ಸಂವಿಧಾನಕ್ಕೆ ಕೊಡಲಿಯೇಟು ನೀಡುವ ಪ್ರಯತ್ನ ಒಂದಲ್ಲೊಂದು ರೀತಿಯಲ್ಲಿ ನಡೆಯುತ್ತಲೇ ಇದೆ: ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌

‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮ

Update: 2022-11-25 17:30 GMT

ಮಂಗಳೂರು, ನ.25: ‘ಸಂವಿಧಾನಕ್ಕೆ ಕೊಡಲಿಯೇಟು ನೀಡುವ ಪ್ರಯತ್ನ ಒಂದಲ್ಲೊಂದು ರೀತಿಯಲ್ಲಿ ನಡೆಯು ತ್ತಲೇ ಇದೆ. ಹಾಗಾಗಿ ಪ್ರಜ್ಞಾವಂತರಾಗಬೇಕು. ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹೇಳಿದರು.

ಮಂಗಳೂರು ವಕೀಲರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಶುಕ್ರವಾರ ನಗರದ ನ್ಯಾಯಾಲಯದಲ್ಲಿ ನಡೆದ  ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನ ತನ್ನಷ್ಟಕ್ಕೆ ತಾನು ರಕ್ಷಿಸಿಕೊಳ್ಳುತ್ತದೆ ಎಂಬ ಭ್ರಮೆಯಲ್ಲಿ ನಾವಿರಬಾರದು. ಸಂವಿಧಾನವು ಎದುರಿಸಬಹುದಾದ ಸಮಸ್ಯೆಗಳ ಅಳ ಅರಿವು  ನಮಗಿರಬೇಕು. ಸಂವಿಧಾನವನ್ನು ನ್ಯಾಯಾಲಯ ರಕ್ಷಣೆ ಮಾಡುತ್ತದೆ ಎಂಬ ಭ್ರಮೆ ಯಾರಿಗೂ ಬೇಡ ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹೇಳಿದರು.

’ಕೇಶವ ಸಿಂಗ್ ಮತ್ತು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕವೂ ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನಗಳು ನಡೆದಿವೆ. ಜನರಿಗೆ ಸಂವಿಧಾನವು ನೀಡಿದ್ದ ಹಕ್ಕು ಮೊಟಕುಗೊಳಿಸುವ ಪ್ರಯತ್ನ ನಡೆದಾಗಲೆಲ್ಲ ಸುಪ್ರೀಂ ಕೋರ್ಟ್‌ ಅವುಗಳನ್ನು ರಕ್ಷಿಸಿದೆ. ನಾಗರಿಕರು ಎಚ್ಚರದಿಂದ ಇದ್ದರೆ ಮಾತ್ರ ಸಂವಿಧಾನ ಉಳಿಯಬಲ್ಲುದು.  ಅಧಿಕಾರದಲ್ಲಿರುವ ಪಕ್ಷವು ಪ್ರಬಲವಾಗಿದ್ದರೆ, ಅವರಿಗೆ ಬೇಕಾದಂತೆ ಸಂವಿಧಾನದ ವ್ಯಾಖ್ಯಾನ ನಡೆಯುವುದು ಸಹಜವಾಗಿದೆ ಎಂದು ಅಭಿಪ್ರಾಯಪಟ್ಟರು.

'ಈಗ ಎಷ್ಟು ಸಚಿವರು ಜೈಲಿನಲ್ಲಿದ್ದಾರೆ. ಎಷ್ಟು ಮಂದಿ ಕೇಂದ್ರ ಸಚಿವರು, ಮುಖ್ಯಮಂತ್ರಿ, ಕ್ಯಾಬಿನೆಟ್‌ ಸಚಿವರು, ಉನ್ನತ ಅಧಿಕಾರಿಗಳಿಗೆ ಶಿಕ್ಷೆ ಆಗಿರುವ ಬಗ್ಗೆ ಯೋಚಿಸಬೇಕಿದೆ. ಸಂಸತ್ತಿನಲ್ಲಿ ಹಣದ ವ್ಯಾಪಾರ ನಡೆದರೂ ಕೇಳುವಂತಿಲ್ಲ ಎನ್ನುತ್ತಾರೆ. ನ್ಯಾಯಾಲಯ ಏನಾದರೂ ಹೇಳಿದರೆ ಅದರ ಮೇಲೆ ಮುಗಿಬೀಳಲಾಗುತ್ತದೆ. ನಾವು ನ್ಯಾಯಾಲಯದ ಕಲಾಪದಲ್ಲಿ ಮೂಗು ತೂರಿಸುತ್ತೇವಾ ಎಂದು ಕೇಳುತ್ತಾರೆ. ಇಂತಹ ಸ್ಥಿತಿಯನ್ನು ಇಟ್ಟುಕೊಂಡು  ಸಂವಿಧಾನವನ್ನು ನಾಳೆ ಹೇಗೆ ರಕ್ಷಿಸಬಲ್ಲಿರಿ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಪ್ರಶ್ನಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾ ರೆಡ್ಡಿ ಉಪಸ್ಥಿತರಿದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಪೃಥ್ವಿರಾಜ್‌ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶೀ ಶ್ರೀಧರ ಎಣ್ಮಕಜೆ ಸ್ವಾಗತಿಸಿದರು.

Similar News