ಮಕ್ಕಳ ವಿಚಾರದಲ್ಲಿ ಭಾವೋದ್ರೇಕದ ವರದಿ ಸರಿಯಲ್ಲ: ಸಾಹಿತಿಗಳು, ಶಿಕ್ಷಣ ತಜ್ಞರ ಖಂಡನೆ

Update: 2022-11-30 15:47 GMT

ಬೆಂಗಳೂರು, ನ.30: ಶಾಲಾ ಮಕ್ಕಳ ಬ್ಯಾಗ್‍ನಲ್ಲಿ ದೊರೆತ ವಸ್ತುಗಳ ಬಗ್ಗೆ ಪ್ರಕಟಿಸಿದ ವರದಿಯು, ಮಕ್ಕಳ ಶಿಕ್ಷಣದ ಕ್ರಮಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರ ಗಂಭೀರವಾಗಿ ಯೋಚಿಸುವುದಕ್ಕೆ ಪ್ರಚೋದನೆ ನೀಡಿದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಸರಿಯಲ್ಲ ಎಂದು ಸಾಹಿತಿಗಳು ಸೇರಿ ಶಿಕ್ಷಣ ತಜ್ಞರು ಟೀಕಿಸಿದ್ದಾರೆ. 

ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ., ಸಾಹಿತಿ ಡಾ. ಕೆ.ಮರುಳಸಿದ್ದಪ್ಪ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಜಿ. ರಾಮಕೃಷ್ಣ,  ಪ್ರೊ.  ಎಸ್.ಜಿ. ಸಿದ್ಧರಾಮಯ್ಯ,  ಪ್ರೊ. ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಡಾ. ವಿಜಯ, ಸುರೇಂದ್ರ ರಾವ್ ಬುಧವಾರ ಈ ಕುರಿತು ಪ್ರಕಟನೆ ಹೊರಡಿಸಿದ್ದಾರೆ.

ಮಕ್ಕಳ ಶಾಲಾ ಬ್ಯಾಗ್‍ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ನೀರಿನ ಬಾಟಲ್‍ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿವೆ. ಹಲವು ರೀತಿಯಲ್ಲಿ ಇಂಥಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾಗಿರುವ ಸರಕಾರವೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ನೆರವಾಗಬೇಕೇ ಹೊರತು, ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಕಾಲದಲ್ಲಿ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ಕಳೆದ ವರ್ಷ ಜೂನ್‍ನಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇದನ್ನು ಕಡೆಗಣಿಸಿದ ಕಾರಣ ಶಾಲೆಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.

ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ನಮ್ಮ ಸರಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗು ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿವೆ. ಹೀಗಾಗಿ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲಕ್ಕೆ ಸಿಲುಕಿ, ಪ್ರಯೋಗಗಳಿಗೆ ಮುಂದಾಗುವಂತಾಗಿದೆ ಎಂದು ತಿಳಿಸಿದ್ದಾರೆ.

Similar News