ಉಪ್ಪಿನಂಗಡಿ | ಮನೆಗೆ ನುಗ್ಗಿ ತಂಡದಿಂದ ಹಲ್ಲೆ: ನಾಲ್ವರು ಆರೋಪಿಗಳ ಬಂಧನ

ಮಗಳನ್ನು ವಿವಾಹ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ಯುವಕನಿಂದ ಕೃತ್ಯ: ಆರೋಪ

Update: 2022-11-28 04:40 GMT

ಉಪ್ಪಿನಂಗಡಿ, ನ.28: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಮುಹಮ್ಮದ್ ನಿಝಾಮುದ್ದೀನ್(25), ತೌಫೀಕ್(20) ಅಬ್ದುಲ್ ಸಲೀಂ(23) ಹಾಗೂ ಮಹಮ್ಮದ್ ಶಫೀಕ್ (22) ಬಂಧಿತ  ಆರೋಪಿಗಳಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ನಾಸಿರ್ ಮತ್ತು ಸಮೀರ್ ಎಂಬವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಆಯೋಧ್ಯಾ ನಗರ ಎಂಬಲ್ಲಿನ ನಿವಾಸಿ ತಾಹಿರಾ (38) ಎಂಬವರು ನೀಡಿರುವ ದೂರಿನಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಕಳೆದ ಶುಕ್ರವಾರ ರಾತ್ರಿ 11:15ರ ಸುಮಾರಿಗೆ ಆರೋಪಿಗಳಾದ ಮುಹಮ್ಮದ್ ನಿಝಾಮುದ್ದೀನ್, ತೌಫೀಕ್, ಅಬ್ದುಲ್ ಸಲೀಂ ಹಾಗೂ ಮಹಮ್ಮದ್ ಶಫೀಕ್, ನಾಸಿರ್ ಮತ್ತು ಸಮೀರ್ ಎಂಬವರನ್ನು ಒಳಗೊಂಡ ತಂಡ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿದೆ. ಮನೆಯಲ್ಲಿದ್ದ ತನ್ನ ಪತಿ ಉಸ್ಮಾನ್ ಬ್ಯಾರಿ ಮತ್ತು ಮಕ್ಕಳನ್ನು ಅವ್ಯಾಚ ಪದಗಳಿಂದ ನಿಂದಿಸಿದೆ. ಈ ವೇಳೆ ಮನೆಗೆ ಆಗಮಿಸಿದ ತನ್ನ ಮೈದುನ ಯೂಸುಫ್ ಮೇಲೆ ತಂಡ ಹಲ್ಲೆ ನಡೆಸಿದೆ. ಬಿಡಿಸಲು ಯತ್ನಿಸಿದ ಉಸ್ಮಾನ್ ಬ್ಯಾರಿಗೆ ನಿಝಾಮುದ್ದೀನ್ ಚೂರಿಯಿಂದ ಎದೆಗೆ ಇರಿದಿದ್ದಾನೆ. ಅಲ್ಲದೆ ತಂಡವು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ಜೀವ ಬೆದರಿಕೆಯೊಡ್ಡಿದೆ ಎಂದು ತಾಹಿರಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಉಸ್ಮಾನ್ ಬ್ಯಾರಿಯವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಬ ನಿಝಾಮುದ್ದೀನ್ ನ ಕೋರಿಕೆಯನ್ನು ನಿರಾಕರಿಸಿದ ಕಾರಣಕ್ಕೆ ಆತ ತಂಡ ಕಟ್ಟಿಕೊಂಡು ಬಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸ್ ದೂರಿನಲ್ಲಿ ಆಪಾದಿಸಲಾಗಿದೆ.

ಗಾಯಾಳು ಉಸ್ಮಾನ್ ಬ್ಯಾರಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Similar News