ಕಾರು ಅಲ್ಲಾಡಿಸಿದ್ದಕ್ಕೆ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿರಾ?: ಸಂಸದರಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ

ಸುರತ್ಕಲ್ ಟೋಲ್ ಹೆಜಮಾಡಿಯಲ್ಲಿ ಸಂಗ್ರಹ ಆದೇಶದ ವಿರುದ್ಧ ಆಕ್ರೋಶ

Update: 2022-11-26 06:57 GMT

ಮಂಗಳೂರು, ನ.26: ಸುರತ್ಕಲ್ ಟೋಲ್ ಗೇಟ್ ವಿಚಾರವಾಗಿ ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನು ತಟ್ಟಿಕೊಂಡಿದ್ದು? ಸುರತ್ಕಲ್ ಟೋಲ್‌ಗೇಟ್‌ ರದ್ದು ಪಡಿಸಿ, ಹೆಜಮಾಡಿ ಟೋಲ್‌ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿರುವುದಕ್ಕಾ ಎಂದು ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಕ್ರಮ ಟೋಲ್‌ಗೇಟ್‌ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ರೆ, ತಾವು ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆ ಮರೆಯ ಕಸರತ್ತನ್ನ ಬಹಿರಂಗಪಡಿಸುತ್ತಿರಾ? ಎಂದು ಸಂಸದರನ್ನು ತರಾಟೆಗೈದರಲ್ಲದೆ, ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿರಾ? ಎಂದು ವ್ಯಂಗ್ಯವಾಡಿದ್ದಾರೆ.

ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್‌ಗೇಟ್‌ ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ? ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು‌ ಎಂದು ಹೇಳಿದ್ದಾರೆ.

Similar News