ವಿಶ್ವಕಪ್‌: ಬ್ರೆಝಿಲ್‌ಗೆ ಸೋಲುಣಿಸಿ ಸೆಮಿ ಫೈನಲ್‌ಗೆ ತಲುಪಿದ ಕ್ರೊಯೇಶಿಯ

ಪೆನಾಲ್ಟಿ ಶೂಟೌಟ್‌ನಲ್ಲಿ ಜಯಭೇರಿ

Update: 2022-12-09 18:14 GMT

   ದೋಹಾ, ಡಿ.9: 2018ರ ವಿಶ್ವಕಪ್‌ನ ರನ್ನರ್ಸ್ ಅಪ್ ಕ್ರೊಯೇಶಿಯ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವನ್ನು ಫಿಫಾ ವಿಶ್ವಕಪ್‌ನ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಅಂತರದಿಂದ ರೋಚಕವಾಗಿ ಮಣಿಸಿ ಸತತ 2ನೇ ಬಾರಿ ಸೆಮಿ ಫೈನಲ್‌ಗೆ ತಲುಪಿದೆ.

ಕ್ರೊಯೇಶಿಯ ತಂಡ ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನ ಇಲ್ಲವೇ ನೆದರ್‌ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಸತತ ಎರಡನೇ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊಯೇಶಿಯಕ್ಕೆ ಜಯ ಒಲಿದಿದೆ. ಜಪಾನ್ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಶಿಯ 3-1 ಅಂತರದಿಂದ ಜಯ ಸಾಧಿಸಿತ್ತು.

   ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಅಂತಿಮ-8ರ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ 90 ನಿಮಿಷಗಳ ಆಟದಲ್ಲಿ ಗೋಲು ಗಳಿಸುವಲ್ಲಿ ವಿಫಲವಾದವು. 90 ನಿಮಿಷಗಳ ಆಟದಲ್ಲಿ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲಾಗಿದೆ. ಹೆಚ್ಚುವರಿ ಸಮಯದ ಪಂದ್ಯವು 1-1ರಿಂದ ಸಮಬಲಗೊಂಡಾಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಹೆಚ್ಚುವರಿ ಸಮಯದಲ್ಲಿ (106ನೇ ನಿಮಿಷ) ಕ್ರೊಯೇಶಿಯದ ರಕ್ಷಣಾ ಕೋಟೆಯನ್ನು ಬೇಧಿಸಿದ ಸ್ಟಾರ್ ಆಟಗಾರ ನೇಮರ್ ಮಹತ್ವದ ಗೋಲು ಗಳಿಸಿ ಬ್ರೆಝಿಲ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಲುಕಾಸ್ ಪ್ಯಾಕ್ವೆಟಾರಿಂದ ಅದ್ಭುತವಾದ ಪಾಸ್ ಪಡೆದ ನೇಮರ್ ಗೋಲ್‌ಕೀಪರ್‌ರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸುರಕ್ಷಿತವಾಗಿ ಸೇರಿಸಿದರು. 77ನೇ ಅಂತರ್‌ರಾಷ್ಟ್ರೀಯ ಗೋಲು ಗಳಿಸಿದ ನೇಮರ್ ದಂತಕತೆ ಪೀಲೆ (77)ನಿರ್ಮಿಸಿರುವ ಬ್ರೆಝಿಲ್‌ನ ಸಾರ್ವಕಾಲಿಕ ಶ್ರೇಷ್ಠ ಸ್ಕೋರ್ ದಾಖಲೆಯನ್ನು ಸರಿಗಟ್ಟಿದರು.

 ಆದರೆ 117ನೇ ನಿಮಿಷದಲ್ಲಿ ಗೋಲು ಗಳಿಸಿದ ಕ್ರೊಯೇಶಿಯದ ಬ್ರುನೊ ಪೆಟ್ಕೋವಿಕ್ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. 120ನೇ ನಿಮಿಷದಲ್ಲಿ ಬ್ರೆಝಿಲ್‌ನ ಗೋಲು ಗಳಿಸುವ ಪ್ರಯತ್ನಕ್ಕೆ ಗೋಲ್‌ಕೀಪರ್ ಲಿವಾಕೋವಿಕ್ ತಡೆದರು.ಸ್ಕೋರ್ ಸಮಬಲಗೊಂಡ ಕಾರಣ ಪಂದ್ಯದ ಫಲಿತಾಂಶವನ್ನು ಪೆನಾಲಿ ್ಟಶೂಟೌಟ್‌ನಲ್ಲಿ ನಿರ್ಧರಿಸಲಾಯಿತು.

Similar News