ಉರ್ದು ಸಾಹಿತ್ಯದ ಸರದಾರ ಅಲಿ ಸರ್ದಾರ್ ಜಾಫ್ರಿ

Update: 2022-11-29 04:26 GMT

ಕವಿ ಅಲಿ ಸರ್ದಾರ್ ಜಾಫ್ರಿ ಪ್ರಗತಿಪರ ಬರಹಗಾರರ ಚಳವಳಿಯ ಪ್ರಮುಖರಲ್ಲಿ ಒಬ್ಬರು ಮತ್ತು ಉರ್ದು ಕಾವ್ಯಲೋಕದಲ್ಲಿ ಸರದಾರನಂತೆ ಇದ್ದವರು. ಇಂದು (ನವೆಂಬರ್ 29) ಅವರ ಜನ್ಮದಿನ. 

‘‘ಹರ್ ಆಶಿಕ್ ಹೈ ಸರ್ದಾರ್ ಯಹಾಂ, ಹರ್ ಮಾಶೂಕಾ ಸುಲ್ತಾನಾ ಹೈ’’

ಲೈಲಾ ಮಜನೂ, ಸಲೀಂ ಅನಾರ್ಕಲಿ ಎಂಬಂತಹ ಪ್ರತಿಮೆಗಳ ನಡುವೆ ದುರಂತಮಯ ತೊಳಲಾಟವಿದ್ದ ಹೊತ್ತಲ್ಲಿ ಪ್ರೇಮಕ್ಕೆ ಇಂಥದೊಂದು ನಿರ್ಭಿಡೆಯ ಮತ್ತು ದಿಟ್ಟ ಅಭಿವ್ಯಕ್ತಿಯನ್ನು ಕೊಟ್ಟವರು ಕವಿ ಅಲಿ ಸರ್ದಾರ್ ಜಾಫ್ರಿ. ಬೆಂಕಿಯಂಥ ನಿಗಿನಿಗಿಯೊಂದಿಗಿದ್ದ ಅವರ ಪ್ರಖರ ಕಾವ್ಯ ಹೊಚ್ಚ ಹೊಸ ಪ್ರತಿಮೆಗಳೊಡನೆ ಹುಟ್ಟಿಸಿದ ಅಚ್ಚರಿ ಅಸಾಮಾನ್ಯವಾದುದಾಗಿತ್ತು.

ಪ್ರಗತಿಪರ ಸಾಹಿತಿಗಳ ಚಳವಳಿಗೆ ಅಲಿ ಸರ್ದಾರ್ ಜಾಫ್ರಿ ಅವರ ಕೊಡುಗೆ ಬಹಳ ದೊಡ್ಡದು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದರೊಂದಿಗೆ ಬೆಳಗಿದ ತಲೆಮಾರಿಗೆ ಸೇರಿದವರು. ಕ್ರಮೇಣ ರಾಷ್ಟ್ರೀಯತೆಯಿಂದ ಮಾರ್ಕ್ಸ್‌ವಾದದೆಡೆಗೆ ಹೊರಳಿದವರು. ಮಾರ್ಕ್ಸ್‌ವಾದ ಅವರಿಗೆ ಬೌದ್ಧಿಕ ಶೋಕಿಯಾಗಿರಲಿಲ್ಲ. ಬದಲಾಗಿ ಶ್ರೀಮಂತಿಕೆಯ ಮೇಲ್ಮಧ್ಯಮ ವರ್ಗದ ಸುಖೀ ಬದುಕನ್ನು ಬಿಟ್ಟು ಕಷ್ಟದ ಬದುಕನ್ನು ಆರಿಸಿಕೊಂಡ ಬದ್ಧತೆಯಾಗಿತ್ತು. ಮೂಲಭೂತ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹಲವು ಸಾಧ್ಯತೆಗಳು ತೆರೆದುಕೊಂಡ ಹೊತ್ತು ಅದು. ಶಂಭು ಮಿತ್ರ, ಬಿಜೋನ್ ಭಟ್ಟಾಚಾರ್ಯ, ಮೃಣಾಲ್ ಸೇನ್, ಉತ್ಪಲ್ ದತ್, ಬಲರಾಜ್ ಸಾಹ್ನಿ, ಸಾಹಿರ್ ಲುಧಿಯಾನ್ವಿ, ಕೈಫಿ ಅಜ್ಮಿ, ರಾಜಿಂದರ್ ಸಿಂಗ್ ಬೇಡಿ, ಶೈಲೇಂದ್ರ, ಸಲೀಲ್ ಚೌಧರಿ, ಮಜ್ರೂಹ್ ಸುಲ್ತಾನಪುರಿ, ರಾಮ್‌ವಿಲಾಸ್ ಶರ್ಮಾ, ಕೇದಾರ್‌ನಾಥ್ ಅಗರ್ವಾಲ್, ನಾಗಾರ್ಜುನ್, ಶಂಶೇರ್, ಮಖ್ದೂಮ್ ಮುಹ್ಯುದ್ದೀನ್, ಫೈಝ್ ಅಹ್ಮದ್ ಫೈಝ್, ಇಸ್ಮತ್ ಚುಗ್ತಾಯ್, ಕ್ರಿಶೇನ್ ಚಂದರ್ ಮತ್ತಿತರ ಸಮಾನ ಪ್ರಖ್ಯಾತ ಸೃಜನಶೀಲರಿದ್ದ ಕಾಲಘಟ್ಟ ಅದಾಗಿತ್ತು. ಶ್ರೀಮಂತ ಕುಟುಂಬದವರಾಗಿದ್ದ ಜಾಫ್ರಿ ಅದೆಲ್ಲದರ ಹಂಗಿನಾಚೆಗೆ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದಕ್ಕಾಗಿ ಹಲವು ಬಾರಿ ಜೈಲುವಾಸವನ್ನೂ ಅವರು ಅನುಭವಿಸಬೇಕಾಯಿತು. ಲಕ್ನ್ನೋ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅವರು, 17ನೇ ವಯಸ್ಸಿನಲ್ಲಿಯೇ ಸಣ್ಣಕತೆಗಳನ್ನು ಬರೆಯಲಾರಂಭಿಸಿದವರು. ಅವರು ಉರ್ದು ಸಾಹಿತ್ಯ ಲೋಕಕ್ಕೆ ಪರಿಚಿತರಾದದ್ದು ಸಣ್ಣಕತೆಗಳ ಮೂಲಕವೇ. 1938ರಲ್ಲಿ ‘ಮಂಝಿಲ್’ ಎಂಬ ಸಣ್ಣ ಕಥೆಗಳ ಸಂಗ್ರಹದೊಂದಿಗೆ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಂಡ ಅವರು, 1943ರಲ್ಲಿ ‘ಪರ್ವಾಜ್’ ಕಾವ್ಯಸಂಕಲದ ಮೂಲಕ ಕವಿಯಾಗಿ ಗುರುತಿಸಿಕೊಂಡರು. ಅವರ ‘ನಯಿ ದುನಿಯಾ ಕೊ ಸಲಾಮ್’ ಮತ್ತು ‘ಏಸಿಯಾ ಜಾಗ್ ಉತಾ’ ಅನೇಕ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ಅವರು ನಾಟಕಗಳನ್ನೂ ಬರೆದಿದ್ದರು. ಶೇಕ್ಸ್‌ಪಿಯರ್‌ನ ಕೆಲವು ನಾಟಕಗಳ ಅನುವಾದವನ್ನೂ ಮಾಡಿದ್ದರು. ‘ನಯಾ ಅದಾಬ್’ ಎಂಬ ಮುಂಬೈನಿಂದ ಪ್ರಕಟವಾಗುತ್ತಿದ್ದ ತ್ರೈಮಾಸಿಕದ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ತಮ್ಮ ಕಾವ್ಯದ ಮೂಲಕ ರಾಜಕೀಯ ಜಾಗೃತಿಯನ್ನು ಮೂಡಿಸಲು ತೊಡಗಿದ್ದವರು ಜಾಫ್ರಿ. ಇತರ ಅನೇಕ ಬರಹಗಾರರು ಮತ್ತು ಕವಿಗಳಂತೆ ಜಾಫ್ರಿ ಅವರು ಹಿಂದಿ ಚಲನಚಿತ್ರಗಳಿಗೆ ಹಾಡು ಬರೆಯಲು ಮುಂಬೈಗೆ ಹೋಗಲಿಲ್ಲ. ಅವರು ಅವಿಭಜಿತ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪೂರ್ಣಾವಧಿ ಕಾರ್ಯಕರ್ತನಾಗಿ ಕೆಲಸ ಮಾಡಲು ಅಲ್ಲಿಗೆ ಹೋದರು. ಚಲನಚಿತ್ರ ಸಾಹಿತ್ಯವನ್ನು ಬರೆಯುವಲ್ಲಿ ಆನಂತರ ಅವರು ತೊಡಗಿಸಿಕೊಂಡರು ಮತ್ತು ಅದರಲ್ಲೊಂದು ಎಂದೆಂದೂ ಮಾಸದ ಮಾಧುರ್ಯವನ್ನು ಅವರು ಕಾಯ್ದುಕೊಂಡರು.

1942ರಲ್ಲಿ ಮುಂಬೈಗೆ ತೆರಳಿದ ಅವರು, ಆ ಮಹಾನಗರಿಯಲ್ಲಿಯೇ ತಮ್ಮ ಜೀವನದ ಹೆಚ್ಚಿನ ಸಮಯವನ್ನು ಕಳೆದರು. ಕ್ರಾಂತಿಕಾರಿ ಟರ್ಕಿಶ್ ಕವಿ ನಜೀಮ್ ಹಿಕ್ಮತ್ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಚಿಲಿಯ ಕವಿ ಪಾಬ್ಲೋ ನೆರುಡಾ ಅವರ ಸ್ನೇಹವಲಯದಲ್ಲಿದ್ದ ಜಾಫ್ರಿ, ಕೊನೆಯವರೆಗೂ ಪ್ರಗತಿಪರ ಉರ್ದು ಬರಹಗಾರರ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಉರ್ದು ಮತ್ತು ಹಿಂದಿ ಕಾವ್ಯದ ನಡುವಿನ ಕಂದರವನ್ನು ಕಡಿಮೆ ಮಾಡುವಲ್ಲಿ ಶ್ರಮವಹಿಸಿದ ಅವರು, ಶ್ರೇಷ್ಠ ಕವಿಗಳಾದ ಗಾಲಿಬ್, ಮೀರ್, ಕಬೀರ್ ಮತ್ತು ಮೀರಾ ಅವರ ಕೃತಿಗಳನ್ನು ಎರಡೂ ಭಾಷೆಗಳಲ್ಲಿ ಒಂದೇ ಪುಸ್ತಕದಲ್ಲಿ ಪ್ರಕಟಿಸಿದ್ದು ವಿಶಿಷ್ಟ ಕೆಲಸವಾಗಿ ದಾಖಲಾಗಿದೆ. ಉರ್ದು ಕಾವ್ಯದ ಹಾದಿಯನ್ನು ಹೆಚ್ಚು ಪ್ರಭಾವಿಸಿದ ಇಬ್ಬರು ಕವಿಗಳಾದ ಮಿರ್ ತಾಕಿ ‘ಮಿರ್’ ಮತ್ತು ಗಾಲಿಬ್ ಅವರ ಕೃತಿಗಳ ವಿಮರ್ಶಾತ್ಮಕ ಆವೃತ್ತಿಗಳ ಸಂಪಾದಕರಾಗಿ ಜಾಫ್ರಿ ಅವರದು ಬಹಳ ಮಹತ್ವದ ಕೆಲಸ. ಅವರು ಕಬೀರ್ ಮತ್ತು ಮೀರಾ ಅವರ ಕೃತಿಗಳನ್ನು ಸಂಪಾದಿಸಿದ್ದಾರೆ. ಈ ಎಲ್ಲಾ ಕೃತಿಗಳಲ್ಲಿ ಅವರು ಬರೆದ ಪರಿಚಯ ವಿದ್ವತ್ಪೂರ್ಣ. ಅಸಾಧಾರಣ ಗ್ರಹಿಕೆಯ ವಿಮರ್ಶಕರಾಗಿ ಗುರುತಾಗಿದ್ದ ಅವರು, ಕವಿಯಾಗಿ, ಉರ್ದು ಸಾಹಿತ್ಯ ಪ್ರಪಂಚದಲ್ಲಿ ಮುಕ್ತಛಂದದ ಕಾವ್ಯಕ್ಕೆ ಸ್ಥಾನ ತಂದುಕೊಟ್ಟರು. ಜಾಫ್ರಿಯವರನ್ನು ಶೈರ್-ಎ-ಅವಾಮ್ (ಜನರ ಕವಿ) ಎಂದು ಕರೆಯಲಾಗುತ್ತದೆ.

ಮಾರ್ಕ್ಸ್‌ವಾದವು ಅವರ ಬದುಕು ಮತ್ತು ಬರವಣಿಗೆಯನ್ನು ಪೂರ್ಣವಾಗಿ ವ್ಯಾಪಿಸಿದ್ದರೂ, ಅದು ಅವರಿಗೆಂದೂ ಸೈದ್ಧಾಂತಿಕ ಪಂಜರವಾಗಲಿಲ್ಲ. ಸೂಫಿ ಮತ್ತು ಭಕ್ತಿ ಚಳವಳಿಗಳ ಮಾನವೀಯ ಚೈತನ್ಯ, ಮತ್ತು ಸಹಾನುಭೂತಿಯ ನೆಲೆ, ಕಾಳಿದಾಸನ ಕಾವ್ಯದಲ್ಲಿ ಕಂಡುಬರುವ ಪ್ರಕೃತಿ ಪ್ರೇಮ ಮತ್ತು ಭಾರತದ ಏಕತೆಯ ಸಂಸ್ಕೃತಿಯನ್ನು ಸಮನ್ವಯಗೊಳಿಸಿಕೊಂಡ ದೃಷ್ಟಿ ಅವರದಾಗಿತ್ತು.

ಜಾಫ್ರಿ ಅವರ ಸುದೀರ್ಘ ಸಾಹಿತ್ಯ ಜೀವನದಲ್ಲಿ ಹಲವಾರು ಗೌರವಗಳು ಬಂದವು. ಇವುಗಳಲ್ಲಿ ಪದ್ಮಶ್ರೀ, ಪಾಕಿಸ್ತಾನ ಸರಕಾರದ ಇಕ್ಬಾಲ್ ಪ್ರಶಸ್ತಿ, ಉತ್ತರ ಪ್ರದೇಶ ಉರ್ದು ಅಕಾಡಮಿ ಪ್ರಶಸ್ತಿ, ಕುಮಾರನ್ ಆಸನ್ ಪ್ರಶಸ್ತಿ ಮತ್ತು ಟೊರೊಂಟೊ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿವೆ. 1986ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಅವರನ್ನು ಹೊರಹಾಕಿದ್ದ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್ ನೀಡಿ ಗೌರವಿಸಿತು. 1998ರಲ್ಲಿ ಜಾಫ್ರಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್ ಬಸ್ ಪ್ರಯಾಣವನ್ನು ಕೈಗೊಂಡಾಗ, ಜಾಫ್ರಿ ಅವರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ವಾಜಪೇಯಿಯವರು ಪಾಕ್ ಪ್ರಧಾನಿಗೆ ನೀಡಿದ್ದ ಪ್ರಮುಖ ಉಡುಗೊರೆಗಳಲ್ಲಿ ‘ಸರ್ಹಾದ್’ ಎಂಬ ಮೊತ್ತಮೊದಲ ಯುದ್ಧ ವಿರೋಧಿ ಹಾಡುಗಳ ಆಲ್ಬಂ ಒಂದಾಗಿತ್ತು. ಸೀಮಾ ಅನಿಲ್ ಸೆಹಗಲ್ ಹಾಡಿದ ಈ ಯುದ್ಧವಿರೋಧಿ ಹಾಡುಗಳನ್ನು ಬರೆದವರು ಜಾಫ್ರಿ. ಜಾಫ್ರಿಯವರ ಕವಿತ್ವಕ್ಕೆ ಸಂದ ಬಲು ದೊಡ್ಡ ಗೌರವ ಅದು.

ಸೆಕ್ಯುಲರ್ ಎಂಬುದನ್ನು ಬದುಕಿನುದ್ದಕ್ಕೂ ಆಚರಿಸಿದ್ದ, ಸಾಮ್ರಾಜ್ಯಶಾಹಿಯ ವಿರುದ್ಧ ಜೀವನದುದ್ದಕ್ಕೂ ಹೋರಾಡಿದ್ದ ಜಾಫ್ರಿ, ತಮ್ಮ ಮಾರ್ಕ್ಸ್‌ವಾದಿ ನಂಬಿಕೆಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ವರ್ಗ, ಜಾತಿ, ಧರ್ಮ, ಭಾಷೆ ಮತ್ತು ಲಿಂಗಗಳ ನಡುವಿನ ಸಮಾನತೆಯ ದೃಷ್ಟಿಕೋನವನ್ನು ಬಲಗೊಳಿಸಿಕೊಂಡಿದ್ದವರು.

1913ರ ನವೆಂಬರ್ 29ರಂದು ಉತ್ತರ ಪ್ರದೇಶದಲ್ಲಿ ಜನಿಸಿದ್ದ ಜಾಫ್ರಿ, ತಮ್ಮ. 86ನೇ ವಯಸ್ಸಿನಲ್ಲಿ 2000ದ ಆಗಸ್ಟ್ 1ರಂದು ಮುಂಬೈಯಲ್ಲಿ ನಿಧನರಾದರು. ಅವರ ನಿಧನದಿಂದ ಉರ್ದು ಸಾಹಿತ್ಯವು ತನ್ನ ಪರಿಧಿಯನ್ನು ವಿಸ್ತರಿಸಿದ್ದ ಹಾಗೂ ಆಳವಾದ ಗ್ರಹಿಕೆಗಳನ್ನು ಕೊಟ್ಟಿದ್ದ ವ್ಯಕ್ತಿಯನ್ನು ಕಳೆದುಕೊಂಡಿತು. ನಿಜವಾಗಿಯೂ ಅಲಿ ಸರ್ದಾರ್ ಜಾಫ್ರಿ ಉರ್ದು ಸಾಹಿತ್ಯದ ಸರದಾರನೇ ಆಗಿದ್ದರು.

Similar News