ದಲಿತರ ಮೇಲಿನ ಹಲ್ಲೆಗಳನ್ನು ಖಂಡಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ

Update: 2022-11-30 16:36 GMT

ಬೆಂಗಳೂರು, ನ.30: ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ, ಬುಧವಾರದಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದೀನ ದಲಿತ ಅಲ್ಪಸಂಖ್ಯಾತರ ರಕ್ಷಣಾ ವೇದಿಕೆಯು ಪ್ರತಿಭಟನೆ ನಡೆಸಿದೆ. 

ಸುದ್ದಿಗಾರರೊಂದಿಗೆ ಸಂಘದ ಉಪಾಧ್ಯಕ್ಷ ಶಂಕರ್ ಎನ್. ಮಾತನಾಡಿ, ಸರಕಾರದ ಕಾರ್ಯಕ್ರಮಗಳಲ್ಲಿ ಸಂವಿಧಾನದ ಪಿತಾಮಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ಸರಕಾರದ ಈ ನಡವಳಿಕೆಯಿಂದ ದಲಿತರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ಸರಕಾರವು ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಆದರೆ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಇದರಿಂದ ಅರ್ಹ ದಲಿತ ಫಲಾನುಭವಿಗಳಗೆ ಅನ್ಯಾಯ ಆಗುತ್ತಿದೆ ಎಂದ ಅವರು, ವಿವಿಧ ಸರಕಾರಿ ಇಲಾಖೆಗಳಿಗೆ ಅನುದಾನವನ್ನು ನೀಡಿ, ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದರು. 

2018, 2019, 2020 ಹಾಗೂ 2021ರವರೆಗೆ ಸಾರಥಿ ಯೋಜನೆ ಅಡಿಯಲ್ಲಿ ಆಟೋ ರಿಕ್ಷಾ, ಕಾರು ಖರೀದಿಸಲು ಪ್ರೋತ್ಸಾಹ ನಿಧಿಯನ್ನು ಪಡೆಯಲು ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ, ಯಾವುದೇ ರೀತಿಯ ಪ್ರೋತ್ಸಾಹಧನವನ್ನು ನೀಡುತ್ತಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ಓ.ಬಾಲನ್, ಉಪಾಧ್ಯಕ್ಷ ಶಂಕರ್ ಎನ್., ಆರ್.ಗೋಪಾಲಕೃಷ್ಣ, ಕಲಾವತಿ, ಧ್ರುವ ಕುಮಾರ್, ಚಲಪತಿ ಮತ್ತಿತರರು ಉಪಸ್ಥಿತರಿದ್ದರು.

Similar News