ವೋಟರ್ ಐಡಿ ಹಗರಣ: ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ

ಸಂಸ್ಥೆಯ ನಿರ್ದೇಶಕರ ಸಹಭಾಗಿತ್ವದ ಸಂಸ್ಥೆಗಳಿಗೂ ಟೆಂಡರ್ ನಿರಾಕರಣೆ

Update: 2022-12-27 15:00 GMT

ಬೆಂಗಳೂರು, ಡಿ.27: ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು(ಚಿಲುಮೆ ಸಂಸ್ಥೆ) ಕಪ್ಪುಪಟ್ಟಿಗೆ ಸೇರಿಸಿ ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ಚಿಲುಮೆ ಸಂಸ್ಥೆಗೆ ಆ.20ರಂದು ಅನುಮತಿಯನ್ನು ನೀಡಲಾಗಿತ್ತು. ಸೆ.20ರಂದು ಸಮನ್ವಯ ಎಂಬ ಟ್ರಸ್ಟ್, ಚಿಲುಮೆ ಸಂಸ್ಥೆಯ ವಿರುದ್ಧ ಬಿಬಿಎಂಪಿಯಲ್ಲಿ ದೂರು ದಾಖಲಿಸಿತ್ತು. ಹಾಗಾಗಿ ನ.2ರಂದು ಚಿಲುಮೆಗೆ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿತ್ತು. 

ಚಿಲುಮೆ ಸಂಸ್ಥೆಯ ಪ್ರತಿನಿಧಿಗಳು ಮತಗಟ್ಟೆಯ ಅಧಿಕಾರಿಗಳು ಎಂದು ಗುರುತಿನ ಚೀಟಿಯನ್ನು ಧರಿಸಿ, ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಪಡೆಯಲಾಗುತ್ತಿತ್ತು. ಈ ದೂರಿನ ಅನ್ವಯ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮತ್ತು ಹಲಸೂರು ಪೊಲೀಸ್ ಠಾಣೆಯಲ್ಲಿ ನ.17ರಂದು ಪ್ರತ್ಯೇಕ ಎಫ್‍ಐಆರ್ ಗಳು ದಾಖಲು ಮಾಡಲಾಗಿತ್ತು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ನೀಡಲಾಗಿದ್ದ ಅನುಮತಿಯನ್ನು ಚಿಲುಮೆ ಸಂಸ್ಥೆಯು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಲ್ಲದೆ, ರಾಜಕೀಯ ಪಕ್ಷದಿಂದ ದೇಣಿಗೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು, ಬಿಬಿಎಂಪಿಯು ಚಿಲುಮೆ ಸಂಸ್ಥೆಗೆ ಡಿ.7ರಂದು ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಸೂಕ್ತ ಉತ್ತರವನ್ನು ನೀಡದ ಕಾರಣ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಚಿಲುಮೆ ಸಂಸ್ಥೆಯಾಗಲೀ, ಸಂಸ್ಥೆಯ ನಿರ್ದೇಶಕರ ಸಹಭಾಗಿಯಾಗಿ ನಡೆಯುವ ಇತರೆ ಯಾವುದೇ ಸಂಸ್ಥೆಯಾಗಲೀ ಬಿಬಿಎಂಪಿ ವತಿಯಿಂದ ನಡೆಸುವ ಉಚಿತ ಕಾರ್ಯಕ್ರಮಗಳಿಗೆ ಅನುಮತಿಯನ್ನು ಪಡೆಯದಂತೆ ನಿರ್ಬಂಧಿಸಲಾಗಿದೆ. ಹಾಗೆಯೇ ಪಾಲಿಕೆಯ ಸೇವೆ ಹಾಗೂ ಸಂಗ್ರಹಣೆಯ ಟೆಂಡರ್‍ಗಳಲ್ಲಿ ಭಾಗವಹಿಸದಂತೆಯೂ, ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆಯೂ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

Similar News