ಬ್ರಹ್ಮಾವರ ಸರಕಾರಿ ಶಾಲೆ ಅಭಿವೃದ್ಧಿಗೆ ಒಡಂಬಡಿಕೆ

Update: 2022-12-05 14:57 GMT

ಉಡುಪಿ, ಡಿ.5: ಬ್ರಹ್ಮಾವರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಕ್ಕೆ ಮೂಲಭೂತ ಸೌಲಭ್ಯ ಸೇರಿ ದಂತೆ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ 3 ವಿಭಾಗಗಳನ್ನು ಒಂದುಗೂಡಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ಹೆಸರಿನಡಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಇಂದು ಒಡಂಬಡಿಕೆಗೆ ಸಹಿ ಮಾಡಲಾಯಿತು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಶಾಸಕ ಕೆ.ರಘುಪತಿ ಭಟ್ ಸಮ್ಮುಖದಲ್ಲಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ ಇವರ ನಡುವೆ ಒಡಂಬಡಿಕೆಗೆ ಸಹಿ ಮಾಡಲಾಯಿತು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗ ಸೇರಿದಂತೆ ಮೂರು ಶಾಲೆಗಳಲ್ಲಿ ಒಟ್ಟು 1,700 ವಿದ್ಯಾರ್ಥಿ ಗಳು ವ್ಯಾಸಂಗ ನಡೆಸುತ್ತಿದ್ದು, 2.47 ಕೋಟಿ ವೆಚ್ಚದಲ್ಲಿ ಈ ಶಾಲೆಗಳಲ್ಲಿ ತರಗತಿ ಕೊಠಡಿಗಳ ಸಂಕಿರ್ಣ, ಪೂರ್ವ ಪ್ರಾಥಮಿಕ ವಿಭಾಗವನ್ನು ಆರಂಭಿಸಲು ನಿರ್ಧರಿಸಿ ನಿಯಮಾವಳಿ ಯಂತೆ ಸಿಬ್ಬಂದಿಗಳಿಗೆ ಗೌರವಧನ ನೀಡಲು 10ಲಕ್ಷ ರೂ. ಮೊತ್ತ ನೀಡಲು ದಾನಿಗಳು ಒಪ್ಪಿಗೆಯನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಕುಲಾಲ್, ಪೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಹಾರಾಡಿ, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ದೇವ ಕುಮಾರಿ, ಪೌಢ ಶಾಲಾ ವಿಭಾಗದ ಬಿ.ಟಿ.ನಾಯ್ಕ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ  ರವೀಂದ್ರ ಉಪಾಧ್ಯಾಯ, ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷರಾದ ನಾಗರಾಜ್ ಶೆಟ್ಟಿ, ರಾಜೀವ ಶೆಟ್ಟಿ ಉಪಸ್ಥಿತರಿದ್ದರು.

Similar News