ಮಂಗಳೂರು | ಡಿ.21ರಂದು ಸರ್ವ ಧರ್ಮಗಳ ಭಾವೈಕ್ಯತೆಯ ಕ್ರಿಸ್‌ಮಸ್ ಆಚರಣೆ: ಐವನ್ ಡಿಸೋಜಾ

Update: 2022-12-19 07:29 GMT

ಮಂಗಳೂರು, ಡಿ.19: ವಿಧಾನಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ 8ನೇ ವರ್ಷದ ಸರ್ವ ಧರ್ಮಗಳ ಭಾವೈಕ್ಯತೆಯ ಕ್ರಿಸ್‌ಮಸ್ ಆಚರಣೆ ಡಿ. 21ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಭ್ರಮಾಚರಣೆಯ ಬಗ್ಗೆ ಮಾಹಿತಿ ನೀಡಿದ ಐವನ್ ಡಿಸೋಜಾ, ಈ ಬಾರಿ ದ.ಕ. ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿಗಳ ಜತೆ ವಿವಿಧ ಸ್ಪರ್ಧೆಗಳೊಂದಿಗೆ ಆಚರಣೆ ನಡೆಯಲಿದೆ ಎಂದರು.

ಬೆಳಗ್ಗೆ ಸೈಂಟ್ ಆ್ಯಗ್ನೆಸ್ ಸ್ಕೂಲ್‌ನ ಆವರಣದಲ್ಲಿ ಸುಮಾರು 350 ವಿಶೇಷ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಜತೆ ನಕ್ಷತ್ರ ಸ್ಪರ್ಧೆ, ಕ್ರಿಸ್‌ಮಸ್ ಕ್ಯಾರಲ್ ಸಿಂಗಿಂಗ್ ಹಾಗೂ ಇತರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಬೆಳಗ್ಗೆ 10 ಗಂಟೆಗೆ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಪ್ರಾಂಶುಪಾಲರಾದ ಸಿ. ಮರಿಯಾ ಶ್ರುತಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಸಭಾ ಕಾರ್ಯಕ್ರಮವನ್ನು ಸಿಎಸ್‌ಐನ ನೂತನ ಬಿಷಪ್‌ರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ ರೈ.ರೆ. ಹೇಮಚಂದ್ರ ಕುಮಾರ್ ಉದ್ಘಾಟಿಸುವರು. ಸರ್ವಧರ್ಮ ಸಂಗಮದ ಅಂಗವಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉದ್ಯಮಿ ಜಯರಾಂ ಶೇಖ, ಮನಪಾ ಸದಸ್ಯ ಶಶಿಧರ ಹೆಗ್ಡೆ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜಾ, ರೋಹನ್ ಕಾರ್ಪೊರೇಶನ್‌ನ ಅಧ್ಯಕ್ಷರಾದ ರೋಹನ್ ಮೊಂತೆರೋ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಹಬ್ಬಗಳು ಪರಸ್ಪರ ಸಮುದಾಯದ ಜನರನ್ನು ಒಟ್ಟುಗೂಡಿಸುವುದರಿಂದ ಕಳೆದ ಎಂಟು ವರ್ಷಗಳಿಂದ ದೀಪಾವಳಿ, ರಂಝಾನ್ ಹಾಗೂ ಕ್ರಿಸ್‌ಮಸ್ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೀನಾ ಟೆಲ್ಲಿಸ್, ಹಬೀಬುಲ್ಲಾ ಕಣ್ಣೂರು, ಜೇಮ್ಸ್ ಪ್ರವೀಣ್, ಭಾಸ್ಕರ ರಾವ್ ಉಪಸ್ಥಿತರಿದ್ದರು.

Similar News