ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಮಸೂದ್ ಪುನರಾಯ್ಕೆ

Update: 2022-12-24 14:17 GMT

ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ 6ನೆ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ.

ನಗರದ ಮಿನಿ ಪುರಭವನದಲ್ಲಿ ಶನಿವಾರ ನಡೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ವಿಕ್ಷಕರಾಗಿ ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಯೂಸುಫ್ ಡಿ. ಪಾಲ್ಗೊಂಡಿದ್ದರು. ಕುದ್ರೋಳಿಯ ಜಾಮಿಯಾ ಮಸೀದಿಯ ಖತೀಬ್ ಅಬ್ದುಲ್ ಮನ್ನಾನ್ ಮುಫ್ತಿ ದುಆಗೈದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ವಂದಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಮುಹಮ್ಮದ್ ಮಸೂದ್ ಅವರೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಹಮ್ಮದ್ ಮಸೂದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
 
ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಬಳಿಕ ಮಾತನಾಡಿದ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ‘ಮುಸ್ಲಿಂ ಸೆಂಟ್ರಲ್ ಕಮಿಟಿಯು ಸಮುದಾಯದ ಹಿತಕ್ಕಾಗಿ ಸಾಕಷ್ಟು ಶ್ರಮಿಸಿದೆ. ಅನೇಕ ಜನಪರ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿವೆ. ಮುಂದೆಯೂ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದರು.

2003ರಿಂದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಸತತ ಮೂರು ಅವಧಿಗೆ (ತಲಾ ಮೂರು ವರ್ಷ) ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದರು. ಅಲ್ಲದೆ ಕಳೆದ ಎರಡು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಶನಿವಾರ ನಡೆದ ಮಹಾಸಭೆಯಲ್ಲಿ ಮೂರನೇ ಬಾರಿಗೆ ಮುಂದಿನ ಮೂರು ವರ್ಷಕ್ಕೆ (2022-25) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಹಿರಿಯ ರಾಜಕಾರಣಿಯೂ ಆಗಿರುವ ಮುಹಮ್ಮದ್ ಮಸೂದ್ ವಿಧಾನ ಪರಿಷತ್ ಸದಸ್ಯರಾಗಿ, ಮುಖ್ಯಸಚೇತಕರಾಗಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಬಳಿಕ ಸಮಾಜ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮುಸ್ಲಿಂ ಸೆಂಟ್ರಲ್ ಕಮಿಟಿ ಮತ್ತು ತನ್ನ ತಂದೆಯ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ಹಾಜಿ ಕಾರ್ಕಳ ಶೇಖ್ ಶಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ಮೂಲಕ ಇಳಿ ವಯಸ್ಸಿನಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೂ-ಮುಸ್ಲಿಂ ಮಧ್ಯೆ ಸೌಹಾರ್ದ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಮುಸ್ಲಿಮರಿಗೆ ಎಂಪಿ, ಎಮ್ಮೆಲ್ಲೆ ಟಿಕೆಟ್ ಗಾಗಿ ಹೋರಾಟ : ಮಸೂದ್

ದ.ಕ.ಜಿಲ್ಲೆಯಲ್ಲಿ ಮುಸ್ಲಿಮರು ರಾಜಕೀಯವಾಗಿ ಬಲಿಷ್ಠರಾಗಬೇಕು. ತನ್ನ ರಾಜಕೀಯ ಅಸ್ತಿತ್ವವನ್ನು ತೋರಿಸಬೇಕು. ಅದಕ್ಕಾಗಿ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಪ್ರಮುಖ ಪಕ್ಷವು ಎರಡು ಎಂಎಲ್‌ಎ, ಒಂದು ಎಂಎಲ್‌ಸಿ ಹಾಗೂ ಲೋಕಸಭಾ ಸದಸ್ಯ ಸ್ಥಾನಕ್ಕೆ ಟಿಕೆಟ್ ನೀಡುವವರೆಗೆ ಪ್ರಬಲ ಹೋರಾಟ ಮಾಡಬೇಕಿದೆ.

- ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್

Similar News