ಮಂಗಳೂರು: ನ.28ರಂದು ಕೊರಗರ ಮನೆ ನಿವೇಶನ ಹಸ್ತಾಂತರಕ್ಕೆ ಆಗ್ರಹಿಸಿ ಪಾದಯಾತ್ರೆ

Update: 2022-11-24 07:54 GMT

ಮಂಗಳೂರು, ನ.24: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಂಗಳೂರು ವತಿಯಿಂದ ನ.28ರಂದು ಬೆಳಗ್ಗೆ 9.30ಕ್ಕೆ ಆದಿವಾಸಿ ಕೊರಗ ಸಮುದಾಯಕ್ಕೆ ಮಂಜೂರಾದ ಮನೆ ನಿವೇಶನ ಹಸ್ತಾಂತರಕ್ಕೆ ಆಗ್ರಹಿಸಿ ವಾಮಂಜೂರು ಜಂಕ್ಷನ್‌ನಿಂದ ಲಾಲ್‌ಭಾಗ್‌ನ ಮನಪಾ ಕಚೇರಿ ತನಕ ಪಾದಯಾತ್ರೆ ನಡೆಯಲಿದೆ ಎಂದು ಆದಿವಾಸಿ ಹಕ್ಕುಗಳ ಸಮಿತಿ ಮಂಗಳಜ್ಯೋತಿ ಘಟಕದ ಅಧ್ಯಕ್ಷ ಕರಿಯ ಕೆ. ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಕೊರಗ ಸಮುದಾಯದ ಸಾಂಪ್ರದಾಯಿಕ ಕಲಾ ಪ್ರಕಾರಗಳೊಂದಿಗೆ ನಡೆಯಲಿದ್ದು, ಜಾನಪದ ಸಂಶೋಧಕ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಪಾದಯಾತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕೊರಗ ಸಮುದಾಯದ ಭೂಮಿ ಹೋರಾಟದ ರೂವಾರಿ ಶ್ರೀಧರ್ ನಾಡಾ, ಆದಿವಾಸಿ ಸಮಿತಿಯ ರಾಜ್ಯ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ಹಿರಿಯ ರೈತ ಕಾರ್ಮಿಕ ಮುಂದಾಳುಗಳಾದ ಕೆ. ಯಾದವ ಶೆಟ್ಟಿ, ಸದಾಶಿವ ದಾಸ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 4ಕ್ಕೆ ಮನಪಾ ಕಚೇರಿ ಲಾಲ್‌ಭಾಗ್‌ನಲ್ಲಿ ನಡೆಯಲಿದ್ದು, ಕಾರ್ಮಿಕ ಸಂಘಟನೆ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಭಾಷಣ ಮಾಡಲಿದ್ದಾರೆ. ಜಾಥಾ ಸಂಚರಿಸುವ ಮಾರ್ಗದ ವಿವಿಧೆಡೆಗಳಲ್ಲಿ 5 ಸಭೆಗಳನ್ನು ನಿರ್ಧರಿಸಲಾಗಿದೆ. ಈ ಸಭೆಗಳಲ್ಲಿ ಸಾಹಿತಿ, ಬುದ್ಧಿಜೀವಿ, ಪ್ರಗತಿಪರ ಚಿಂತಕರುಗಳು ಭಾಗವಹಿಸಿ ಭಾಷಣ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಶೇಖರ, ರವೀಂದ್ರ, ಕಾನೂನು ಸಲಹೆಗಾರ ಮನೋಜ್ ವಾಮಂಜೂರು ಹಾಗೂ ಪೂರ್ಣಿಮಾ ಉಪಸ್ಥಿತರಿದ್ದರು.

Similar News