ಇಂದಿನ ಸವಾಲುಗಳನ್ನು ಎದುರಿಸಲು ಸಂವಿಧಾನದಲ್ಲಿ ಪರಿಹಾರವಿದೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-12-06 08:07 GMT

ಬೆಂಗಳೂರು, ಡಿಸೆಂಬರ್ 06:ಇಂದಿನ ಸವಾಲುಗಳನ್ನು ಎದುರಿಸಲು ಸರ್ಕಾರ ಸಂವಿಧಾನದ ಆಶ್ರಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ  ನಮ್ಮ ಸರ್ಕಾರ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು. 

ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ಹಾಗೂ ಪುಣ್ಯ ಸ್ಮರಣೆಯ ದಿನವಾದ ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

ಅಂಬೇಡ್ಕರ್ ಅವರು ಸಂವಿಧಾನದ ಜೀವಂತಿಕೆಗೆ ಬದಲಾದ ಕಾಲದ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಲು ಸಂವಿಧಾನದಲ್ಲಿ ತಿದ್ದುಪಡಿ ತರುವ ಆಯಾಮ ನೀಡಿರುವುದು ಎಂಥಾ ಬದಲಾದ ಕಾಲಕ್ಕೂ ಸ್ಪಂದಿಸುವಂಥದ್ದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿಗೆ ಪ್ರಜಾಪ್ರಭುತ್ವ ಹೇಗೆ ಯಶಸ್ವಿಯಾಗಬಹುದು ಎಂದು ತೋರಿಸಿದವರು. ಹಲವಾರು ಭಾಷೆ, ಜಾತಿ, ಪ್ರಾಂತ್ಯಗಳಿಂದ ಕೂಡಿದ ಭಾರತದಲ್ಲಿ ಒಂದು ಸಂವಿಧಾನದಿಂದ ಒಂದು ಮಾಡಿ ಎಲ್ಲರ ಭಾವನೆಗಳನ್ನು ಹೆಣೆದು ಅಖಂಡ ಭಾರತ ದೇಶವನ್ನು ರೂಪಿಸುವ ಜೊತೆಗೆ ದೀರ್ಘಕಾಲ ಪ್ರಜಾಪ್ರಭುತ್ವದ ಜೀವಂತಿಕೆಗೆ ನಾಂದಿ ಹಾಡಿದ್ದಾರೆ ಎಂದರು. 

ಸಂವಿಧಾನ ಇಲ್ಲದಿದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಹಲವಾರು ದೇಶಗಳು ಪ್ರಜಾಪ್ರಭುತ್ವದ ಪ್ರಯೋಗದಲ್ಲಿ ಎಲ್ಲಿ ಯಶಸ್ವಿಯಾಗಿಲ್ಲವೋ, ಅಲ್ಲೇ ಭಾರತ ಯಶಸ್ವಿಯಾಗಲು ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರು ಮಾಡಿರುವ ಕಾರ್ಯ ಕಾಲಕಾಲಕ್ಕೆ ಪ್ರಸ್ತುತ ಹಾಗೂ ಶಾಶ್ವತವಾಗುತ್ತಿದೆ. ನಿಜವಾದ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಸಂವಿಧಾನದ ಅಶಯಗಳಾದ, ಸಮಾನತೆ, ಏಕತೆ, ಒಕ್ಕೂಟ ವ್ಯವಸ್ಥೆ, ಭ್ರಾತೃತ್ವ, ಸಮಾನತೆಯ ವಿಚಾರ ಗಳಲ್ಲಿ ಅತ್ಯಂತ ಮಾನವೀಯ ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಬದುಕಿನ ನೋವು, ಅಪಮಾನದ ಅನುಭವಗಳನ್ನು ಇತರರು ಅನುಭವಿಸಬಾರದು ಎಂದು ಸಂವಿಧಾನದ ರಕ್ಷಣೆ ಯನ್ನು ತುಳಿತಕ್ಕೆ ಹಾಗೂ ನಿಂದನೆಗೆ ಒಳಗಾದ ವರ್ಗಕ್ಕೆ ರಕ್ಷಣೆ ನೀಡುವ  ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ, ಆರ್ಥಿಕತೆಯಲ್ಲಿ ಸಮಾನತೆಯ ಬೆಳವಣಿಗೆಗೆ ಅವರು ಮಹತ್ವ ನೀಡಿದ್ದರು ಎಂದರು. 

ಹೋರಾಟದ ಕಲ್ಪನೆ: ಶಿಕ್ಷಣ, ಸಂಘಟನೆ, ಹೋರಾಟ ಎಂಬ ಘೋಷವಾಕ್ಯದಿಂದ ಜನರ ಜಾಗೃತಿ , ಬುದ್ದಿವಂತರನ್ನಾಗಿಸುವುದು ಹಾಗು ಹೋರಾಟದ ಕಲ್ಪನೆ ನೀಡಿದ್ದಾರೆ. ನಿಜವಾಗಿಯೂ ನಾವೆಲ್ಲರೂ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯಭಾಗ್ಯ ಎಂದರು. 

ಸಂವಿಧಾನದ ಆಶಯಗಳನ್ನು ಈಡೇರಿಸಲು ಬದ್ಧ: 

ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಈಡೇರಿಸಲು ಆಡಳಿತ, ಆಡಳಿತ ವರ್ಗ, ಸಮಾಜ ಎಲ್ಲರೂ ಸಂಕಲ್ಪ ಮಾಡಿ ಸಿದ್ಧಿಸಿಕೊಳ್ಳುವ  ಕೆಲಸ ಮಾಡಬೇಕು. 

ಸಾಮಾಜಿಕ  ನ್ಯಾಯ

ಸಮಾನತೆ, ಸಾಮಾಜಿಕ ನ್ಯಾಯ ಮಾತಿನಿಂದಾಗುವುದಿಲ್ಲ  ಎನ್ನುವುದು ನಮ್ಮ ನಂಬಿಕೆ. ಇವು ಭಾಷಣಗಳ ಸರಕಾಗಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅದನ್ನು ಸಂವಿಧಾನದಲ್ಲಿ ಅಳವಡಿಸಿದ್ದರು.  ಸಾಮಾಜಿಕ ಸಮಾನತೆ ತರಲು, ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾಗೂ ಎಲ್ಲಾ ಆಯಾಮಗಳಲ್ಲಿ ಅವರಿಗೆ ಮುಕ್ತ ಅವಕಾಶ ನೀಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು. 

''ಮೀಸಲಾತಿ ಹೆಚ್ಚಳ: ಕ್ರಾಂತಿಕಾರಿ ನಿರ್ಧಾರ''

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದಲ್ಲಿ ಶಕ್ತಿಯನ್ನು ತುಂಬುವ ಕೆಲಸ ಆಗಲಿದೆ. 29 ಸಾವಿರ ಕೋಟಿ ರೂ.ಗಳನ್ನು ಎಸ್.ಸಿ.ಎಸ್. ಪಿ/ ಟಿ ಎಸ್.ಪಿ ಅನುದಾನದಲ್ಲಿ ಮೀಸಲಿರಿಸಲಾಗಿದೆ. ಶಿಕ್ಷಣ ಕ್ಕೆ ಒಟ್ಟು ಕೊಟ್ಟು ನೂರು ಅಂಬೇಡ್ಕರ್ ಹಾಸ್ಟೆಲ್ ಗಳನ್ನು, 55 ಕನಕದಾಸ ಹಾಸ್ಟೆಲ್ ಹಾಗೂ 5 ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮೈಸೂರು, ಧಾರವಾಡ, ಮಂಗಳೂರು, ಬೆಂಗಳೂರು, ಕಲಬುರಾಗಿಯಲ್ಲಿ ಮೆಗಾ ಹಾಸ್ಟೆಲ್ ನಿರ್ಮಾಣವಾಗುತ್ತಿದೆ. ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, 75 ಯೂನಿಟ್ ವರೆಗೂ ಉಚಿತ ವಿದ್ಯುತ್ ಸರಬರಾಜು, ಗೃಹ ನಿರ್ಮಾಣ ಕ್ಕೆ 2 ಲಕ್ಷ ರೂಗಳ ಸಹಾಯಧನ, ಭೂಒಡೆತನ ಯೋಜನೀಡಿ 15 ಲಕ್ಷದಿಂದ 20 ಲಕ್ಷಕ್ಕೆ ಅನುದಾನ ಹೆಚ್ಚಿಸಲಾಗಿದೆ.ಹಾಸ್ಟೆಲ್ ಗಳಿಗೆ ಶುಲ್ಕ, ಉದ್ಯೋಗ ಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಿದೆ.ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ 10 ಸ್ಥಳಗಳನ್ನು ಅಭಿವೃದ್ಧಿ ಪಡಿಸಲು 10 ಕೋಟಿ ರೂ.ಗಳನ್ನು ಒದಗಿಸಿದ್ದು ಕಾರ್ಯಕ್ರಮ ಪ್ರಾರಂಭವಾಗಿದೆ. ವಿಕಾಸಸೌಧದ ಮುಂಭಾಗದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 50 ಕೋಟಿ ಬಿಡುಗಡೆಯಾಗಿದೆ ಎಂದರು.

ಸಮಗ್ರ ಅಭಿವೃದ್ಧಿಯ ಕಲ್ಪನೆಯಲ್ಲಿ  ಕೆಲಸಗಳನ್ನು ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಪರಿಶಿಷ್ಟರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಬಲರಾಗಿ, ಸಬಲೀಕರಣ ಹೊಂದಿ ಸ್ವಾವಲಂಬಿ, ಸ್ವಾಭಿಮಾನದ ಬದುಕು ನಡೆಸಬೇಕೆನ್ನುವುದು ನಮ್ಮ ಆಶಯ ಎಂದರು.

ಆತ್ಮಾವಲೋಕನ ಅಗತ್ಯ

ಇಂದು ಆತ್ಮಾವಲೋಕನ ಮಾಡಿಕೊಂಡು, ನಡೆದುಬಂದ ದಾರಿಯ ಬಗ್ಗೆ ವಿಚಾರ ಮಾಡುವ ದಿನ ಪರಿವರ್ತನೆ ನಮ್ಮಿಂದಲೇ ಪ್ರಾರಂಭವಾಗಬೇಕು. ಎಲ್ಲರೂ ಬಡಜನರಿಗೆ, ದೀನದಲಿತರಿಗೆ ಯಾವ ರೀತಿಯ ಕೆಲಸ ಮಾಡಬೇಕೆಂದು ಆತ್ಮಾವಲೋಕನ. ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಜನಕ್ಕೆ ನ್ಯಾಯ ನೀಡಲು ಸಂಕಲ್ಪ ಮಾಡಬೇಕು. ಅದನ್ನು ಸಿದ್ಧಿಸಿಕೊಂಡು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಸರ್ಕಾರ ಮಾಡಲಿದೆ  ಎಂದರು.

Similar News