×
Ad

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ: ಮಂಗಳೂರಿನಲ್ಲಿ ಮಿಲಿಂದ್ ಸೋಮನ್

'ಮುಂಬೈ-ಮಂಗಳೂರು-ಗ್ರೀನ್ ರೈಡ್ 2.0' ಸೈಕಲ್ ಯಾತ್ರೆ ಸಮಾರೋಪ

Update: 2022-12-26 23:53 IST

ಮಂಗಳೂರು: ಪರಿಸರ ಸಂರಕ್ಷಣೆ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದು ಖ್ಯಾತ ಮಾಡೆಲ್ ಮಿಲಿಂದ್ ಸೋಮನ್ ವಾಯುಮಾಲಿನ್ಯದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿರುವ ಗ್ರೀನ್ ರೈಡ್ 2.0 ಸೈಕಲ್ ಯಾತ್ರೆಯ ಮೂಲಕ ಇಂದು ಮಂಗಳೂರು ತಲುಪಿದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಡಿ.19 ರಂದು ಮುಂಬೈಯಿಂದ  ಆರಂಭಿಸಿರುವ ಈ ಸೈಕಲ್ ಜಾಥ 8 ದಿನಗಳ ಬಳಿಕ 10 ನಗರಗಳ ಮೂಲಕ 1400 ಕಿ.ಮೀ. ಕ್ರಮಿಸಿ ಮಂಗಳೂರಿನಲ್ಲಿ ಗ್ರೀನ್ ರೈಡ್ ಯಾತ್ರೆಯನ್ನು ಸಮಾರೋಪಗೊಳಿಸಿದ್ದಾರೆ. ಈ ಸಂದರ್ಭ ಮಂಗಳೂರು ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ಭೇಟಿ ನೀಡಿದ ಅವರು ಸ್ಥಳೀಯರನ್ನುದ್ದೇಶಿಸಿ ಮಾತನಾಡಿದರು.

ಮಾನವ ನಿರ್ಮಿತ ಚಟುವಟಿಕೆಗಳ ಕಾರಣ ಹವಾಮಾನದಲ್ಲಿ ವೇಗವಾದ ಬದಲಾವಣೆ ಆಗುತ್ತಿದೆ. ಈ ಕೃತಕ ಬದಲಾವಣೆಗೆ ಮಾನವನು ಹೊಂದಿಕೊಳ್ಳಲು ಸಾಧ್ಯವಾಗದು. ಆದ್ದರಿಂದ ನಮ್ಮ ರಕ್ಷಣೆಗಾಗಿ ಪರಿಸರವನ್ನು ಸಹಜ ಸ್ಥಿತಿಗೆ ತರಬೇಕಾಗಿದೆ ಎಂದು ಸೋಮನ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಸಮಸ್ಯೆಗಳು ಏರಿಕೆಯಾಗತೊಡಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ನಾಗರಿಕರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.

ಅವರು ನಂತೂರು ಮಾರ್ಗವಾಗಿ ಪಂಪ್ ವೆಲ್, ಮಹಾವೀರ ವೃತ್ತದ ಮೂಲಕ ಮಂಗಳೂರಿಗೆ  ಆಗಮಿಸಿ ಬಾವುಟ ಗುಡ್ಡದ ಮೂಲಕ ಬ್ಯಾಂಕ್ ಆಫ್ ಬರೋಡಾದ ಮಂಗಳೂರು  ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರನ್ನು ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕಿ ಹಾಗೂ ವಿಭಾಗೀಯ ಮುಖ್ಯಸ್ಥರಾದ ಗಾಯತ್ರಿ ಆರ್., ಬ್ಯಾಂಕ್ ನ  ವಿಭಾಗೀಯ ಉಪ ಮುಖ್ಯಸ್ಥರಾದ ಗೋಪಾಲ ಕೃಷ್ಣ, ಉಪ ಮಹಾ ಪ್ರಬಂಧಕ ವಿನಯ ಗುಪ್ತ ಸ್ವಾಗತಿಸಿದರು. ಡಾ.ಮುರಳೀ ಮೋಹನ್ ಚೂಂತಾರು ಉಪಸ್ಥಿತರಿದ್ದರು.

ಬ್ಯಾಂಕ್ ಪ್ರಬಂಧಕ ಎಡ್ರಿಚ್ ಅಜಯ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.

Similar News