ್ಲೂ ಭೂಮಿ ನಡುಗಿದ್ದು ಜನತೆ ಆತಂಕಗೊಂಡರು. ಇನ್ನಷ್ಟು ಪಶ್ಚಾತ್ಕಂಪನದ ಸಾಧ್ಯತೆ ಇರುವುದರಿಂದ ಜನತೆ ಎಚ್ಚರಿಕೆ ವಹಿಸಬೇಕು. ಕಟ್ಟಡಗಳಿಂದ ಹೊರಗೆ ಬಯಲು ಪ್ರದೇಶದಲ್ಲಿ ಇರುವಂತೆ ಸ್ಥಳೀಯ ನಿವಾಸಿಗಳಿಗೆ ಸಲಹೆ ನೀಡಲಾಗಿದೆ ಎಂದು ಇಂಡೊನೇಶ್ಯಾದ ಹವಾಮಾನ  ಇಲಾಖೆಯ ನಿರ್ದೇಶಕಿ  ದ್ವಿಕೊರಿಟ ಕರ್ಣಾವತಿ ಹೇಳಿದ್ದಾರೆ.

ಶುಕ್ರವಾರವೂ ಜಕಾರ್ತದಲ್ಲಿ ಭೂಕಂಪವಾಗಿತ್ತು. ಆದರೆ ಕೆಲವು ಕಟ್ಟಡಗಳಿಗೆ ಹಾನಿಯಾದುದನ್ನು ಹೊರತುಪಡಿಸಿ ಹೆಚ್ಚಿನ ನಾಶ,ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.  

Similar News