ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023

Update: 2022-12-03 15:17 GMT

ಉಡುಪಿ, ಡಿ.3: ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ನ.9ರಂದು ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡಿ.4ರ ರವಿವಾರ ಕೊನೆಯ ವಿಶೇಷ  ನೋಂದಣಿ ಅಭಿಯಾನ ದಿನವಾಗಿರುತ್ತದೆ.

ಈ ಸಂದರ್ಭದಲ್ಲಿ ಜಿಲ್ಲೆಯ ಒಟ್ಟು 1111 ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಖುದ್ದು ಉಪಸ್ಥಿತರಿ ರುತ್ತಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು ಹಾಗೂ ತಿದ್ದುಪಡಿಮಾಡಲು ಅಥವಾ ವರ್ಗಾವಣೆ ಮಾಡಲು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹಾಗೂ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇರುವ ಬಗ್ಗೆಯೂ  ಪರಿಶೀಲನೆ ನಡೆಸಲು ಅವಕಾಶವಿರುತ್ತದೆ.

ಆದ್ದರಿಂದ ಈವರೆಗೆ  ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗದೇ ಇರುವವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬಹುದು. ಅಲ್ಲದೇ ಮತದಾರರ ಪಟ್ಟಿಯ ಪರಿಶೀಲನೆಗೆ ಡಿ.4ರಂದು ಸಾರ್ವಜನಿಕರು ಹತ್ತಿರ ಮತಗಟ್ಟೆಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ವೀಣಾ ಬಿ.ಎನ್. ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಟೋಲ್‌ಫ್ರಿ ಸಂಖ್ಯೆ 1950ಕ್ಕೆ ಕರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳ ಬಹುದು. ಅಲ್ಲದೇ ವೋಟರ್ ಹೆಲ್ಫ್‌ಲೈನ್ (Voter Helpline) ಆ್ಯಪ್ ಅಥವಾ -www.nvsp.in-ನಲ್ಲಿ ಆನ್‌ಲೈನ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Similar News