ಯಾರೂ ಹಸಿದು ಮಲಗದಂತೆ ಸರ್ಕಾರ ನೋಡಿಕೊಳ್ಳಬೇಕು: ಸುಪ್ರೀಂ ಕೋರ್ಟ್

Update: 2022-12-07 14:35 GMT

ಹೊಸದಿಲ್ಲಿ: ಕೊರೋನ ಸಾಂಕ್ರಾಮಿಕ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಪೂರೈಸಲು ತೆಗೆದುಕೊಂಡ ಉಪಕ್ರಮಗಳನ್ನು ಅತ್ಯುತ್ತಮ ಎಂದು ಸುಪ್ರೀಂ ಕೋರ್ಟ್ ಶ್ಲಾಘಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಸಿವನ್ನು ನಿರ್ಮೂಲನೆ ಮಾಡುವತ್ತ ತಮ್ಮ ಗುರಿ ಕೇಂದ್ರೀಕರಿಸಬೇಕು ಎಂದು ಸೂಚಿಸಿದೆ. ಯಾರೂ ಹಸಿವಿನಿಂದ ಮಲಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು timesofindia ವರದಿ ಮಾಡಿದೆ.

ಇಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಗೊಂಡಿರುವ ಅಸಂಘಟಿತ ವಲಯದ ಕಾರ್ಮಿಕರು, ಅದರಲ್ಲೂ ವಲಸೆ ಕಾರ್ಮಿಕರು ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಯಡಿ ರಿಯಾಯಿತಿ ದರದ ಆಹಾರ ಧಾನ್ಯಗಳನ್ನು ಪಡೆಯುವುದು ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಡಿ ಲಾಭ ಪಡೆಯುವುದನ್ನು ಖಾತ್ರಿ ಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳೇನು ಎಂಬುದರ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿಯಿಂದ ಎಂ‌.ಆರ್. ಶಾ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡಿದ್ದ ನ್ಯಾಯ ಪೀಠವು ಪ್ರಶ್ನಿಸಿತು.

ಇದಕ್ಕೆ ಪ್ರತಿಯಾಗಿ, “ಸೆಪ್ಟೆಂಬರ್ ಅಂತ್ಯದ ವೇಳೆಗೆ  28.3 ಕೋಟಿ ಕಾರ್ಮಿಕರು ಇಶ್ರಮ್‍ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದು, ಇದು ಗುರಿಯ ಶೇ. 73.7ರಷ್ಟಾಗಿದೆ. ಈ ಪೈಕಿ ಉತ್ತರ ಪ್ರದೇಶದಲ್ಲಿ 6.6 ಕೋಟಿ ಗುರಿಗೆ ಬದಲಾಗಿ 8.3 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಒರಿಸ್ಸಾದಲ್ಲಿ 1.3 ಕೋಟಿ (ಗುರಿಯ ಶೇ. 102ರಷ್ಟು) ಹಾಗೂ ಛತ್ತೀಸ್‌ಗಢ, ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಲ್ಲಿ ಗುರಿಯ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಐಶ್ವರ್ಯ ಭಾಟಿ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ದಿಲ್ಲಿ (ಶೇ. 62), ಕೇರಳ (ಶೇ. 59), ಗುಜರಾತ್ ಮತ್ತು ಆಂಧ್ರಪ್ರದೇಶ (ಶೇ. 50ಕ್ಕಿಂತ ತುಸು ಹೆಚ್ಚು) ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ನಿಧಾನ ಗತಿಯಲ್ಲಿ ನೋಂದಣಿ ನಡೆಯುತ್ತಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ (ಶೇ.38), ಕರ್ನಾಟಕ ಮತ್ತು ತಮಿಳುನಾಡು (ಶೇ. 37) ಮತ್ತು ತೆಲಂಗಾಣದಲ್ಲಿ ಶೇ‌. 36ರಷ್ಟು ಗುರಿ ಸಾಧನೆಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು.

“ಪ್ರತಿಬಾರಿಯೂ ಮಹಾರಾಷ್ಟ್ರಹಿಂದುಳಿಯುತ್ತಿದೆ. ಅದು ಏನನ್ನೂ ಮಾಡುತ್ತಿಲ್ಲ” ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

“ಕೇಂದ್ರ ಸರ್ಕಾರವು ಜಾಗತಿಕ ಹಸಿವು ಸೂಚ್ಯಂಕವನ್ನುತಿರಸ್ಕರಿಸಿದ್ದು, ಭಾರತಕ್ಕೆ 107ನೇ ಶ್ರೇಯಾಂಕ ನೀಡಲು ಅಳವಡಿಸಿಕೊಂಡಿರುವ ಮಾನದಂಡವೇನು ಎಂದು ಪ್ರಶ್ನಿಸಿದೆ. ಹೀಗಿದ್ದೂ ಇಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಹೇಗೆ ಬಳಿಕೊಳ್ಳುತ್ತೀರಿ ಎಂಬುದನ್ನು ನಮಗೆ ತಿಳಿಸಲೇಬೇಕು” ಎಂದು ಶಾ ನೇತೃತ್ವದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

Similar News