ಸ್ಥಳೀಯ ಸಂಸ್ಥೆಗಳಲ್ಲಿನ ಇ-ಆಸ್ತಿ ತಾಂತ್ರಿಕ ಸಮಸ್ಯೆ ತಿಂಗಳಲ್ಲಿ ಪರಿಹಾರ: ಸಚಿವ ಎಂಟಿಬಿ ನಾಗರಾಜ್

Update: 2022-12-23 18:33 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.23: ‘ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿನ ‘ಇ-ಸ್ವತ್ತು’ ಬದಲಿಗೆ ಹೊಸದಾಗಿ ರೂಪಿಸಿರುವ ‘ಇ-ಆಸ್ತಿ’ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನುಒಂದು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಪೌರಾಡಳಿತ ಸಚಿವ ಎಚಿಟಿಬಿ ನಾಗರಾಜ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಾಫ್ಟ್‍ವೇರ್ ಟೆಕ್ನಾಲಜಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 65 ಕೋಟಿ ರೂ.ವೆಚ್ಚದಲ್ಲಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ನೀಡಿದ ಸ್ಪೀಕರ್ ಕಾಗೇರಿ, ‘ಇ ಸ್ವತ್ತಿಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶದಲ್ಲಿ ಸಮಸ್ಯೆ ತಲೆದೂರಿದೆ. ಆದರೆ, ನಿಮಗೆ(ಸಚಿವರಿಗೆ) ಇರುವ ಬದ್ಧತೆ ಅಧಿಕಾರಿಗಳಿಗೆ ಇರುವುದಿಲ್ಲ. ಅಧಿಸೂಚನೆ ಹೊರಡಿಸಿಲು ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನದ ಅನುಷ್ಟಾನಕ್ಕೆ ನೀವೇ ಬೆನ್ನು ಹತ್ತಬೇಕು ಎಂದು ಹೇಳಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ಎಂಟಿಬಿ ನಾಗರಾಜ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯಿಂದ 2022ರ ನವೆಂಬರ್ 5ರಿಂದ ನ.20ರ ವರೆಗೆ 15 ದಿನಗಳ ಕಾಲ ಸರ್ವರ್ ಸ್ಥಗಿತವಾಗಿತ್ತು.ಆ ಬಳಿಕ ನ.21ರಿಂದ ಸರ್ವರ್ ಸಮಸ್ಯೆ ಪರಿಹರಿಸಲಾಗಿದೆ ಎಂದು ಅವರು ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಖಾತಾಕ್ಕೆ ಅರ್ಜಿ ಸಲ್ಲಿಸಲು ಅವಕಾಶವೇ ಇಲ್ಲವಾಗಿದೆ.ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಅಧಿಕಾರಿಗಳು ಪದೆ ಪದೆ ಅಧಿಕಾರಿಗಳು ಹೊಸ ನಿಯಮಗಳನ್ನು ಹೇಳುತ್ತಿದ್ದಾರೆ.ಇದು ಜನರಿಗೆ ತೊಂದರೆಯಾಗುತ್ತಿದ್ದು, ಹೀಗಾಗಿ ಸರಕಾರ ಇ ಆಸ್ತಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

Similar News