ಫೋರ್ಬ್ಸ್ ಏಶ್ಯಾ ಲೋಕೋಪಕಾರಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಸಹಿತ ಮೂವರು ಭಾರತೀಯರಿಗೆ ಸ್ಥಾನ

Update: 2022-12-06 09:39 GMT

ಸಿಂಗಾಫುರ್: ಫೋರ್ಬ್ಸ್‌ ಏಶ್ಯಾದ 16ನೇ 'ಹೀರೋಸ್‌ ಆಫ್‌ ಫಿಲಾಂತ್ರಪಿ' ಪಟ್ಟಿ (Forbes Asia Philanthropy List) ಇಂದು ಬಿಡುಗಡೆಗೊಂಡಿದ್ದು, ಈ ಪಟ್ಟಿಯಲ್ಲಿ ಉದ್ಯಮಿಗಳಾದ ಗೌತಮ್‌ ಅದಾನಿ (Gautam Adani), ಶಿವ್‌ ನಾಡರ್‌ (Shiv Nadar), ಅಶೋಕ್‌ ಸೂಟ (Ashok Soota) ಮತ್ತು ಮಲೇಷ್ಯನ್-ಭಾರತೀಯ ಉದ್ಯಮಿ ಬ್ರಹ್ಮಲ್‌ ವಾಸುದೇವನ್‌ ಮತ್ತವರ ವಕೀಲೆ ಪತ್ನಿ ಶಾಂತಿ ಕಂಡಯ್ಯ ಕಾಣಿಸಿಕೊಂಡಿದ್ದಾರೆ.

ಗೌತಮ್‌ ಅದಾನಿ ಅವರು ಈ ವರ್ಷದ ಜೂನ್‌ ತಿಂಗಳಿನಲ್ಲಿ ತಮಗೆ 60 ವರ್ಷ ತುಂಬುತ್ತಿದ್ದಂತೆ ರೂ 60,000 ಕೋಟಿ ಹಣವನ್ನು ದಾನ ಮಾಡವುದಾಗಿ ತಿಳಿಸಿದ್ದರು. ಇದರಿಂದ ಸಮಾಜಮುಖಿ ಕಾರ್ಯಗಳಿಗೆ ಗರಿಷ್ಠ ದೇಣಿಗೆ ನೀಡಿದ ಭಾರತದ ಉದ್ಯಮಿಗಳಲ್ಲಿ  ಅವರು ಗುರುತಿಸಲ್ಪಟ್ಟಿದ್ದಾರೆ ಎಂದು ಫೋರ್ಬ್ಸ್‌ ಪತ್ರಿಕಾ ಹೇಳಿಕೆ ತಿಳಿಸಿದೆ. ಅದಾನಿ ಅವರು ನೀಡಲಿರುವ ರೂ. 60,000 ಕೋಟಿ ಹಣ ಆರೋಗ್ಯ ಸೇವೆ, ಶಿಕ್ಷಣ, ಕೌಶಲ್ಯಾಭಿವೃದ್ಧಿಗಾಗಿ ಬಳಸಲಾಗುವುದು ಹಾಗೂ ಈ ಕೊಡುಗೆಯನ್ನು ಅವರ ಕುಟುಂಬವು 1996 ರಲ್ಲಿ ಸ್ಥಾಪಿಸಿದ ಅದಾನಿ ಫೌಂಡೇಶನ್‌ ಮೂಲಕ ನೀಡಲಾಗುವುದು. ಪ್ರತಿ ವರ್ಷ ಈ ಫೌಂಡೇಶನ್‌  ದೇಶದ ಸುಮಾರು 37 ಲಕ್ಷ ಜನರಿಗೆ ಸಹಾಯಹಸ್ತ ಚಾಚುತ್ತದೆ ಎಂದು ವರದಿಯಾಗಿದೆ.

ಉದ್ಯಮಿ ಹಾಗೂ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸಹ-ಸ್ಥಾಪಕ ಶಿವ್‌ ನಾಡರ್‌ ಅವರು ತಮ್ಮ ಶಿವ್‌ ನಾಡರ್‌ ಫೌಂಡೇಶನ್‌ ಮೂಲಕ ಕಳೆದ ಕೆಲವು ದಶಕಗಳಿಂದ ಹಲವಾರು ಸಮಾಜಿಕ ಉದ್ದೇಶಗಳಿಗೆ ಸುಮಾರು 1 ಬಿಲಿಯನ್‌ ಯುಎಸ್‌ ಡಾಲರ್‌  ನೀಡುತ್ತಾ ಬಂದಿದ್ದಾರೆ. ಈ ವರ್ಷ ಅವರ ಫೌಂಡೇಶನ್‌ ದೇಣಿಗೆ ನೀಡಿದ ಮೊತ್ತ ರೂ 11,600 ಕೋಟಿ ಆಗಿದೆ.

ಟೆಕ್‌ ಉದ್ಯಮಿ ಅಶೋಕ್‌ ಸೂಟ ಅವರು ತಮ್ಮ ವೈದ್ಯಕೀಯ ಸಂಶೋಧನಾ ಟ್ರಸ್ಟ್‌ ಮೂಲಕ ರೂ. 600 ಕೋಟಿ ದೇಣಿಗೆ ನೀಡುವುದಾಗಿ ಹೇಳಿದ್ದರು.

ಕೌಲಾಲಂಪುರ ಮೂಲದ ಸಂಸ್ಥೆ ಕ್ರಿಯೇಡರ್‌ ಸ್ಥಾಪಕ ಮತ್ತು ಸಿಇಒ ವಾಸುದೇವನ್‌ ಮತ್ತವರ ಪತ್ನಿ  ತಮ್ಮ ಕ್ರಿಯೇಡರ್‌ ಫೌಂಡೇಶನ್‌ ಮೂಲಕ ಈ ವರ್ಷದ  ಮೇ ತಿಂಗಳಿನಲ್ಲಿ ಪೆರಕ್‌ ರಾಜ್ಯದ ಕಂಪರ್‌ ಕ್ಯಾಂಪಸ್‌ನಲ್ಲಿರುವ ಯುನಿವರ್ಸಿಟಿ ಟುಂಕು ಅಬ್ದುಲ್‌ ರಹಮಾನ್‌ನಲ್ಲಿ ಆಸ್ಪತ್ರೆ ನಿರ್ಮಿಸಲು 50 ಮಿಲಿಯನ್‌ ಮಲೇಷ್ಯನ್‌ ರಿಂಗ್ಗಿಟ್‌ ದೇಣಿಗೆ ನೀಡುವುದಾಗಿ ಘೋಷಿಸಿದ್ದರು.

Similar News