ಐಎಎಸ್ ಅಧಿಕಾರಿ ಸಹಾಯದಿಂದ ಆಸ್ತಿ ಕಬಳಿಕೆ: ರೋಹಿಣಿ ಸಿಂಧೂರಿ ಪತಿ ವಿರುದ್ಧ ಗಾಯಕ ಲಕ್ಕಿ ಅಲಿ ಆರೋಪ

Update: 2022-12-05 10:26 GMT

ಬೆಂಗಳೂರು, ಡಿ.5 : ಖ್ಯಾತ ಗಾಯಕ ಲಕ್ಕಿ ಅಲಿ  (Lucky Ali) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೈದುನ ಮಧುಸೂಧನ್ ರೆಡ್ಡಿ ಅವರ ನಡುವಿನ ಆಸ್ತಿ ವಿವಾದ ಇದೀಗ ಹೊಸ ತಿರುವು ಪಡೆದಿದೆ. ತಮ್ಮ ಆಸ್ತಿಯನ್ನು ಐಎಎಸ್ ಅಧಿಕಾರಿಯ ಸಹಾಯದಿಂದ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ಲಕ್ಕಿ ಅಲಿ ಆರೋಪಿಸಿದ್ದು ಈ ಅಕ್ರಮ ಚಟುವಟಿಕೆಯನ್ನು ನಿಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಲಕ್ಕಿ ಅಲಿ ಅವರು ಮಾಡಿರುವ ಸರಣಿ ಟ್ವೀಟ್‍ಗಳಲ್ಲಿ ರೋಹಿಣಿ ಸಿಂಧೂರಿ ಅವರ ಹೆಸರು ಉಲ್ಲೇಖವಾಗಿದೆಯಾದರೂ ತಮಗೂ ಈ ವಿವಾದಕ್ಕೂ ಸಂಬಂಧಿವಿಲ್ಲ ಎಂದು ಆಕೆ ಹೇಳಿದ್ದಾರಲ್ಲದೆ ತಮ್ಮನ್ನು ಈ ವಿವಾದದಲ್ಲಿ ಎಳೆದು ತಂದಿದ್ದಕ್ಕಾಗಿ ಗಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ತಿಳಿಸಿದ್ದಾರೆ.

ಮಧುಸೂದನ್ ರೆಡ್ಡಿ ಪ್ರಕಾರ ಈ ನಿರ್ದಿಷ್ಟ ಆಸ್ತಿಯನ್ನು 2012 ರಲ್ಲಿ ಲಕ್ಕಿ ಅಲಿ ಸಹೋದರ ಮನ್ಸೂರ್ ಆಲಿಯಿಂದ ಖರೀದಿಸಲಾಗಿದೆ ಹಾಗೂ ಈ ಮೂರು ಎಕರೆ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ತಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ. ತಮಗೆ ಸೇರಿದ್ದ ಆಸ್ತಿಯನ್ನು ನೋಡಲು ತೆರಳಿದಾಗ ತಮಗೆ ಮತ್ತು ತಮ್ಮ ಸಹವರ್ತಿಗಳಿಗೆ ಗಾಯಕನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಧುಸೂದನ್ ರೆಡ್ಡಿ ಅವರು ನವೆಂಬರ್ 28 ರಂದು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಿವಾದಕ್ಕೀಡಾಗಿರುವ ಜಮೀನು ಬೆಂಗಳೂರಿನ ಯಲಹಂಕ ಸಮೀಪದ ಕೆಂಚನಹಳ್ಳಿ ಪಕ್ಕದಲ್ಲಿದೆ. "ಇದು `ಟ್ರಸ್ಟ್ ಆಸ್ತಿ' ಆಗಿದೆ ಹಾಗೂ ಬೆಂಗಳೂರಿನ ಭೂಮಾಫಿಯಾದ ಸುಧೀರ್ ರೆಡ್ಡಿ (ಮತ್ತು ಮಧು ರೆಡ್ಡಿ) ಆತನ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಹಾಯದಿಂದ ಒತ್ತುವರಿ ಮಾಡಲಾಗಿದೆ,'' ಎಂದು ಲಕ್ಕಿ ಆಲಿ ಟ್ವೀಟ್ ಮೂಲಕ ಹೇಳಿದ್ದಾರೆ.

ಅವರು ತಮ್ಮ ಫಾರ್ಮ್‍ಗೆ ಅಕ್ರಮವಾಗಿ ಪ್ರವೇಶಿಸಿ ಅಗತ್ಯ ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದಾರೆ, ಈ ಕುರಿತು ಎಸಿಪಿಗೆ ದೂರು  ನೀಡಿದ್ದರೂ ಫಲ ನೀಡಿಲ್ಲ, ಸ್ಥಳೀಯ ಪೊಲೀಸರಿಂದ ಸಹಾಯ ದೊರಕುತ್ತಿಲ್ಲ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ.

ಈ ಆಸ್ತಿಯ ಮೇಲೆ ಹಕ್ಕು ಸ್ಥಾಪಿಸುವುದರಿಂದ ಆತನಿಗೆ ತಡೆಯಾಜ್ಞೆ ಇದೆ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸಿಂಧೂರಿ ಹೇಳಿದ್ದಾರೆ.

ಮಧುಸೂದನ್ ರೆಡ್ಡಿ ತಮ್ಮ ದೂರಿನಲ್ಲಿ ತಾವು ಈ ಆಸ್ತಿಯ ಒಡೆತನವನ್ನು ತಮ್ಮ ತಂದೆಯ ನಿಧನಾನಂತರ ಪಡೆದಿದ್ದಾಗಿ ಹಾಗೂ ಎಲ್ಲಾ ದಾಖಲೆಗಳಿವೆ ಎಂದಿದ್ದಾರೆ. ಸೈಟ್‍ಗೆ ತಾವು ಭೇಟಿ ನೀಡಿದಾಗಿನ ವೀಡಿಯೋವನ್ನೂ ಅವರು ಹಂಚಿಕೊಂಡಿದ್ದಾರಲ್ಲದೆ ಅಲ್ಲಿ ಗಿಡ ನೆಡಲೆಂದು ತಾವು ಹಾಗೂ ತಮ್ಮ ತಾಯಿ ಹೋದಾಗ ಅಲ್ಲಿ ಲಕ್ಕಿ ಆಲಿ ನಿಯೋಜಿಸಿದ ಗನ್ ಮ್ಯಾನ್ ಇದ್ದರು ಎಂದಿದ್ದಾರೆ.

''ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ನೋಡಿದ್ದೇನೆ. ಯಾವ ಕಾರಣಕ್ಕೆ ಪೊಲೀಸ್ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಯಾವ ಪೊಲೀಸ್ ಠಾಣೆ ಅನ್ನೊ ಬಗ್ಗೆ ಮಾಹಿತಿ ತರಿಸಿಕೊಳ್ಳೊತ್ತೇನೆ. ಈ ಬಗ್ಗೆ ಡಿಜಿ ಜೊತೆ ನಾನು ಮಾತನಾಡುತ್ತೇನೆ''

-ಗೃಹ ಸಚಿವ ಅರಗ ಜ್ಞಾನೇಂದ್ರ

Similar News