ಸರಕಾರಗಳಿಂದಲೇ ವಕ್ಫ್ ಸೊತ್ತುಗಳ ಕಬಳಿಕೆ: ಶಾಫಿ ಸಅದಿ

*ದ.ಕ. ಜಿಲ್ಲಾ ವಕ್ಫ್‌ನಿಂದ ‘ಜಮಾಅತ್ ಅದಾಲತ್-ವಕ್ಫ್ ಸೌಲಭ್ಯ’ಗಳ ಮಾಹಿತಿ ಶಿಬಿರ

Update: 2022-11-26 11:11 GMT

ಮಂಗಳೂರು, ನ.26: ವಕ್ಫ್ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ಮಾತ್ರವಲ್ಲ, ಸರಕಾರಗಳು ಕೂಡ ಕಬಳಿಸಿವೆ. ಖಾಸಗಿ ವ್ಯಕ್ತಿಗಳು ಕಬಳಿಸಿರುವ ಆಸ್ತಿಯನ್ನು ಮರಳಿ ಪಡೆಯಲು ಕಾನೂನು ಹೋರಾಟ ಮುಂದುವರಿಯುತ್ತಿವೆ. ವಕ್ಫ್ ಆಸ್ತಿಗಳ ಸಂರಕ್ಷಣೆಯಲ್ಲಿ ಸರಕಾರದ ಜವಾಬ್ದಾರಿಯೂ ಇರುವುದರಿಂದ ಅತಿಕ್ರಮಿಸಿರುವ ಆಸ್ತಿಗಳನ್ನು ಸರಕಾರ ವಾಪಸ್ ನೀಡಬೇಕು ಎಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್‌ಕೆಎಂ ಶಾಫಿ ಸಅದಿ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ವಕ್ಫ್‌ನಲ್ಲಿ ನೋಂದಾಯಿಸಲ್ಪಟ್ಟ ಮಸೀದಿ-ಮದ್ರಸಗಳ ಪ್ರತಿನಿಧಿಗಳಿಗಾಗಿ ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಜಮಾಅತ್ ಅದಾಲತ್-ವಕ್ಫ್ ಸೌಲಭ್ಯ’ಗಳ ಮಾಹಿತಿ ಶಿಬಿರದಲ್ಲಿ ಅವರು ಮುನ್ನುಡಿ ಭಾಷಣಗೈದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ವಕ್ಫ್ ಆಸ್ತಿ ಕಬಳಿಕೆಯಲ್ಲಿ ಶೇ.50ರಷ್ಟು ಸರಕಾರಗಳೇ ಕಬಳಿಸಿವೆ. ಅದನ್ನು ಸರಕಾರ ಮರಳಿಸಿದರೆ ಸಮುದಾಯದ ಅಭಿವೃದ್ಧಿಗೆ ಬಳಸಲು ಸಾಧ್ಯವಾಗಲಿದೆ ಎಂದು ಶಾಫಿ ಸಅದಿ ಅಭಿಪ್ರಾಯಪಟ್ಟರು.

ಟಿಪ್ಪು ಸುಲ್ತಾನ್ ಸಹಿತ ಅನೇಕ ರಾಜರುಗಳು ವಕ್ಫ್ ಆಸ್ತಿಗಳನ್ನು ಸಮುದಾಯಕ್ಕೆ ನೀಡಿದ್ದಾರೆ. ಆ ಪೈಕಿ ಹಲವು ಆಸ್ತಿಗಳು ಕಬಳಿಕೆಯಾಗಿವೆ. ಕಳೆದ 50 ವರ್ಷದಲ್ಲಿ ಅವುಗಳನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಇನ್ನೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ವಕ್ಫ್ ಆಸ್ತಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಸರಕಾರ ನೀಡುವ ಅನುದಾನಗಳ ಪೈಕಿ ವಾರ್ಷಿಕ 55 ಕೋ.ರೂ.ವನ್ನು 16,400ರಷ್ಟು ಇಮಾಮ್-ಮುಅದ್ಸಿನ್‌ಗಳ ಗೌರವಧನಕ್ಕೆ ಬಳಸಲಾಗುತ್ತದೆ. ವಾರ್ಷಿಕ ಅನುದಾನವಲ್ಲದೆ ಹೆಚ್ಚುವರಿಯಾಗಿ ನೀಡುವ ವಿಶೇಷ ಅನುದಾನಗಳನ್ನು ಸಮುದಾಯದ ಸಬಲೀಕರಣಕ್ಕೆ ಬಳಸಲಾಗುತ್ತದೆ ಎಂದರು.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರದ ಕಾಮಗಾರಿ ನಡೆಯುತ್ತಿದೆ. ಹಿಜಾಬ್ ಸಮಸ್ಯೆ ಉದ್ಭವಿಸಿದ ಬಳಿಕ ರಾಜ್ಯದ 10 ಜಿಲ್ಲೆಗಳಲ್ಲಿ ತಲಾ ಒಂದರಂತೆ ಮುಸ್ಲಿಂ ಮಹಿಳಾ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ದ.ಕ. ಜಿಲ್ಲೆಯ ಅಡ್ಯಾರ್-ಕಣ್ಣೂರಿನಲ್ಲಿರುವ 16 ಎಕರೆ ಜಮೀನಿನಲ್ಲಿ ಮಹಿಳಾ ಕಾಲೇಜು ತಲೆ ಎತ್ತಲಿವೆ. ಡಿಸೆಂಬರ್‌ನಲ್ಲೇ ಮಹಿಳಾ ಕಾಲೇಜುಗಳ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.

ಮಸೀದಿ-ಮದ್ರಸ, ದರ್ಗಾ, ಈದ್ಗಾ, ಅಶೂರಾಖಾನಾ, ಯತೀಂ ಖಾನಾಗಳನ್ನು ವಕ್ಫ್ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಲೆಕ್ಕಪತ್ರಗಳನ್ನೂ ಸಮರ್ಪಕವಾಗಿಟ್ಟುಕೊಳ್ಳಬೇಕು. ಜಮಾಅತ್‌ನೊಳಗಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಚುನಾವಣೆಗಳಿಗೆ ಆಸ್ಪದ ನೀಡದೆ ಒಮ್ಮತದ ಆಡಳಿತ ಕಮಿಟಿಗಳನ್ನು ರಚಿಸಲು ಮುಂದಾಗಬೇಕು ಎಂದು ಶಾಫಿ ಸಅದಿ ಕರೆ ನೀಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್‌ ಬುಖಾರಿ ಕೂರತ್, ವಕ್ಫ್ ಆಸ್ತಿ ಅಲ್ಲಾಹನ ಸೊತ್ತಾಗಿದೆ. ಅದನ್ನು ಯಾರೂ ಕಬಳಿಸಬಾರದು. ಅದರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ಸರಕಾರವು ವಕ್ಫ್ ಇಲಾಖೆಗೆ ನೀಡುವ ಅನುದಾನವು ತೃಪ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಖಾಝಿಯ ಮಾತುಗಳನ್ನು ಯಾರೂ ಧಿಕ್ಕರಿಸಬಾರದು. ಅದು ಕೇವಲ ಎರಡಕ್ಷರವಲ್ಲ. ಗೌರವಯುತವಾದ ಸ್ಥಾನವಾಗಿದೆ. ಹಾಗಾಗಿ ಖಾಝಿಯ ತೀರ್ಮಾನಕ್ಕೆ ಜಮಾಅತಿಗರು ಬದ್ಧರಾಗಿರಬೇಕು ಎಂದು ಕೂರತ್ ತಂಙಳ್ ಹೇಳಿದರು.

ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ,ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ವಕ್ಫ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖ ಜಮಾಅತ್ ಪ್ರತಿನಿಧಿಗಳ ಸಭೆ ಕರೆದು ಪರಿಹಾರ ಕಂಡುಕೊಳ್ಳಬೇಕು. ವಕ್ಫ್ ಕಚೇರಿಗಳನ್ನೂ ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಯೆನೆಪೊಯ ವಿವಿಯ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿ, ಮಸೀದಿಗಳು ಕೇವಲ ನಮಾಝ್-ಪ್ರಾರ್ಥನೆಯ ಕೇಂದ್ರವಾಗಿರಬಾರದು. ಸಾಮಾಜಿಕ, ಶೈಕ್ಷಣಿಕ ಕೇಂದ್ರವೂ ಆಗಿರಬೇಕು. ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಮಸೀದಿಗಳ ಆಡಳಿತ ಕಮಿಟಿಗಳಲ್ಲದೆ ಖತೀಬರು ಮುಂದಾಗಬೇಕು. ಕಬಳಿಕೆ ಮಾಡಿರುವ ವಕ್ಫ್ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕುವ ಮುನ್ನ ಸ್ವಯಂ ಆಗಿ ಬಿಟ್ಟುಕೊಡುವ ಮನೋಭಾವ ಬೆಳೆಸಬೇಕು. ವಕ್ಫ್ ಶುಲ್ಕವನ್ನು ಶೇ.4ರ ಬದಲು ಶೇ.7 ವಸೂಲಿ ಮಾಡಲಾಗುತ್ತಿದೆ. ಇದು ಜಮಾಅತಿಗರಿಗೆ ಹೊರೆಯಾಗಿ ಪರಿಣಮಿಸಲಿದೆ. ಹಾಗಾಗಿ ವಕ್ಫ್ ಶುಲ್ಕವನ್ನು ಈ ಹಿಂದಿನಂತೆ ಶೇ.4ರಷ್ಟು ವಸೂಲಿ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು.

 ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಲ್ ಖಾದಿಸಾ ಸಂಸ್ಥೆಯ ಸ್ಥಾಪಕ ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿದರು.

ವಕ್ಫ್‌ನಿಂದ ಜಮಾಅತ್‌ಗಳಿಗೆ ನೀಡುವ ಸೌಲಭ್ಯ ಹಾಗೂ ವಿವಿಧ ಯೋಜನೆಯ ಬಗ್ಗೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮುಅಜಿಂ ಪಾಷಾ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಮೊಯ್ದಿನ್ ಬಾವಾ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಜಿ ಎಚ್.ಎಸ್.ಉಸ್ಮಾನ್, ಹಾಜಿ ಎಸ್.ಎಂ.ರಶೀದ್, ಹಾಜಿ ಯು.ಕೆ.ಮೋನು ಕಣಚೂರ್, ಪ್ರಮುಖರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಪುತ್ತುಬಾವಾ ಹಾಜಿ, ಮುಹಮ್ಮದ್ ಹನೀಫ್ ಹಾಜಿ ಬಂದರ್, ಹಸನಬ್ಬ ಚಾರ್ಮಾಡಿ, ಮುಮ್ತಾಝ್ ಅಲಿ, ಬಶೀರ್ ಬೈಕಂಪಾಡಿ, ಮುಹಮ್ಮದ್ ಆಸೀಫ್ ಸೂಫಿಖಾನ್, ಮುಹಮ್ಮದ್ ಹಾರಿಸ್ ಮುಕ್ಕ, ಬಶೀರ್ ಬಿ.ಎಂ. ಫಳ್ನೀರ್, ಕಾರ್ಪೊರೇಟರ್ ಲತೀಫ್ ಕಂದಕ್, ವಾರ್ತಾಧಿಕಾರಿ ಖಾದರ್ ಷಾ, ಕೆ.ಕೆ.ಶಾಹುಲ್ ಹಮೀದ್, ಸಿರಾಜುದ್ದೀನ್ ಮುಡಿಪು, ಹನೀಫ್ ನಿಝಾಮಿ, ಮುಹಮ್ಮದ್ ಸಿರಾಜ್ ದಾವಣಗೆರೆ, ನವಾಝ್ ಅಂಕೋಲ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಪಕೀರಬ್ಬ ಮರೋಡಿ, ಎಂ.ಎಂ. ಅಬ್ದುಲ್ ರಹ್ಮಾನ್ ಮೊಗರ್ಪಣೆ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಅಶ್ರಫ್ ಕಿನಾರ, ಎಂ.ಸಲೀಂ ಬೆಂಗರೆ, ಎಸ್.ಡಿ.ಮುಹಮ್ಮದ್ ಶಾಕೀರ್ ಕಣ್ಣೂರು, ಜುಬೈರ್, ಸಂಶುದ್ದೀನ್ ಜೋಕಟ್ಟೆ, ಖಾಲಿದ್ ನಂದಾವರ, ಅಬೂಬಕರ್ ಸಿದ್ದೀಕ್, ಮುಹಮ್ಮದ್ ಮುಸ್ತಫಾ ಕೃಷ್ಣಾಪುರ, ಮುಹಮ್ಮದ್ ಹನೀಫ್ ಮಲ್ಲೂರು, ಸಿರಾಜುದ್ದೀನ್ ಬೈಕಂಪಾಡಿ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಸ್ವಾಗತಿಸಿದರು. ಸಲಹಾ ಸಮಿತಿಯ ಉಪಾಧ್ಯಕ್ಷ ಎ.ಕೆ. ಜಮಾಲುದ್ದೀನ್ ವಂದಿಸಿದರು. ಸದಸ್ಯ ಸೈದುದ್ದೀನ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.


ರಾಜಕೀಯವಾಗಿ ಶಕ್ತಿಶಾಲಿಗಳಾಗಬೇಕು: ಶಾಪಿ ಸಅದಿ

ಮುಸ್ಲಿಮರು ರಾಜಕೀಯವಾಗಿ ಶಕ್ತಿಶಾಲಿಗಳಾಗಬೇಕು. ಪಕ್ಷ ಯಾವುದೇ ಆಗಿರಲಿ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಇಬ್ಬರು ಶಾಸಕರು ವಿಧಾನಸಭೆಗೆ ಪ್ರವೇಶಿಸುವಂತಹ ಮತ್ತು ಮುಸ್ಲಿಂ ಜನಪ್ರತಿನಿಧಿಗಳಿಗೆ ಉಪಮುಖ್ಯಮಂತ್ರಿ, ಕನಿಷ್ಠ 3-4 ಸಚಿವ ಸ್ಥಾನ ಸಿಗುವಂತಹ ಪ್ರಯತ್ನವನ್ನು ಈಗಿನಿಂದಲೇ ಉಲಮಾ-ಉಮರಾಗಳು ಮಾಡಬೇಕು ಎಂದು ಶಾಫಿ ಸಅದಿ ಕರೆ ನೀಡಿದರು.

Similar News