ಹುಡುಗರನ್ನು ಕೂಡಿ ಹಾಕಿ: ಕೇರಳ ಸರಕಾರ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ವಿಧಿಸಿದ ನಿರ್ಬಂಧ ಟೀಕಿಸಿದ ಹೈಕೋರ್ಟ್

ವಿದ್ಯಾರ್ಥಿಗಳಿಗೆ ಇಲ್ಲದ ನಿರ್ಬಂಧಗಳು ಕೇವಲ ವಿದ್ಯಾರ್ಥಿನಿಯರಿಗೆ ಏಕೆ ಎಂದು ಪ್ರಶ್ನಿಸಿದ ನ್ಯಾಯಾಲಯ

Update: 2022-12-08 09:33 GMT

ತಿರುವನಂತಪುರಂ: ರಾತ್ರಿ 9.30ರ ನಂತರ ಹಾಸ್ಟೆಲುಗಳಿಂದ ಹೊರ ಹೋಗುವುದರಿಂದ ವಿದ್ಯಾರ್ಥಿನಿಯರನ್ನು ನಿರ್ಬಂಧಿಸುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಕೇರಳ ಹೈಕೋರ್ಟ್ ಈ ಆದೇಶವನ್ನು ಟೀಕಿಸಿದೆಯಲ್ಲದೆ ವಿದ್ಯಾರ್ಥಿಗಳಿಗೆ ಇಲ್ಲದ ನಿರ್ಬಂಧಗಳು ಕೇವಲ ವಿದ್ಯಾರ್ಥಿನಿಗಳಿಗೇಕೆ ಎಂದು ಪ್ರಶ್ನಿಸಿದೆ ಎಂದು newindianexpress.com ವರದಿ ಮಾಡಿದೆ.

"ಬದಲಿಗೆ ಹುಡುಗರನ್ನು ಕೂಡಿ ಹಾಕಿ, ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ಸಮಸ್ಯೆಯನ್ನು ಅವರು ಸೃಷ್ಟಿಸುತ್ತಾರೆ.  ರಾತ್ರಿ 8 ಗಂಟೆ ನಂತರ ಹುಡುಗರಿಗೆ ಕರ್ಫ್ಯೂ ವಿಧಿಸಿ, ಹುಡುಗಿಯರು ಹೊರ ಹೋಗಲಿ,'' ಎಂದು ಏಕ ಸದಸ್ಯ ಪೀಠದ ನ್ಯಾಯಾಧೀಶ ದೇವನ್ ರಾಮಚಂದ್ರನ್ ಹೇಳಿದ್ದಾರೆ.

ಸರಕಾರದ ಆದೇಶವನ್ನು ಪ್ರಶ್ನಿಸಿ ಕೊಝಿಕ್ಕೋಡ್ ಸರಕಾರಿ ಮೆಡಿಕಲ್ ಕಾಲೇಜಿನ ಐದು ಮಂದಿ ಎಂಬಿಬಿಎಸ್ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು.

ಮಹಿಳಾ ಹಾಸ್ಟೆಲ್‍ನಲ್ಲಿ ಈ ನಿರ್ಬಂಧದಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

"ಎಷ್ಟು ಸಮಯ ವಿದ್ಯಾರ್ಥಿಗಳನ್ನು ಬಂಧಿಯಾಗಿಸಬಹುದು?  ಕೇರಳ ಇನ್ನೂ ಬೆಳೆದಿಲ್ಲ, ಆದ್ದರಿಂದ ಇಂತಹ ನಿರ್ಧಾರಗಳು. ಬೇರೆ ತಲೆಮಾರಿಗೆ ಸೇರಿದ ಜನರು ಇಂತಹ ತೀರ್ಮಾನಗಳನ್ನು ಕೈಗೊಳ್ಳದೇ ಇರಲಿ, ಪ್ರತಿ  ಜನಾಂಗವು ಒಂದು ಹೊಸ ದೇಶವಿದ್ದಂತೆ,'' ಎಂದು ನ್ಯಾಯಾಧೀಶರು ಹೇಳಿದರು.

ಉನ್ನತ ಶಿಕ್ಷಣ ಸಂಸ್ಥೆಗಳ ಹಾಸ್ಟೆಲುಗಳಲ್ಲಿ ವಿದ್ಯಾರ್ಥಿನಿಯರು ಸಕಾರಣವಿಲ್ಲದೆ ರಾತ್ರಿ 9.30ರ ನಂತರ ಹೊರ ಹೋಗುವುದನ್ನು ನಿರ್ಬಂಧಿಸಿ ಕೇರಳ ಸರಕಾರ 2019 ರಲ್ಲಿ ಆದೇಶ ಹೊರಡಿಸಿತ್ತು.

Similar News