ಮತ ಮಾರಿಕೊಂಡರೆ, ಫಲ ಉಣ್ಣಬೇಕಾದೀತು: ಐಕ್ಯತಾ ಸಮಾವೇಶದಲ್ಲಿ ರಮಾಬಾಯಿ ಆನಂದ್ ತೇಲ್ತುಂಬ್ಡೆ

ಉದ್ಯಾನನಗರಿ ನೀಲಿಮಯ

Update: 2022-12-06 14:49 GMT

ಬೆಂಗಳೂರು, ಡಿ. 6: ‘ಚುನಾವಣೆ ಸಂದರ್ಭಗಳಲ್ಲಿ ತಮ್ಮ ಅಮೂಲ್ಯ ಮತಗಳನ್ನು ಅಲ್ಪಸ್ವಲ್ಪ ಹಣ, ಆಸೆಗಳಿಗೆ ಮಾರಾಟ ಮಾಡಿಕೊಂಡರೆ, ಅದರ ಫಲವನ್ನು ನೀವು ಉಣ್ಣಬೇಕಾಗುತ್ತದೆ’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು, ಚಿಂತಕಿ ರಮಾಬಾಯಿ ಆನಂದ್ ತೇಲ್ತುಂಬ್ಡೆ (Ramabai Anand Teltumbde) ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನವನ್ನು ಇಂಚಿಂಚೆ ಕಸಿದು ಸವಲತ್ತುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು. ಆದರೆ, ತಮ್ಮ ಮತಗಳನ್ನು ಚುನಾವಣೆ ವೇಳೆ ಮಾರಾಟಕ್ಕೆ ಇಟ್ಟರೆ ಅದರ ಫಲವನ್ನು ಉಣ್ಣಬೇಕಾಗುತ್ತದೆ. ಅಲ್ಲದೆ, ಅಂಬೇಡ್ಕರ್ ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು.

ಈ ದೇಶದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ ಎಂದ ಅವರು, ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಮಾವೇಶದಲ್ಲಿ ನೆರೆದಿದ್ದವರಿಗೆ ಕರೆ ನೀಡಿದರು.

ಇಂದು ಕೇಂದ್ರ ಸರಕಾರ ದಲಿತ ದಮನಿತರ ವಿದ್ಯಾರ್ಥಿ ವೇತನ ಕಸಿದುಕೊಳ್ಳುತ್ತಿದೆ. ಅಲ್ಲದೆ ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಬಾ ಸಾಹೇಬರು ಹೇಳಿದಂತಹ ಹೋರಾಟ ಇಂದು ಮುಖ್ಯವಾಗಿದೆ. ಈ ಸಮಾವೇಶದಲ್ಲಿ ಹೆಚ್ಚು ಜನರು ಸೇರಿರುವುದನ್ನು ನೋಡಿ ಸಂತೋಷವಾಗಿದೆ. ನಾವು ಸಂಘರ್ಷದ ಹಾದಿ ತುಳಿಯಬೇಕಿದೆ. ಡಾ.ಆನಂದ್ ತೇಲ್ತುಂಬ್ದೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ಹೋರಾಟ ಮಾಡಿ ನಮ್ಮ ಜೊತೆಯಲ್ಲಿದ್ದೀರಿ. ಅದಕ್ಕಾಗಿ ಧನ್ಯವಾದಗಳು ಎಂದು ಅವರು ತಿಳಿಸಿದರು.

ಒಂದು ಸಮಾಜದ ಅಭಿವೃದ್ದಿ ಅಲ್ಲಿನ ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು. ಮಹಿಳೆಯರು, ಬಡವರು ಶಿಕ್ಷಣವಂತರಾಗಬೇಕು. ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಣಕ್ಕಾಗಿ ಹೋರಾಡುವುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಹೈಕೋರ್ಟ್ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಮಾತನಾಡಿ, ಅಂಬೇಡ್ಕರ್ ಕಾರ್ಮಿಕ ಸಚಿವರಾಗಿ ಈ ದೇಶದ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಿದರು. ಶ್ರೇಷ್ಟ ವಕೀಲರಾಗಿ, ಅರ್ಥಶಾಸ್ತ್ರಜ್ಞರಾಗಿ, ದಕ್ಷ ಆಡಳಿತಗಾರರಾಗಿ, ಸಂವಿಧಾನ ಶಿಲ್ಪಿಯಾಗಿ, ಮಾನವತಾವಾದಿಯಾಗಿ ಇಡೀ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಈ ದೇಶ ಮರೆಯಬಾರದು. ಮಹಿಳಾ ಸಮಾನತೆಗಾಗಿ ಹಿಂದೂ ಕೋಡ್ ಬಿಲ್ ರಚಿಸಿ, ಜಾರಿಯಾಗದಿದ್ದಾಗ ಕ್ಯಾಬಿನೆಟ್‍ಗೆ ರಾಜೀನಾಮೆ ನೀಡಿದ ಇತಿಹಾಸದ ಏಕೈಕ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಎಂದು ಬಣ್ಣಿಸಿದರು.

ದೇಶದಲ್ಲಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸರಕಾರವನ್ನು ಪ್ರಶ್ನೆ ಮಾಡಿದರೆ ಯುಎಪಿಎ, ಎನ್ಕೌಂಟರ್ ಬೆದರಿಕೆ ಹಾಕುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆಯನ್ನು ಅಪ್ರಸ್ತುತ ಮಾಡಲಾಗುತ್ತಿದೆ. ದೇಶ ಹಾಗೂ ರಾಜ್ಯದಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಹಾಗಾಗಿ ಎಷ್ಟು ಮೀಸಲಾತಿ ಹೆಚ್ಚಿಸಿದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜನಸಾಮಾನ್ಯರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರಕಾರಗಳಿಗೆ ಕೇಳಿಸುವುದಿಲ್ಲ. ನಾವೆಲ್ಲ ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು. ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟು. ಸಂವಿಧಾನವನ್ನು ಉಳಿಸಿಕೊಳ್ಳಬೇಕು. ನಾವು ಗಳಿಸಿದ್ದನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಹೋರಾಡಿದರೆ ಮಾತ್ರ ಗಳಿಸಿದ್ದನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಕೋಮುವಾದ ರಾರಾಜಿಸಿದ್ದಲ್ಲಿ ನಾವು ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾಗುತ್ತದೆ. ಜಾತ್ರೆ, ಸಮಾರಂಭಗಳಲ್ಲಿ ಮುಸ್ಲಿಮರು ಮಾರಾಟ ಮಾಡುವಂತಿಲ್ಲ ಎನ್ನುತ್ತಿದ್ದಾರೆ. ನಾಳೆ ದಲಿತರು ದೇವಾಲಯದ ಬಳಿ ತೆಂಗಿನಕಾಯಿ ಮಾರುವಂತಿಲ್ಲ, ಹೂ ಮಾರುವಂತಿಲ್ಲ ಎನ್ನುತ್ತಾರೆ. ಇದಕ್ಕೆಲ್ಲ ಎಚ್ಚರ ವಹಿಸಬೇಕು ಎಂದು ನಾಗಮೋಹನ್ ದಾಸ್ ಹೇಳಿದರು.

‘ಮಸೀದಿ ಅಂದೇ ಕೆಡವಿದರು': ‘ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ದಿನದಂದೇ ಬಾಬರಿ ಮಸೀದಿಯನ್ನು ಕೆಡವಲಾಯಿತು. ಅದೇ ರೀತಿ, ಸಂವಿಧಾನ ಅಂಬೇಡ್ಕರ್‍ರವರು ಬರೆದಿಲ್ಲ’ ಎಂದು ಸುಳ್ಳು ಹಬ್ಬಿಸಲಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು. 

ಉದ್ಯಾನನಗರಿ ನೀಲಿಮಯ:

ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದ ಹಿನ್ನೆಲೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಜನಸಾಗರವೇ ಹರಿದು ಬಂದಿದಿತ್ತು. ಅಂಬೇಡ್ಕರ್ ಪರಿನಿಬ್ಬಾಣ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾವೇಶಕ್ಕೆ ಆಗಮಿಸಿದ ಬಹುತೇಕರು ನೀಲಿ ಶಾಲು, ನೀಲಿ ಟೀಶರ್ಟ್ ಧರಿಸಿದ್ದರು. ಜೊತೆಗೆ ಫ್ಲೆಕ್ಸ್ ಗಳು, ಅಂಬೇಡ್ಕರ್ ಭಾವಚಿತ್ರವುಳ್ಳ ನೀಲಿ ಬಾವುಟಗಳು ಎಲ್ಲೆಡೆ ರಾರಾಜಿಸಿದ್ದವು. ಸಮಾವೇಶದ ಜನಸಾಗರದಿಂದ ಬೆಂಗಳೂರು ಒಂದು ರೀತಿಯಲ್ಲಿ ನೀಲಿಮಯವಾಗಿತ್ತು.

Similar News