ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ದೀಪಂಕರ್ ದತ್ತಾರನ್ನು ನೇಮಕಗೊಳಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ

Update: 2022-12-11 17:36 GMT

ಹೊಸದಿಲ್ಲಿ, ಡಿ. 11: ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಳಿಸಿ ಕೇಂದ್ರ ಸರಕಾರ ರವಿವಾರ ಅಧಿಸೂಚನೆ ಹೊರಡಿಸಿದೆ. 

‘‘ಭಾರತದ ಸಂವಿಧಾನದ ಅಡಿಯಲ್ಲಿ ನೀಡಲಾದ ಅಧಿಕಾರ ಬಳಸಿ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ’’ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್‌ನಲ್ಲಿ ಹೇಳಿದ್ದಾರೆ. 

ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲೀಜಿಯಂ ಸೆಪ್ಟಂಬರ್ 26ರಂದು ದೀಪಂಕರ್ ದತ್ತಾ ಅವರ ಹೆಸರನ್ನು ಬಡ್ತಿಗೆ ಸರಕಾರಕ್ಕೆ ಶಿಫಾರಸು ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ದೀಪಂಕರ್ ದತ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದರೆ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಲಿದೆ.

ದೀಪಂಕರ್ ದತ್ತಾ ಅವರು 1965 ಫೆಬ್ರವರಿ 9ರಂದು ಜನಿಸಿದರು. ಅವರು   ಕೋಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಲೀಲ್ ಕುಮಾರ್ ದತ್ತಾ ಅವರ ಪುತ್ರ. ದತ್ತಾ ಅವರು ಮೇ 2002ರಿಂದ ಜನವರಿ 2004ರ ನಡುವೆ ಪಶ್ಚಿಮಬಂಗಾಳವನ್ನು ಕಿರಿಯ ಸ್ಥಾಯಿ ನ್ಯಾಯವಾದಿಯಾಗಿ ಪ್ರತಿನಿಧಿಸಿದ್ದರು. 2006 ಜೂನ್‌ನಲ್ಲಿ ಅವರು ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಶಾಶ್ವತ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು. ಅನಂತರ 2020 ಎಪ್ರಿಲ್‌ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

Similar News