‘ಚಿಲುಮೆ’ ಸಂಸ್ಥೆ ಹಗರಣ: BBMP ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಚುನಾವಣಾ ಆಯೋಗ

Update: 2022-11-24 16:50 GMT

ಬೆಂಗಳೂರು, ನ.24: ಮತದಾರರ ಮಹತ್ವದ ಮಾಹಿತಿ ಚಿಲುಮೆ ಸಂಸ್ಥೆಗೆ ಕೈ ಸೇರಿರುವ ಕುರಿತು ಬಿಬಿಎಂಪಿ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಚುನಾವಣಾ ಆಯೋಗ, ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯೇ ಗೈದು ಬಿಸಿ ಮುಟ್ಟಿಸಿದೆ.

ಗುರುವಾರ ಇಲ್ಲಿನ ರಾಜಾಜಿನಗರ, ನೆಲಮಂಗಲ ಸೇರಿದಂತೆ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಖುದ್ದು ಭೇಟಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್.ಬಿ ಹಾಗೂ ಕಾರ್ಯದರ್ಶಿ ಬಿ.ಸಿ.ಪಾತ್ರ, ಮತದಾರರ ಪಟ್ಟಿ, ಪರಿಷ್ಕರಣೆ ಪ್ರಕ್ರಿಯೆ ಕುರಿತು ಮಾಹಿತಿ ಕಲೆ ಹಾಕಿದರು.

ಆನಂತರ, ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಕಾರ್ಯ ವೈಖರಿ ಕುರಿತು ಪ್ರಶ್ನಿಸಿದ ಅವರು, ದಾಖಲೆ ಸಂಗ್ರಹ, ಮತದಾರರ ಚೀಟಿ, ಅರ್ಜಿ ನಮೂನೆ ಪ್ರಕ್ರಿಯೆ ಕುರಿತು ಮಾಹಿತಿ ಪಡೆದರು.

ಅದರಲ್ಲೂ ಇದೇ ವಾರ್ಷಿಕ ಸಾಲಿನ ಜನವರಿಂದ ತಿಂಗಳಿನಿಂದ ಇದುವರೆಗೂ ಕೈಬಿಟ್ಟಿರುವ ಮತದಾರರ ಮಾಹಿತಿ, ಪಟ್ಟಿಯನ್ನು ಅವರು ಪರಿಶೀಲನೆ ನಡೆಸಿದರು. ಅಲ್ಲದೆ, ಇಂದು(ನ.25) ಸಹ ಬೆಂಗಳೂರು ವ್ಯಾಪ್ತಿಯಲ್ಲಿರುವ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಿಗೆ ಆಯುಕ್ತರು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ, ನಿನ್ನೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ಕೊಟ್ಟ ಅಧಿಕಾರಿಗಳು, ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಂದ ಮಾಹಿತಿ ಪಡೆದರು. ಬಳಿಕ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರನ್ನು ಕರೆಯಿಸಿಕೊಂಡು ಅವರಿಂದಲೂ ತನಿಖಾ ಪ್ರಗತಿಯ ವಿವರ ಪಡೆದಿದ್ದರು.

Similar News