ಹೋಳಿ ಕುಣಿತ ಹಾಗೂ ಕುಣಿತದ ಹಾಡುಗಳು ಮರಾಟಿ ಸಮುದಾಯದ ಸಾಂಸ್ಕೃತಿಕ ಆಸ್ತಿ: ಪೂರ್ಣಿಮಾ

ಹೋಳಿ ಹಾಡು-ಕುಣಿತಗಳ ದಾಖಲೀಕರಣ

Update: 2022-11-29 13:36 GMT

ಉಡುಪಿ: ಕರಾವಳಿ ಕರ್ನಾಟಕ ಶ್ರೀಮಂತ ಪರಂಪರೆಯನ್ನು ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಪ್ರಚಾರದಲ್ಲಿ ರುವ ಭಿನ್ನ ಕಲಾಪ್ರಕಾರಗಳಿಗೆ ದೀರ್ಘ ಇತಿಹಾಸವಿದೆ. ಅಂತಹ ಕಲಾಪ್ರಕಾರಗಳಲ್ಲಿ ಮರಾಟಿ ಸಮುದಾಯದ ಹೋಳಿ ಕುಣಿತ ಹಾಗೂ ಕುಣಿತದ ಹಾಡುಗಳು ಆ ಸಮುದಾಯದ ಸಾಂಸ್ಕೃತಿಕ ಆಸ್ತಿ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಹೇಳಿದ್ದಾರೆ.

ಶ್ರೀದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘ ಅಂಜಾರು, ಹಿರಿಯಡ್ಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ನಗರದ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿ ರುವ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್.ಆರ್.ಸಿ) ಆಶ್ರಯದಲ್ಲಿ ಹೋಳಿ ಹಾಡುಗಳ ದಾಖಲೀಕರಣ  ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದ ಆಸ್ತಿಯಾದ ಇವು ಇಂದು ಮರೆಯಾಗುವ ಕಾಲಘಟ್ಟದಲ್ಲಿ ಇವುಗಳ ದಾಖಲೀಕರಣ ಪ್ರಕ್ರಿಯೆಯನ್ನು  ಹಿರಿಯಡ್ಕ, ಬಾಳೆತೋಟ, ಅಂಜಾರು ಶ್ರೀದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾಸಂಘ ಕೈಗೆತ್ತಿ ಕೊಂಡಿರುವುದು ಸುತ್ಯಾರ್ಹ ಎಂದು ಪೂರ್ಣಿಮಾ ಹೇಳಿದರು.

ಉಡುಪಿ ಜಿಲ್ಲಾ ಮರಾಟಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ ಚೇರ್ಕಾಡಿ ಮಾತನಾಡಿ, ಮರಾಟಿ ಸಮುದಾಯವು ಐತಿಹಾಸಿಕ ಹಿನ್ನೆಲೆಯುಳ್ಳ ಸಮಾಜ ವಾಗಿದ್ದು ಅದರ ಕುರಿತು ಆಳವಾದ ಅಧ್ಯಯನ ಅಗತ್ಯವಿದೆ ಹಾಗೂ ಸಮಾಜದ ಎಲ್ಲಾ ಸಾಂಸ್ಕೃತಿಕ ವಿವರಗಳು ದಾಖಲೆಯಾಗಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾದ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ದಾಖಲೀಕರಣದ ಮಹತ್ವವನ್ನು ವಿವರಿಸಿ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಹೋಳಿ ಹಾಡುಗಾರರಾದ ನರಸಿಂಹ ನಾಯ್ಕ್, ವಿಠಲ ನಾಯ್ಕ ಉಪಸ್ಥಿತರಿದ್ದರು. ನಂತರ ನಡೆದ ದಾಖಲೀಕರಣದಲ್ಲಿ ನಿವೃತ್ತ ಅಧ್ಯಾಪಕ  ಪಾಂಡುರಂಗ ನಾಯ್ಕ್, ನರಸಿಂಹ ನಾಯ್ಕ್, ಮಂಜುನಾಥ ನಾಯ್ಕ್, ತಿಮ್ಮ ನಾಯ್ಕ್, ಲಕ್ಷ್ಮಣ ನಾಯ್ಕ್ ಹಾಗೂ ನಾರಾಯಣ ನಾಯ್ಕ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದಯಾನಂದ ನಾಯ್ಕ್ ಮಂಚಿ ಅವರಿಂದ  ಗೋಂದೋಲು ಹಾಡಿನ ದಾಖಲೀಕರಣ ಸಹ ನಡೆಯಿತು. ವಿನೀಶ್ ಮತ್ತು ರಾಜೇಶ್ ವೀಡಿಯೋ ದಾಖಲಾತಿಯಲ್ಲಿ ಸಹಕರಿಸಿದರು.

ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಮ್ಮಟ ನಿರ್ದೇಶಕ ಸಂಜೀವ ನಾಯ್ಕ್ ಕೋಟ ಕಾರ್ಯಕ್ರಮ ನಿರ್ವಹಿಸಿದರು. 

Similar News