ಪುರುಷ ಪ್ರಾಧಾನ್ಯದ ಅಹಂಕಾರಕ್ಕೆ ಪೆಟ್ಟು ನೀಡಿದ ರುಕ್ಮಾಬಾಯಿ ರಾವತ್

Update: 2022-11-22 06:12 GMT

ಯಾವ ಜಾತಿ, ಯಾವ ಧರ್ಮ ಎಂಬುದರ ಮೇಲೆ ಚರಿತ್ರೆಯೊಂದು ಚರಿತ್ರೆ ಹೌದೊ ಅಲ್ಲವೊ ಎಂಬುದು ತೀರ್ಮಾನಗೊಳ್ಳುತ್ತಿರುವ ಮತ್ತು ಅದನ್ನೇ ನಂಬಬೇಕೆಂದು ಬಲಾತ್ಕರಿಸುವ ಸಮಾಜದಲ್ಲಿ ಚರಿತ್ರೆಯೆಂಬುದು ರಾಜಕೀಯದ ಭಾಗವೂ ದಾಳವೂ ಆಗಿರುವ ವಿಪರ್ಯಾಸವನ್ನು ಕಾಣುತ್ತಿದ್ದೇವೆ. ಇಂತಹ ವಿಷಮ ಸ್ಥಿತಿಯಲ್ಲಿ ರುಕ್ಮಾಬಾಯಿಯ ಕಥೆ, ಹೆಣ್ಣಿನ ದನಿಯನ್ನು ಅಡಗಿಸುವ ಸಂಚುಗಳಿಗೆ ಸಡ್ಡು ಹೊಡೆದು ನಿಲ್ಲುವ ಬಹು ದೊಡ್ಡ ಶಕ್ತಿಯ ಸಂಕೇತ. ಇಂದು ರುಕ್ಮಾಬಾಯಿ ಜನ್ಮದಿನ. 

ಏನೆಂದರೆ ಏನೂ ಗೊತ್ತಿಲ್ಲದ 11 ವರ್ಷದ ಹುಡುಗಿಗೆ 19 ವರ್ಷದ ಹುಡುಗನೊಂದಿಗೆ ಮದುವೆ ನಡೆದುಹೋಗುತ್ತದೆ. ಆದರೂ, ತವರಲ್ಲೇ ಉಳಿದು ಆಕೆ ಓದು ಪೂರೈಸುತ್ತಾಳೆ. ಏಳು ವರ್ಷಗಳ ಬಳಿಕ ಅವಳ ಗಂಡ ತನ್ನೊಂದಿಗೆ ಬಂದು ಇರುವಂತೆ ಸೂಚಿಸಬೇಕೆಂದು ಕೇಳಿ ಕೋರ್ಟ್ ಮೆಟ್ಟಿಲೇರುತ್ತಾನೆ. ಆದರೆ ಆ ಹುಡುಗಿ ನಿರಾಕರಿಸುತ್ತಾಳೆ ಮತ್ತು ಆಸಕ್ತಿಯಿಲ್ಲದ ಮೇಲೆ ಮಹಿಳೆ ಮದುವೆ ಬಂಧನಕ್ಕೆ ಕಟ್ಟಿಬೀಳಬೇಕಿಲ್ಲ ಎಂದು ವಾದಿಸುತ್ತಾಳೆ. ಕೇಸ್ ಮೂರು ವರ್ಷಗಳವರೆಗೆ ನಡೆಯುತ್ತದೆ. ಭಾರತ ಮಾತ್ರವಲ್ಲ, ಲಂಡನ್‌ನವರೆಗೂ ಮುಟ್ಟುತ್ತದೆ. ಕಡೆಗೂ ಗಂಡನ ಪರವೇ ತೀರ್ಪು ಬಂದಾಗ, ಅವನ ಮನೆಗೆ ಹೋಗುವ ಬದಲು ಜೈಲಿಗೆ ಹೋಗುವುದೇ ಸರಿ ಎಂದು ದಿಟ್ಟಳಾಗಿ ನಿಂತುಬಿಡುತ್ತಾಳೆ ಆಕೆ. ಅಂತಹ ಸ್ಥಿತಿಯಲ್ಲಿ ಆಕೆಯ ಬೆಂಬಲಕ್ಕೆ ನಿಂತದ್ದು ರಾಣಿ ವಿಕ್ಟೋರಿಯಾ. ಕೋರ್ಟ್ ತೀರ್ಪು ರದ್ದಾಗುತ್ತದೆ.

ಈ ಘಟನೆಯೇ ಮುಂದೆ ಭಾರತದ ಸಂಪ್ರದಾಯಸ್ಥ ಮನಃಸ್ಥಿತಿಯ ವಿರೋಧದ ನಡುವೆಯೂ ಸಮ್ಮತಿ ವಯಸ್ಸಿನ ಕಾಯ್ದೆ ಜಾರಿಗೆ ಬರಲು ಕಾರಣವಾಗುವುದು. ಅದು 1891ರಲ್ಲಿ. ಮದುವೆಯಲ್ಲಿ ಹೆಣ್ಣಿನ ಸಮ್ಮತಿ ಕೂಡ ತೀರಾ ಅಗತ್ಯ ಎಂಬುದು ಮುನ್ನೆಲೆಗೆ ಬರುವುದೇ ಆಗ.

ಗಂಡಸು ಒಪ್ಪಿದರೆ ಮುಗಿಯಿತು, ಮದುವೆ ನಡೆದುಬಿಡುತ್ತದೆ ಎಂಬ ಅಹಂಕಾರಕ್ಕೆ ಹಾಗೆ ಮೊದಲ ಪೆಟ್ಟು ಕೊಟ್ಟ ಆ ದಿಟ್ಟೆ ರುಕ್ಮಾಬಾಯಿ ರಾವತ್. ಒಂದೂಕಾಲು ಶತಮಾನ ಆಗಿಹೋಗಿದೆ, ವೃತ್ತಿಯಲ್ಲಿ ವೈದ್ಯೆಯಾಗಿದ್ದ ರುಕ್ಮಾಬಾಯಿ ಹೆಣ್ಣುಮಕ್ಕಳಿಗಾಗಿ ಹಾಕಿಕೊಟ್ಟು ಹೋದ ಆ ಅಗ್ರಪಂಕ್ತಿಗೆ.

ಅದು ಬಾಲ್ಯವಿವಾಹ ಪದ್ಧತಿಗೆ ಮಹಿಳೆ ನಿರಂತರವಾಗಿ ಬಲಿಯಾಗುತ್ತಿದ್ದ ಕಾಲ. ರುಕ್ಮಾಬಾಯಿಯ ತಾಯಿಯೂ ಅದಕ್ಕೆ ಕೊರಳು ಕೊಟ್ಟವರೇ ಆಗಿದ್ದರು. ರುಕ್ಮಾಬಾಯಿಯನ್ನು ಹೆತ್ತಾಗ ಆ ತಾಯಿಗೆ ಬರೀ 15 ವರ್ಷ. ಆನಂತರ 17ನೇ ವರ್ಷದಲ್ಲೇ ವಿಧವೆ ಪಟ್ಟ. ಅದಾಗಿ ಏಳು ವರ್ಷಗಳ ಬಳಿಕ ಮರುಮದುವೆಯಾಯಿತು. ಮದುವೆಯಾದವರು ವೈದ್ಯರೂ ಮುಂಬೈಯ ವೈದ್ಯಕೀಯ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರೂ ಆಗಿದ್ದ ಸಖಾರಾಮ್ ಅರ್ಜುನ್. ಭಾರತದಲ್ಲಿನ ಸಮಾಜ ಸುಧಾರಣೆ ಮತ್ತು ಶಿಕ್ಷಣದ ಪರ ನಿಂತಿದ್ದ ಮನುಷ್ಯ. ಹೀಗಿದ್ದೂ, ಅವತ್ತಿನ ಸಾಮಾಜಿಕ ಒತ್ತಾಯ ಯಾವ ಮಟ್ಟದ್ದಾಗಿತ್ತೆಂದರೆ, ಮಗಳು ರುಕ್ಮಾಬಾಯಿಯನ್ನು 11 ವರ್ಷದವಳಾಗಿದ್ದಾಗಲೇ ಮದುವೆ ಮಾಡಬೇಕಾದ ಅನಿವಾರ್ಯತೆಯೆದುರು ಮಣಿಯಲೇಬೇಕಾಗಿತ್ತು. ಅದರ ವಿರುದ್ಧ ರುಕ್ಮಾಬಾಯಿ ನಡೆಸಿದ್ದು ಬಹು ದೊಡ್ಡ ಹೋರಾಟ.

ಸಮ್ಮತವಿಲ್ಲದ ಮದುವೆ ಬಂಧನದಿಂದ ಬಿಡುಗಡೆ ಸಿಕ್ಕ ಬಳಿಕ ರುಕ್ಮಾಬಾಯಿ ವೈದ್ಯೆಯಾಗಲು ಹಂಬಲಿಸಿ ಇಂಗ್ಲೆಂಡಿಗೆ ತೆರಳುತ್ತಾರೆ. ವೈದ್ಯ ಪದವೀಧರೆಯಾಗುತ್ತಾರೆ. ಭಾರತಕ್ಕೆ ಮರಳಿದ ಬಳಿಕವೂ ವೈದ್ಯ ವೃತ್ತಿಯೊಂದಿಗೆ ಬಾಲ್ಯವಿವಾಹ ಪದ್ಧತಿ ವಿರುದ್ಧದ ಅವರ ಹೋರಾಟ ಮುಂದುವರಿಯುತ್ತದೆ. ಮರುಮದುವೆಯಾಗದೆ ಸಾಮಾಜಿಕ ಕಾರ್ಯಕ್ಕೆ ಬದುಕು ಮೀಸಲಿಡುತ್ತಾರೆ.

ವಸಾಹತು ಭಾರತದೊಳಗೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಮುಖರಲ್ಲಿ ರುಕ್ಮಾಬಾಯಿ ಒಬ್ಬರು. ಜಡ್ಡುಗಟ್ಟಿದ್ದ ಭಾರತೀಯ ಸಂಪ್ರದಾಯವಾದಿ ಮನಃಸ್ಥಿತಿಗೆ ಸರಿಯಾದ ಆಘಾತ ಕೊಟ್ಟ ಹೋರಾಟಗಾರ್ತಿ ರುಕ್ಮಾಬಾಯಿ.

ನೋವಿನ ಸಂಗತಿಯೆಂದರೆ, ವ್ಯವಸ್ಥಿತ ಹಿಡಿತದಲ್ಲಿರುವ ವರ್ತಮಾನಕ್ಕೆ ರುಕ್ಮಾಬಾಯಿಯಂಥ ಹೆಣ್ಣುಮಗಳ ಚರಿತ್ರೆ ಬೇಕಿಲ್ಲದಿರುವುದು. ಹೆಣ್ಣುಮಕ್ಕಳ ಕುರಿತ ಕಾಳಜಿಯನ್ನೂ ಶೋಕಿಗಾಗಿ ಮಾತ್ರವೇ ತೋರಿಸುವ ರಾಜಕಾರಣಕ್ಕೆ ರುಕ್ಮಾಬಾಯಿಯಂಥವರ ಮನುಷ್ಯ ಮನಃಸ್ಥಿತಿ ಒಪ್ಪಿತವಿಲ್ಲ. ಬದಲಿಗೆ, ಚರಿತ್ರೆಯೇ ಅಲ್ಲದ ಯಾವುದೋ ತುಣುಕನ್ನು ಕಟ್ಟುಕಥೆಗಳ ಪ್ರಭಾವಳಿಯಲ್ಲಿ ತಮಗೆ ಬೇಕಾದಂತೆ ಮೆರೆಸುವ, ಗಿಲೀಟೆಲ್ಲವನ್ನೂ ಜಾತಿಯ ಬಲದಿಂದ ಮರೆಮಾಚುವ ಹುನ್ನಾರಗಳದ್ದೇ ಕೋಲಾಹಲ ಈಗ. ಯಾವ ಜಾತಿ, ಯಾವ ಧರ್ಮ ಎಂಬುದರ ಮೇಲೆ ಚರಿತ್ರೆಯೊಂದು ಚರಿತ್ರೆ ಹೌದೊ ಅಲ್ಲವೊ ಎಂಬುದು ತೀರ್ಮಾನಗೊಳ್ಳುತ್ತಿರುವ ಮತ್ತು ಅದನ್ನೇ ನಂಬಬೇಕೆಂದು ಬಲಾತ್ಕರಿಸುವ ಸಮಾಜದಲ್ಲಿ ಚರಿತ್ರೆಯೆಂಬುದು ರಾಜಕೀಯದ ಭಾಗವೂ ದಾಳವೂ ಆಗಿರುವ ವಿಪರ್ಯಾಸವನ್ನು ಕಾಣುತ್ತಿದ್ದೇವೆ.

ಇಂತಹ ವಿಷಮ ಸ್ಥಿತಿಯಲ್ಲಿ ರುಕ್ಮಾಬಾಯಿಯ ಕಥೆ, ಹೆಣ್ಣಿನ ದನಿಯನ್ನು ಅಡಗಿಸುವ ಸಂಚುಗಳಿಗೆ ಸಡ್ಡು ಹೊಡೆದು ನಿಲ್ಲುವ ಬಹು ದೊಡ್ಡ ಶಕ್ತಿಯ ಸಂಕೇತ.

Similar News