ಇಂಗ್ಲೆಂಡ್ ಗೆ 221 ರನ್ ಗಳ ಬೃಹತ್ ಸೋಲು

Update: 2022-11-22 17:57 GMT

ಮೆಲ್ಬರ್ನ್, ನ. 22: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯ ಮಂಗಳವಾರ ಡಕ್ವರ್ತ್ ಲೂಯಿಸ್(Duckworth Louis) ನಿಯಮದ ಆಧಾರದಲ್ಲಿ 221 ರನ್ ಗಳಿಂದ ಗೆದ್ದಿದೆ. ಇದರೊಂದಿಗೆ ಆಸ್ಟ್ರೇಲಿಯವು ಸರಣಿಯನ್ನು 3-0 ಅಂತರದಿಂದ ಕ್ಲೀನ್ಸ್ವೀಪ್ ಮಾಡಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಆತಿಥೇಯ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ತನ್ನ ಬ್ಯಾಟಿಂಗ್ ವೈಭವವನ್ನು ಸಾದರಪಡಿಸಿದ ಆಸ್ಟ್ರೇಲಿಯವು 48 ಓವರ್ಗಳಲ್ಲಿ ಕೇವಲ 5 ವಿಕೆಟ್ ಗಳನ್ನು ಕಳೆದುಕೊಂಡು 355 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಮಳೆಯಿಂದಾಗಿ ಪಂದ್ಯವನ್ನು ಪ್ರತೀ ತಂಡಕ್ಕೆ 48 ಓವರ್ಗಳಿಗೆ ಇಳಿಸಲಾಗಿತ್ತು. ಆರಂಭಿಕರಾದ ಟ್ರಾವಿಸ್ ಹೆಡ್(Travis Head) (130 ಎಸೆತಗಳಲ್ಲಿ 152 ರನ್) ಮತ್ತು ಡೇವಿಡ್ ವಾರ್ನರ್(David Warner) (102 ಎಸೆತಗಳಲ್ಲಿ 106 ರನ್) ಶತಕಗಳನ್ನು ಬಾರಿಸಿದರು.

ಗೆಲುವಿಗೆ 364 ರನ್ ಗಳ ಗುರಿಯನ್ನು ಬೆಂಬತ್ತಿದ ಇಂಗ್ಲೆಂಡ್ ನಿಯಮಿತ ಅಂತರದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡಿತು. ಅದು ಯಾವುದೇ ಹಂತದಲ್ಲೂ, ಗುರಿಯ ಹಿಂದೆ ಇರುವಂತೆ ಅನಿಸಲಿಲ್ಲ. ಅದು 31.4 ಓವರ್ಗಳಲ್ಲಿ ಕೇವಲ 142 ರನ್ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್  ಗಳನ್ನು ಕಳೆದುಕೊಂಡಿತು. ಜಾಸನ್ ರಾಯ್ ಗಳಿಸಿದ 33 ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ ಆಯಿತು.

ಟ್ರಾವಿಸ್ ಹೆಡ್ ಪಂದ್ಯಶ್ರೇಷ್ಠರಾದರು.

Similar News