ಯಕ್ಷಗಾನ ಕ್ಷೇತ್ರಕ್ಕೆ ಕುಂಬ್ಳೆ ಸುಂದರರಾವ್ ಅವರ ಕೊಡುಗೆ ಅಪಾರ: ಪ್ರೊ. ಯಡಪಡಿತ್ತಾಯ

ಮಂಗಳೂರು ವಿವಿಯಲ್ಲಿ ಶ್ರದ್ಧಾಂಜಲಿ ಸಭೆ

Update: 2022-12-03 11:58 GMT

ಕೊಣಾಜೆ: ಕುಂಬ್ಳೆ ಸುಂದರ ರಾವ್ ಅವರು ಓರ್ವ ಸೃಜನಶೀಲ  ಕಲಾವಿದರಾಗಿದ್ದವರು. ಅವರ ಕಲಾನೈಪುಣ್ಯತೆ, ಮಾತುಗಾರಿಕೆ, ಪುರಾಣ ಜ್ಞಾನ, ಶಬ್ದ ಪ್ರಯೋಗ, ಹಾಸ್ಯ ಮತ್ತು ಗಂಭೀರ ಪಾತ್ರಗಳ ನಡುವಿನ ಚಾಕಚಕ್ಯತೆ ಅದ್ಭುತವಾಗಿತ್ತು. ಯಕ್ಷಗಾನ ಲೋಕಕ್ಕೆ ಇವರ ಕೊಡುಗೆ ಅನನ್ಯವಾದದ್ದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪಿ.ಎಸ್ .ಯಡಪಡಿತ್ತಾಯ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಇತ್ತೀಚೆಗೆ ನಿಧನರಾದ ಕುಂಬ್ಳೆ ಸುಂದರ ರಾವ್ ಅವರಿಗೆ  ಯಕ್ಷಗಾನ ಕಲಾ ಕೇಂದ್ರದಲ್ಲಿ  ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನವನ್ನು ಸಲ್ಲಿಸಿದರು.

ಯಕ್ಷಗಾನದ ಬಗ್ಗೆ ಅಪಾರ ಜ್ಞಾನವಂತರಾಗಿದ್ದ ಅವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರ ಅವಧಿಯಲ್ಲಿ ಯಕ್ಷಗಾನ  ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಎಲ್ಲಾ ಚಟುಚಟಿಕೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡಿದವರಾಗಿದ್ದಾರೆ.ಇಂತಹ ಮಹಾನ್ ಕಲಾವಿದರನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಮಂಗಳೂರು ವಿವಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ನುಡಿನಮನವನ್ನು ಸಲ್ಲಿಸಿ ಮಾತನಾಡಿದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕುಂಬಳೆ ಸುಂದರ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಯಕ್ಷಮಂಗಳ ತಂಡದ ವಿದ್ಯಾರ್ಥಿನಿಯಾದ ಜನನಿ ಅವರು ಸುಂದರ್ ರಾವ್ ಅವರ‌ ಇಷ್ಟವಾದ ಯಕ್ಷಗಾನ ಪ್ರಸಂಗದ ಪದ್ಯವನ್ನು ಹಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ಸತೀಶ್  ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Similar News