ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ: ವಿನೂತನ ಕಾರ್ಯಕ್ರಮಕ್ಕೆ ದ.ಕ.ಜಿಪಂ ಸಿದ್ಧತೆ
►ಜನವರಿಯಿಂದ ಶಾಲೆಗಳಲ್ಲಿ ‘ಮನೋಸ್ಥೈರ್ಯ’ ಕಾರ್ಯಕ್ರಮ ►ಡಿ. 20ರಂದು ಆಯ್ದ ಶಿಕ್ಷಕರಿಗೆ ತರಬೇತಿ
ಮಂಗಳೂರು: ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಖಿನ್ನತೆ, ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ.
ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ಮುತುವರ್ಜಿಯಲ್ಲಿ ಶಾಲೆಗಳಲ್ಲಿ ಇದೀಗ ‘ಮನೋಸ್ಥೈರ್ಯ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆರಂಭಿಕ ಹಂತದಲ್ಲಿ ಪ್ರೌಢಶಾಲೆಗಳಲ್ಲಿ ಈ ಮನೋಸ್ಥೈರ್ಯ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಆಸಕ್ತ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮ ಡಿ. 20ರಂದು ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾರಕ್ಷರತಾ ಇಲಾಖೆ, ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಕಾಯಿಲೆ, ನ್ಯೂನ್ಯತೆ ಬಗ್ಗೆ ಸಮಗ್ರ ಮಾಹಿತಿ, ತರಬೇತಿ ನೀಡಿ, ಸಮಸ್ಯೆಯನ್ನು ಗುರುತಿಸಿ ಮಕ್ಕಳಿಗೆ ಆರಂಭದಲ್ಲಿಯೇ ನೆರವು ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.
ಮಕ್ಕಳ ಬಗೆಗಿನ ಕಾಳಜಿ, ಅವರ ಸಂಪೂರ್ಣ ಆರೋಗ್ಯದ ಬಗ್ಗೆ ನೈಜ ಜಾಗೃತಿ, ಮಕ್ಕಳನ್ನು ತಿದ್ದಬಲ್ಲ ತಾಳ್ಮೆ ಹಾಗೂ ಹೊಸದನ್ನು ಅರಿವ ಕುತೂಹಲ ಹೊಂದಿದ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಮಕ್ಕಳ ಜತೆ ಹೆಚ್ಚು ಬೆರೆಯುವ, ವಿವಿಧ ಸಂಪನ್ಮೂಲ ವ್ಯಕ್ತಿಗಳ ಜತೆ ಸಮನ್ವಯತೆ ಕಾಯ್ದುಕೊಳ್ಳಬಲ್ಲ, ಮಕ್ಕಳ ಸಮಸ್ಯೆಗಲಿಗೆ ಸ್ಪಂದಿಸುವ ಹಾಗೂ ಸಮಯ ನೀಡಬಲ್ಲ, ಮಕ್ಕಳ ಬೆಳವಣಿಗೆಗಳ ಬಗ್ಗೆ ಸ್ಥೂಲ ಪರಿಚಯ ಹೊಂದಿರುವ, ಮಕ್ಕಳಿಗಾಗಿ ಕಾರ್ಯಾಗಾರ, ಮಾಹಿತಿ ಶಿಬಿರ ಸಂಯೋಜನೆ ಮಾಡುವ ಆಸಕ್ತಿಯುಳ್ಳ ಶಿಕ್ಷಕರನ್ನು ಈ ತರಬೇತಿಗಾಗಿ ಆಯ್ಕೆ ಮಾಡಲಾಗಿದೆ.
ಪ್ರತಿ ಶಾಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮಕ್ಕಳಿಗೆ ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಚರ್ಚೆ, ಸಂವಾದ ಮೊದಲಾದ ಕಾರ್ಯಕ್ರಮಗಳನ್ನು ಈ ತರಬೇತಿ ಪಡೆದ ಶಿಕ್ಷಕರು ಆಯೋಜಿಸುವರು. ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗಳಿಂದ ಇಂತಹ ಶಿಕ್ಷಕರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಲಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಸದೃಢತೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಲ್ಲ ಮನೋಬಲ ಸೃಷ್ಟಿಸುವ ನಿಟ್ಟಿನಲ್ಲಿ ಈ ಶಿಕ್ಷಕರು ಸಹಕರಿಸಲಿದ್ದಾರೆ.
ಪ್ರತಿ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮುತುವರ್ಜಿವಹಿಸಿ ಓರ್ವ ಶಿಕ್ಷಕರನ್ನು ಈ ಉದ್ದೇಶಕ್ಕೆ ನೋಡಲ್ ಅಧಿಕಾರಿ ಅಥವಾ ಮೆಂಟರ್ ಆಗಿ ನೇಮಕ ಮಾಡಬೇಕಾಗಿದೆ. ಶಾಲೆಯಲ್ಲಿ ಮಾನಸಿಕ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಆಪ್ತ ಸಲಹಾ ಕೇಂದ್ರವನ್ನು ತೆರೆಯಲಾಗುವುದು. ಶಾಲಾ ಮಕ್ಕಳ ಪೋಷಕರಿಗೆ ಇನ್ನು ಹೆಚ್ಚಿನ ಮಾಹಿತಿ ಹಾಗೂ ಅರಿವು ಮೂಡಿಸುವುದು. ಆಪ್ತ ಸಲಹಾ ಕೇಂದ್ರವು ಮಕ್ಕಳಲ್ಲಿರುವ ಮಾನಸಿಕ ತೊಂದರೆಗಳನ್ನು ಹೋಗಲಾಡಿಸಲು ಮತ್ತು ಪರಿಹರಿಸಲು ಅಗತ್ಯ ಕ್ರಮ ವಹಿಸುವುದು. ಮಾನಸಿಕ ಅಥವಾ ಒತ್ತಡಕ್ಕೆ ಒಳಗಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಕೌನ್ಸಲಿಂಗ್ ಮಾಡುವುದು. ಈಗಾಗಲೇ ಸರಕಾರದ ಆದೇಶದಂತೆ ನೋ ಬ್ಯಾಗ್ ದಿನದಂದು ಕಡ್ಡಾಯವಾಗಿ ಇತರ ಚಟುವಟಿಕೆಗಳ ಸಂದರ್ಭ ಒಂದು ಗಂಟೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವ ಕುರಿತು ಮಕ್ಕಳಿಗೆ ತರಗತಿ ನಡೆಸಲು ಸೂಚಿಸಲಾಗುತ್ತದೆ.
ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವ ಮನೋಸ್ಥೈರ್ಯ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ಡಿ. 20ರಂದು ಜಿಲ್ಲಾ ಪಂಚಾಯತ್‌ನಲ್ಲಿ ನಡೆಯಲಿದೆ. ಈಗಾಗಲೇ ಸುಮಾರು ದ.ಕ. ಜಿಲ್ಲೆಯ ಸುಮಾರು 220ಕ್ಕೂ ಅಧಿಕ ಆಸಕ್ತ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ತಜ್ಞರಿಂದ ತರಬೇತಿ ಕೊಡಿಸಿ ಜನವರಿ ತಿಂಗಳಿನಿಂದಲೇ ಪ್ರಥಮ ಹಂತದಲ್ಲಿ ಪ್ರೌಢಶಾಲೆಗಳಲ್ಲಿ ಈ ಮನೋಸ್ಥೈರ್ಯ ಕಾರ್ಯಕ್ರಮ ಆರಂಭವಾಗಲಿದೆ.
►ಡಾ. ಕುಮಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ..