ವಕ್ಫ್ ಬೋರ್ಡ್ ಕಾಲೇಜುಗಳಲ್ಲಿ ಸರ್ವ ಧರ್ಮೀಯ ಹೆಣ್ಣು ಮಕ್ಕಳಿಗೆ ಅವಕಾಶ: ಶಾಫಿ ಸಅದಿ

Update: 2022-11-30 14:24 GMT

ಬೆಂಗಳೂರು, ನ.30: ರಾಜ್ಯದ ವಕ್ಫ್ ಬೋರ್ಡ್ ಅಧೀನದಲ್ಲಿರುವ ಆಸ್ತಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ನಮ್ಮಲ್ಲಿ ಉಳಿಕೆ ಇರುವ 25 ಕೋಟಿ ರೂ.ಅನುದಾನದಲ್ಲಿ 10 ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಎಲ್ಲ ವರ್ಗಗಳ, ಎಲ್ಲ ಧರ್ಮಗಳ ಹೆಣ್ಣು ಮಕ್ಕಳಿಗೂ ಪ್ರವೇಶಾವಕಾಶ ಇರಲಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ (Shafi Sadi) ತಿಳಿಸಿದರು. 

‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಕರೆಯಂತೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪ್ರತ್ಯೇಕವಾಗಿ ಮುಸ್ಲಿಮ್ ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ಯಾಕೆ ವಿವಾದ ಮಾಡಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ತಲಾ 2.50 ಕೋಟಿ ರೂ.ವೆಚ್ಚದಲ್ಲಿ 10 ಜಿಲ್ಲೆಗಳಲ್ಲಿ ಕಾಲೇಜುಗಳಿಗೆ ಅಗತ್ಯವಿರುವ ಕಟ್ಟಡಗಳನ್ನು ವಕ್ಫ್ ಬೋರ್ಡ್ ವತಿಯಿಂದ ನಿರ್ಮಿಸಿಕೊಡಲಾಗುವುದು. ಆಯಾ ಜಿಲ್ಲೆಯಲ್ಲಿರುವ ಸಂಬಂಧಪಟ್ಟ ವಕ್ಫ್ ಸಂಸ್ಥೆಯವರು ಶಿಕ್ಷಣ ಸಂಸ್ಥೆಯ ನಿರ್ವಹಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು. 

ಈಗಾಗಲೇ, ವಕ್ಫ್ ಆಸ್ತಿಗಳಲ್ಲಿರುವ ಅಲ್ ಅಮೀನ್ ಶಿಕ್ಷಣ ಸಂಸ್ಥೆಗಳು, ಬಂದೇ ನವಾಝ್ ವೈದ್ಯಕೀಯ ಕಾಲೇಜು, ಅಂಜುಮನ್ ಹುಬ್ಬಳ್ಳಿ, ಅಂಜುಮನ್ ಬಾಗಲಕೋಟೆ, ಬೆಂಗಳೂರಿನ ಹಝ್ರತ್ ಹಮೀದ್ ಶಾ, ಮುಹೀಬ್ ಶಾ ಶಿಕ್ಷಣ ಸಂಸ್ಥೆ, ಅಬ್ಬಾಸ್ ಖಾನ್ ಮಹಿಳಾ ಕಾಲೇಜು, ಹಸ್ನತ್ ಮಹಿಳಾ ಕಾಲೇಜು ಇದಕ್ಕೆ ಉದಾಹರಣೆಯಾಗಿವೆ ಎಂದು ಶಾಫಿ ಸಅದಿ ತಿಳಿಸಿದರು.

ವಕ್ಫ್ ಆಸ್ತಿಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು 200 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮುಖ್ಮೀತ್ ಎಸ್.ಭಾಟಿಯಾ ಅವರಿಗೂ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ವತಿಯಿಂದ ಪ್ರತ್ಯೇಕವಾಗಿ ಮುಸ್ಲಿಮ್ ಕಾಲೇಜುಗಳನ್ನು ಸ್ಥಾಪನೆ ಮಾಡುವ ಯಾವುದೆ ಉದ್ದೇಶ ಇಲ್ಲ. ಅಂತಹ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ಸಲ್ಲಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

Similar News