ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ: ಥಾವರ ಚಂದ್ ಗೆಹ್ಲೋಟ್

Update: 2022-12-06 17:55 GMT

ಮಂಗಳೂರು : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಬದುಕನ್ನು ಮುಡಿಪಾಗಿಟ್ಟ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್  ತಿಳಿಸಿದ್ದಾರೆ.

ಅವರು ಇಂದು  ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಗೊಳಿಸಿ ಬಳಿಕ  ಮಂಗಳಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗಿ ಬದುಕ ಬಹುದಿತ್ತು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದರೂ ತಮ್ಮ ದೇಶದಲ್ಲಿನ ಶೋಷಿತ ವರ್ಗದವರ ಬಗ್ಗೆ ಯೋಚಿಸಿದರು. ಶಿಕ್ಷಣ, ಸಂಘಟನೆ ಜೊತೆ ಸಂಘರ್ಷದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಲು ಕರೆ ನೀಡಿದರು. ಶೋಷಿತ ವರ್ಗದ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದ ಮಹಾನ್ ನಾಯಕರಾಗಿದ್ದರು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.‌

ಅಂಬೇಡ್ಕರ್ ಈ ದೇಶದಲ್ಲಿ ಸಮಾನತೆ, ಏಕತೆ ಯೊಂದಿಗೆ ಅಖಂಡ ಭಾರತದ ವಿವಿಧ ವರ್ಗಗಳ ಅಭಿವೃದ್ಧಿಗೆ  ಶ್ರಮಿಸಿದ ನಾಯಕ. ಅವರ ಪ್ರತಿಮೆ ಅನಾವರಣ ಮಾಡುವ ಜೊತೆಗೆ ಅವರ ಆದರ್ಶಗಳನ್ನು ಪಾಲಿಸುವುದು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅಂಬೇಡ್ಕರ್ ಅಧ್ಯಯನ ಪೀಠ ಆರಂಭಿಸುವ ಅಗತ್ಯವಿದೆ ಈ   ಬಗ್ಗೆ  ಸರಕಾರದ ಗಮನಕ್ಕೆ ತರುವುದಾಗಿ ರಾಜ್ಯ ಪಾಲರು ತಿಳಿಸಿದ್ದಾರೆ.

ವಿಶ್ವ ವಿದ್ಯಾನಿಲಯದಲ್ಲಿ ಅಂಬೇಡ್ಕರ್ ಪೀಠವನ್ನು ರಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಅಂಬೇಡ್ಕರ್ ಅವರ ಹೆಸರಿನಲ್ಲಿ ಮಾಹು ನಲ್ಲಿ ಸ್ಥಾಪಿಸಲಾಗಿರುವ ವಿಶ್ವ ವಿದ್ಯಾನಿಲ ಯದ ಮಾದರಿಯ ವಿಶ್ವ ವಿದ್ಯಾಲಯವನ್ನು ರಾಜ್ಯದಲ್ಲಿಯೂ ಸ್ಥಾಪನೆ ಮಾಡಬೇಕೆನ್ನುವ ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

*ಈ ಸಂದರ್ಭದಲ್ಲಿ ಛತ್ತೀಸ್ ಘರ್ ತೋಟಗಾರಿಕೆ, ಅರಣ್ಯ ಹಾಗೂ ದುಗ್೯  ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್  ಸಮಾಜ ವಿಜ್ಞಾನ ಹಾಗೂ ಮಾಹು ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಫ್ರೊ ಆರ್.ಎಸ್. ಕುರೀಲ್ ಮಾತನಾಡುತ್ತಾ ಅಂಬೇಡ್ಕರ್ ಅವರ ರೀತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಶೋಷಿತರಿಗೆ ದೇವಸ್ಥಾನದ ಒಳಗೆ ಪ್ರವೇಶ ಇಲ್ಲದೇ ಇದ್ದ ಕಾಲದಲ್ಲಿ ಪ್ರತ್ಯೇಕವಾಗಿ ಶೋಷಿತ ವರ್ಗದವರೇ ದೇವಾಲಯ ನಿರ್ಮಾಣ ಮಾಡಲು ಪ್ರೇರಣೆ ನೀಡುವ ಸಾಮಾಜಿಕ ಸುಧಾರಣೆಗೆ  ಕಾರಣರಾದವರು. ಆ ಕಾರಣಕ್ಕಾಗಿ ಅವರಿಗೆ ಭಾರತ ರತ್ನ ನೀಡಬೇಕು. ಅದಕ್ಕಾಗಿ ರಾಜ್ಯ ಪಾಲರು ಶಿಫಾರಸು ಮಾಡಬೇಕು ಎಂದು ಸಮಾರಂಭದ ವೇದಿಕೆ ಯಲ್ಲಿ ಮನವಿ ಮಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸ್ವಾಗತಿಸಿದರು.  ಮಂಗಳೂರು ವಿಶ್ವವಿದ್ಯಾನಿಲಯದ  ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವಿಶ್ವನಾಥ ಧನ್ಯವಾದ ಸಮರ್ಪಿಸಿದರು. ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಹಾಗೂ ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ  ಡಾ. ಸಿ.ಕೆ. ಕಿಶೋರ್ ಕುಮಾರ್, ಕುಲಸಚಿವ (ಪರೀಕ್ಷಾಂಗ) ಡಾ. ಪಿ ಎಲ್ ಧರ್ಮ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Similar News