ಅರುಣಾಚಲ ಗಡಿಯಲ್ಲಿ ಘರ್ಷಣೆ : ರಕ್ಷಣಾ ಸಚಿವಾಲಯ ಹೇಳಿದ್ದೇನು?

Update: 2022-12-13 15:53 GMT

ಹೊಸದಿಲ್ಲಿ,ಡಿ.13: ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್ ವಿಭಾಗದ ವಾಸ್ತವಿಕ ನಿಯಂತ್ರಣ ರೇಖೆ (LAC)ಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ  ಉಭಯ ದೇಶಗಳ ಕೆಲವೇ ಯೋಧರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಸಂಸತ್ತಿನಲ್ಲಿ  ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh)ಹೇಳಿದ್ದಾರೆ .‘ನಮ್ಮ ಯಾವುದೇ ಯೋಧರು ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ. ಭಾರತೀಯ ಮಿಲಿಟರಿ ಕಮಾಂಡರ್‌ಗಳ ಸಕಾಲಿಕ ಮಧ್ಯಪ್ರವೇಶದಿಂದಾಗಿ ಚೀನಿ ಸೈನಿಕರು ತಮ್ಮ ಸ್ವಸ್ಥಾನಗಳಿಗೆ ಮರಳಿದ್ದಾರೆ ಎಂದು ತಿಳಿಸಿದರು.

ಚೀನಾ ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಸಿಂಗ್, ಡಿ.11ರಂದು ಅರುಣಾಚಾಲ ಪ್ರದೇಶದ ತವಾಂಗ್‌ನ ಯಾಂಗ್ಸೆ ಪ್ರದೇಶದ ಭಾರತೀಯ ಸೇನೆಯ ಕಮಾಂಡರ್ ಚೀನಿ ಕಮಾಂಡರ್ ಜೊತೆ ಧ್ವಜ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ (Narendra Modi)ಸರಕಾರವು ಘರ್ಷಣೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಸೋಮವಾರ ಆರೋಪಿಸಿದ ಬಳಿಕ ಗೃಹಸಚಿವರ ಹೇಳಿಕೆ ಹೊರಬಿದ್ದಿದೆ.

‘ಉತ್ತರ ಲಡಾಖ್‌ನಲ್ಲಿ ತನ್ನ ಅತಿಕ್ರಮಣವನ್ನು ಕಾಯಂಗೊಳಿಸಲು ಚೀನಾ ಡೆಸ್ಪಾಂಗ್‌ನಲ್ಲಿ ಎಲ್‌ಎಸಿಯಿಂದ 15-18 ಕಿ.ಮೀ.ಅಂತರದೊಳಗೆ 200 ಕಾಯಂ ಕಟ್ಟಡಗಳನ್ನು ನಿರ್ಮಿಸಿದೆ,ಆದರೆ ಸರಕಾರವು ಈ ಬಗ್ಗೆ ಮೌನವಾಗಿತ್ತು. ಈಗ ಈ ಹೊಸ ಕಳವಳಕಾರಿ ಸಮಸ್ಯೆ ಎದುರಾಗಿದೆ ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್(Jairam Ramesh) ಟ್ವೀಟಿಸಿದ್ದಾರೆ.

ತವಾಂಗ್‌ನಲ್ಲಿ ಎಲ್‌ಎಸಿಯ ಕೆಲವು ಪ್ರದೇಶಗಳಲ್ಲಿ ಗಡಿ ಕುರಿತು ವಿಭಿನ್ನ ದೃಷ್ಟಿಕೋನಗಳಿವೆ ಮತ್ತು ಈ ಪ್ರದೇಶಗಳಲ್ಲಿ ತಮ್ಮದೆಂದು ಗ್ರಹಿಸಿರುವ ಗಡಿರೇಖೆಗಳವರೆಗೆ ಉಭಯ ದೇಶಗಳ ಪಡೆಗಳು ಗಸ್ತು ನಡೆಸುತ್ತಿವೆ. ಈ ಪ್ರವೃತ್ತಿ 2006ರಿಂದಲೂ ಚಾಲ್ತಿಯಲ್ಲಿದೆ ಎಂದು ರಕ್ಷಣಾ ಸಚಿವಾಲಯವು ಸೋಮವಾರ ಹೇಳಿಕೆಯಲ್ಲಿ ತಿಳಿಸಿತ್ತು.

ವಾಯುಪಡೆ ಗಸ್ತು ಆರಂಭ : ಚೀನಿಯರ ಹೆಚ್ಚಿನ ವೈಮಾನಿಕ ಚಟುವಟಿಕೆಗಳನ್ನು ಪತ್ತೆ ಹಚ್ಚಿದ ಬಳಿಕ ಭಾರತೀಯ ವಾಯುಪಡೆಯು ಅರುಣಾಚಲ ಪ್ರದೇಶದಲ್ಲಿ ತನ್ನ ಯುದ್ಧವಿಮಾನಗಳ ಗಸ್ತು ಆರಂಭಿಸಿದೆ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ. ಚೀನಾದ ಪ್ರಯತ್ನವನ್ನು ವಿಫಲಗೊಳಿಸಲು ಇತ್ತೀಚಿನ ವಾರಗಳಲ್ಲಿ 2-3 ಬಾರಿ ಯುದ್ಧವಿಮಾನಗಳನ್ನು ನಿಯೋಜಿಸಲಾಗಿತ್ತು ಎಂದು ಅವು ಬಹಿರಂಗಗೊಳಿಸಿವೆ.

ಅರುಣಾಚಲ ಪ್ರದೇಶದಲ್ಲಿ ಎಲ್‌ಎಸಿ ಸಮೀಪ ಚೀನಿ ಯುದ್ಧವಿಮಾನಗಳ ಹಾರಾಟವನ್ನು ಪತ್ತೆ ಹಚ್ಚಿದ ಬಳಿಕ ಭಾರತೀಯ ವಾಯುಪಡೆಯು ವಾಯುಗಸ್ತು ಆರಂಭಿಸಿದೆ. ಡಿ.9ರಂದು ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆಯ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿದವು.

 ಪ್ರತಿಪಕ್ಷಗಳ ಸಭಾತ್ಯಾಗ ಸಂಸತ್‌ನಲ್ಲಿ ಸಿಂಗ್ ಹೇಳಿಕೆಯಿಂದ ತೃಪ್ತಗೊಳ್ಳದ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಯ ದ್ಯೋತಕವಾಗಿ ಸಭಾತ್ಯಾಗ ನಡೆಸಿದರು. ಕೇವಲ ಹೇಳಿಕೆಯು ತಮಗೆ ತೃಪ್ತಿ ನೀಡಿಲ್ಲ ಮತ್ತು ಪ್ರಮುಖವಾಗಿರುವ ಗಡಿ ಸಮಸ್ಯೆಯ ಬಗ್ಗೆ ಚರ್ಚೆಯನ್ನು ಬಯಸಿದ್ದೇವೆ ಎಂದು ಅವು ಹೇಳಿದವು.

ಭಾರತ-ಚೀನಾ ಗಡಿ ಸಮಸ್ಯೆಯ ಬಗ್ಗೆ ಎಳೆಎಳೆಯಾಗಿ ಚರ್ಚಿಸಲು ಸಂಸತ್ತಿನ ಇತರ ಎಲ್ಲ ಕಲಾಪಗಳನ್ನು ಪಕ್ಕಕ್ಕಿರಿಸಬೇಕು ಎಂದು ಹಲವು ಪ್ರತಿಪಕ್ಷಗಳು ಆಗ್ರಹಿಸಿದವು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಶಕ್ತಿಸಿನ್ಹ ಗೋಹಿಲ್ ಚರ್ಚೆಯಿಂದ ನುಣುಚಿಕೊಳ್ಳುವ ಸರಕಾರದ ನಿಲುವು ಸರಿಯಲ್ಲ ಎಂದು ಹೇಳಿದರೆ,ಆರ್‌ಜೆಡಿಯ ಮನೋಜ ಝಾ ಅವರು,ಸರಕಾರದ ರಾಜತಾಂತ್ರಿಕತೆಯು ‘ನಿರಾಕರಣೆಯ ಮನಃಸ್ಥಿತಿಯಲ್ಲಿದೆ’ ಎಂದು ಕುಟುಕಿದರು.

ಸರಕಾರದ ವಿರುದ್ಧ ಕಾಂಗ್ರೆಸ್ ದಾಳಿ: ಕಾಂಗ್ರೆಸ್ ಪಕ್ಷವು ಸರಕಾರದ ವಿರುದ್ಧ ತೀವ್ರ ದಾಳಿಯನ್ನು ಆರಂಭಿಸಿದೆ. ‘ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ನಾವು ದೇಶದೊಂದಿಗೆ ಒಂದಾಗಿ ನಿಂತಿದ್ದೇವೆ ಮತ್ತು ಅದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಆದರೆ ಚೀನಿ ಅತಿಕ್ರಮಣಗಳು ಮತ್ತು 2020 ಎಪ್ರಿಲ್‌ನಿಂದ ಎಲ್‌ಎಸಿ ಸಮೀಪ ಎಲ್ಲ ಕೇಂದ್ರಗಳಲ್ಲಿ ನಿರ್ಮಾಣಗಳ ಕುರಿತು ಮೋದಿ ಸರಕಾರವು ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು ’ಎಂದು ಕಾಂಗ್ರೆಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

 ತವಾಂಗ್ ಗಡಿಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಂದ ಹೇಳಿಕೆಗಾಗಿ ಕಾಂಗ್ರೆಸ್ ಮಂಗಳವಾರ ಆಗ್ರಹಿಸಿತು.

ಚೀನಾದೊಂದಿಗಿನ ಗಡಿ ವಿಷಯದ ಚರ್ಚೆಗಾಗಿ ಕಾಂಗ್ರೆಸ್ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲಿ ನಿಲುವಳಿ ನೋಟಿಸ್‌ಗಳನ್ನು ನೀಡಿದ್ದರು.

Similar News