ದುಬೈಯಿಂದ ಮಂಗಳೂರಿಗೆ ಬಂದಿಳಿದ ಸುಮಾರು 90 ಪ್ರಯಾಣಿಕರ ಲಗೇಜ್‌ ವಿಮಾನ ನಿಲ್ದಾಣದಲ್ಲಿ 'ನಾಪತ್ತೆ': ಆರೋಪ

Update: 2022-11-24 11:45 GMT

ಮಂಗಳೂರು(Mangaluru): ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangaluru International Airport) ಮಂಗಳವಾರ ಆಗಮಿಸಿದ ಸುಮಾರು 90 ಮಂದಿ ಪ್ರಯಾಣಿಕರು ತಮ್ಮ ಲಗೇಜ್ 'ನಾಪತ್ತೆ'ಯಾಗಿದೆ ಎಂದು ದೂರಿದ್ದಾರೆ.

ಸ್ಪೈಸ್‌ಜೆಟ್ (SpiceJet) ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ನಂತರ ಅವರ ಲಗೇಜ್‌ಗಳು ಸರಕುಗಳ ಮೂಲಕ ಒಂದೆರಡು ದಿನಗಳ ನಂತರ ಬರುತ್ತವೆ ಅದನ್ನು ಅವರ ಮನೆಗಳಿಗೆ ತಲುಪಿಸಲಾಗುವುದು ಎಂದು ಏರ್‌ಲೈನ್‌ ತಿಳಿಸಿತ್ತು. ಹಾಗೂ ಈ ಪ್ರಕ್ರಿಯೆಗಳಿಗಾಗಿ ಮಂಗಳೂರು ವಿಮಾನ ನಿಲ್ದಾಣದ ಏರ್‌ಲೈನ್ ಕೌಂಟರ್‌ನಲ್ಲಿ ಫಾರ್ಮ್‌ಗಳು ಮತ್ತು ವಿಳಾಸಗಳನ್ನು ಭರ್ತಿ ಮಾಡಲು ಅವರಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ.

ಆದರೆ ಅಂತಹ ಯಾವುದೇ ವ್ಯವಸ್ಥೆಗಳ ಬಗ್ಗೆ ಮುಂಚಿತವಾಗಿ ನಮಗೆ ತಿಳಿಸಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. "ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ನಂತರವೇ ನಮಗೆ ಈ ಬಗ್ಗೆ ತಿಳಿಸಲಾಯಿತು." ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ‘ವಾರ್ತಾ ಭಾರತಿ’ಗೆ ತಿಳಿಸಿದ್ದಾರೆ.

"ವಿಮಾನವು ದುಬೈನಿಂದ ಸ್ಥಳೀಯ ಸಮಯ 4:20 ಕ್ಕೆ ಟೇಕ್ ಆಫ್ ಆಗಬೇಕಿತ್ತು ಆದರೆ ನಿಗದಿತ ಸಮಯಕ್ಕಿಂತ ಮೂರು ಗಂಟೆಗಳ ನಂತರ ಅದು ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆಗುವ ಮೊದಲು ನಮ್ಮನ್ನು ಸುಮಾರು ಎರಡು ಗಂಟೆಗಳ ಕಾಲ ವಿಮಾನದಲ್ಲಿ ಕಾಯುವಂತೆ ಮಾಡಲಾಯಿತು. ವಿಮಾನದಲ್ಲಿ 180 ಪ್ರಯಾಣಿಕರಿದ್ದರು ಮತ್ತು ಅವರಲ್ಲಿ 90 ಮಂದಿ ಮಾತ್ರ ತಮ್ಮ ಲಗೇಜ್ ಅನ್ನು ವಿಮಾನದಲ್ಲಿ ಲೋಡ್ ಮಾಡಿದರು. ಇತರರ ಲಗೇಜ್ ಅನ್ನು ಲೋಡ್ ಮಾಡಲಾಗಿಲ್ಲ ಮತ್ತು ಬದಲಿಗೆ 2-3 ದಿನಗಳ ನಂತರ ಅವರ ಲಗೇಜ್ ಅನ್ನು ಪಡೆಯುವುದಾಗಿ ತಿಳಿಸಲಾಯಿತು” ಎಂದು ವಿಮಾನದಲ್ಲಿದ್ದ ಭಟ್ಕಳ ನಿವಾಸಿ ಸೈಯದ್ ಶಾದಾಬ್ ತಿಳಿಸಿದ್ದಾರೆ.

 ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಲಗೇಜ್ ಶುಲ್ಕ ಸೇರಿದಂತೆ ಸಂಪೂರ್ಣ ಶುಲ್ಕ ಮತ್ತು ಟಿಕೆಟ್ ದರವನ್ನು ಭರಿಸಿದ್ದರೂ ತಮ್ಮ ಲಗೇಜ್ ಅನ್ನು ಸರಕು ಸಾಗಣೆಯ ವಿಮಾನಗಳಲ್ಲಿ ತುಂಬಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಸಾಮಾನು ಸರಂಜಾಮುಗಳು ಖಾದ್ಯ ಮತ್ತು ಹಾಳಾಗುವ ವಸ್ತುಗಳನ್ನು ಹೊಂದಿದ್ದು ಅದು 2-3 ದಿನಗಳ ನಂತರ ಬಂದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಟಿಕೆಟ್ ದರವನ್ನು ಮರುಪಾವತಿಸುವಂತೆ ಅವರು ಒತ್ತಾಯಿಸಿದ್ದಾರೆ. 

ಈ ವಿಷಯದ ಬಗ್ಗೆ ಅಧಿಕೃತ ಪ್ರತಿಕ್ರಿಯೆಗಾಗಿ ವಾರ್ತಾ ಭಾರತಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. (ಪ್ರತಿಕ್ರಿಯೆ ಬಂದ ತಕ್ಷಣ ಅದನ್ನು ಇಲ್ಲಿ ಸೇರಿಸಲಾಗುವುದು)

ಇದನ್ನೂ ಓದಿ: ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಮನ್ಸ್ ನೀಡಿದ ಕೋರ್ಟ್

Similar News