ಕೊರೋನ ಜಾಗೃತಿಯ ಹೆಸರಿನಲ್ಲಿ ಪ್ರಹಸನ!

Update: 2022-12-28 04:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಚೀನಾದಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಭಾರತ ಕೂಡ ಎಂದಿನಂತೆ ಕೊರೋನ ಜಾಗೃತ ಅಣಕು ಕಾರ್ಯಾಚರಣೆಗೆ ಶುರು ಹಚ್ಚಿದೆ. ಭಾರತದಲ್ಲಿ ಕೊರೋನ ಜಾಗೃತಿ ಎನ್ನುವುದು 'ಬಹುದೊಡ್ಡ ಮೋಸ' ಎನ್ನುವುದು ಕೊರೋನ ಕಾಲದ ಆರಂಭದಲ್ಲೇ ಜಗಜ್ಜಾಹೀರಾಗಿತ್ತು. ಒಂದೆಡೆ ಕೊರೋನದ ಹೆಸರಲ್ಲಿ ಅವೈಜ್ಞಾನಿಕವಾದ ಲಾಕ್‌ಡೌನ್‌ನ್ನು ವಿಧಿಸಿ ಜನಸಾಮಾನ್ಯರನ್ನು ಸರಕಾರ ಅತಂತ್ರಕ್ಕೀಡು ಮಾಡಿತು. ಆದರೆ ಚುನಾವಣೆ ಹತ್ತಿರ ಬಂದಾಗ ಸಹಸ್ರಾರು ಜನರನ್ನು ಒಂದೆಡೆ ಸೇರಿಸಿ ಪ್ರಚಾರ ರ್ಯಾಲಿಯನ್ನು ನಡೆಸಿತು. ಕೊರೋನ ಸೋಂಕು ಪ್ರಕರಣಗಳು ತಾರಕಕ್ಕೇರಿದ ಹೊತ್ತಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲೇ ಬೃಹತ್ ಸಮಾವೇಶಗಳು ನಡೆದವು. ಹೈದರಾಬಾದ್‌ನಲ್ಲೂ ಬಿಜೆಪಿ ಬೃಹತ್ ರ್ಯಾಲಿಗಳನ್ನು ಹಮ್ಮಿಕೊಂಡಿತು. ಅಮಿತ್ ಶಾ ಸಹಿತ ಹಲವು ನಾಯಕರು ಈ ರ್ಯಾಲಿ, ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಒಂದೆಡೆ ಜನಸಾಮಾನ್ಯರಿಗೆ ನಿರ್ಬಂಧಗಳನ್ನು, ಲಾಕ್‌ಡೌನ್‌ಗಳನ್ನು ಹೇರುತ್ತಾ , ರಾಜಕಾರಣಿಗಳು ಮಾತ್ರ ಸಮಾವೇಶಗಳಲ್ಲಿ ಭಾಗವಹಿಸುವುದು ಸಾಕಷ್ಟು ಟೀಕೆ, ವಿಮರ್ಶೆಗಳಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಗಂಗಾನದಿಯಲ್ಲಿ ಸಂತ್ರಸ್ತರ ಹೆಣಗಳು ಸಾಲು ಸಾಲಾಗಿ ತೇಲುತ್ತಿರುವ ಸಂದರ್ಭದಲ್ಲೇ, ಸರಕಾರ ಕುಂಭಮೇಳಕ್ಕೆ ಅನುಮತಿ ನೀಡಿತು. ಸಣ್ಣ ಪುಟ್ಟ ಉತ್ಸವಗಳಿಗೆ, ಕ್ರಿಶ್ಚಿಯನ್ನರ ಕ್ರಿಸ್‌ಮಸ್, ಮುಸ್ಲಿಮರ ಈದ್‌ಗೆ ನಿರ್ಬಂಧ ವಿಧಿಸಿದ ಸರಕಾರ ಕುಂಭಮೇಳದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿತು. ಮುಂದೆ ಕುಂಭಮೇಳ ಉತ್ತರ ಭಾರತದಲ್ಲಿ ಎಂತಹ ಅನಾಹುತಗಳನ್ನು ಸೃಷ್ಟಿಸಿತು ಎನ್ನುವುದನ್ನೂ ನಾವು ನೋಡಿದ್ದೇವೆ.

ಭಾರತದಲ್ಲಿ ಕೊರೋನ ಜಾಗೃತಿಯೆನ್ನುವುದು ಜನಸಾಮಾನ್ಯರನ್ನು ಹಿಂಸಿಸುವುದಕ್ಕಾಗಿ ಮಾತ್ರ ವ್ಯವಸ್ಥೆ ಬಳಸಿದ ಒಂದು ತಂತ್ರ ಮಾತ್ರವಾಗಿತ್ತು. ನಿಜಕ್ಕೂ ಜನರ ಮೇಲಿನ ಕಾಳಜಿಯಿಂದ ಕೂಡಿದ್ದಿದ್ದರೆ, ರಾಜಕಾರಣಿಗಳಿಗೊಂದು ಮಾರ್ಗಸೂಚಿ, ಜನಸಾಮಾನ್ಯರಿಗೊಂದು ಮಾರ್ಗಸೂಚಿಯನ್ನು ಅದು ಹೊರಡಿಸುತ್ತಿರಲಿಲ್ಲ. ಇದಾದ ಬಳಿಕ ಲಸಿಕೆಗಳನ್ನು ಮಾರುಕಟ್ಟೆಗೆ ಇಳಿಸುವುದಕ್ಕಾಗಿಯೇ 'ನಿರ್ಬಂಧ' 'ಲಾಕ್‌ಡೌನ್'ಗಳನ್ನು ಬ್ಲಾಕ್‌ಮೇಲ್ ರೂಪದಲ್ಲಿ ಬಳಸತೊಡಗಿತು ಎನ್ನುವ ಆರೋಪ ಸರಕಾರದ ಮೇಲಿದೆ. ಲಸಿಕೆಗಳನ್ನು ಜನರ ಮೇಲೆ ಹೇರುವ ಭಾಗವಾಗಿ ಸರಕಾರದ ಪ್ರಕಟಣೆಗಳು ಹೊರ ಬೀಳುತ್ತಿದ್ದವು. ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಾದರೆ ಪೋಷಕರು ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವ ನಿಯಮ ಹೇರಿತು. ಅದಕ್ಕೆ ವಿರೋಧ ವ್ಯಕ್ತವಾದಾಗ, ಮಕ್ಕಳು ಕಡ್ಡಾಯ ಲಸಿಕೆ ತೆಗೆದುಕೊಳ್ಳಬೇಕು ಎನ್ನುವ ಆದೇಶ ಹೊರಬಿತ್ತು. ಮಕ್ಕಳ ಪರೀಕ್ಷೆ, ಭವಿಷ್ಯ ಎಂದೆಲ್ಲ ಹೆದರಿಸಿ ಲಸಿಕೆಯ ಮೇಲೆ ನಂಬಿಕೆಯಿಲ್ಲದಿದ್ದರೂ ಪೋಷಕರು ಅನಿವಾರ್ಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕಾಯಿತು. ಆದರೆ ಇದೀಗ ಲಸಿಕೆಯ ದುಷ್ಪರಿಣಾಮಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ ಸರಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದೆ.

'ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವಾಗಿತ್ತು. ಜನರಿಗೆ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸಿರಲಿಲ್ಲ. ಆದುದರಿಂದ ಲಸಿಕೆಯಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅದಕ್ಕೆ ಸರಕಾರ ಹೊಣೆಯಲ್ಲ' ಎಂದು ಸುಪ್ರೀಂಕೋರ್ಟ್‌ಗೆ ಸರಕಾರ ಹೇಳಿಕೆ ನೀಡಿದೆ. ಇಂದಿಗೂ ಜನಸಾಮಾನ್ಯರು ಲಸಿಕೆಯ ಕುರಿತಂತೆ ನಂಬಿಕೆಯನ್ನು ಹೊಂದಿಲ್ಲ. ಜನಸಾಮಾನ್ಯರು ಲಸಿಕೆ ನಮ್ಮ ಅಗತ್ಯ ಎಂದು ಬೀದಿಯಲ್ಲಿ ನಿಂತು ಕೇಳಿಲ್ಲ. 'ಅನಗತ್ಯ ನಿರ್ಬಂಧ, ಲಾಕ್‌ಡೌನ್‌ಗಳ ಮೂಲಕ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸಬೇಡಿ' ಎನ್ನುವುದು ಅಂದೂ ಇಂದೂ ಜನರ ಬೇಡಿಕೆಯಾಗಿದೆ.

ಈಗ ಮತ್ತೆ ಸರಕಾರ ಕೊರೋನ ಗುಮ್ಮನ ಕಡೆಗೆ ಕೈ ತೋರಿಸುತ್ತಿದೆ. ಕೊರೋನ ಪ್ರಕರಣಗಳ ಅಂಕಿಸಂಕಿಗಳನ್ನು ಮುಂದಿಟ್ಟುಕೊಂಡು ಮತ್ತೆ ನಿರ್ಬಂಧಗಳನ್ನು ಹೇರಲು ಮುಂದಾಗಿದೆ. ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾಸ್ಕ್ ಪ್ರಹಸನ ನಡೆದಿದೆ. ಇಷ್ಟಕ್ಕೂ ಮಾಸ್ಕ್ ಧರಿಸುವುದರಿಂದ ಕೊರೋನವನ್ನು ತಡೆಯಲು ಸಾಧ್ಯ ಎನ್ನುವುದರ ಬಗ್ಗೆಯೇ ವೈದ್ಯಕೀಯ ವಲಯಗಳಲ್ಲಿ ಭಿನ್ನಭಿಪ್ರಾಯಗಳಿವೆ. ಭಾರತದಂತಹ ದೇಶಗಳಲ್ಲಿ ಮಾಸ್ಕ್ ಮೂಲಕವೇ ಕೊರೋನ ಹಾಗೂ ಇನ್ನಿತರ ರೋಗಗಳೂ ಹರಡುವ ಸಾಧ್ಯತೆಗಳಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಬಡವರೇ ಹೆಚ್ಚಿರುವ ಈ ದೇಶದಲ್ಲಿ, ಜನರು ಮಾಸ್ಕ್ ಧರಿಸುತ್ತಿರುವುದು ಕೊರೋನಕ್ಕೆ ಹೆದರಿಯಲ್ಲ, ಬದಲಿಗೆ ಪೊಲೀಸರಿಗೆ, ಸರಕಾರದ ಕಾನೂನುಗಳಿಗೆ ಹೆದರಿ. ಬಳಸಿದ ಮಾಸ್ಕ್‌ಗಳನ್ನೇ ಮತ್ತೆ ಬಳಸಿದರೆ ಅದರಿಂದ ಅನಾಹುತವೇ ಅಧಿಕ. ಕೊರೋನದಿಂದ ರಕ್ಷಣೆ ಪಡೆಯಲು ಹೋಗಿ ಇನ್ನಿತರ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳನ್ನು ಜನರು ಮೈಮೇಲೆ ಎಳೆದುಕೊಂಡ ಉದಾಹರಣೆಗಳೂ ಇವೆ. ಆದುದರಿಂದ, ಸರಕಾರ ಮಾಸ್ಕ್ ಗಳನ್ನು ಮತ್ತೆ ಜನರ ಮೇಲೆ ಹೇರುವ ಮೊದಲು ಹಲವು ಬಾರಿ ಯೋಚಿಸಬೇಕಾಗಿದೆ.

ಸರಕಾರ ಕೊರೋನ ಗುಮ್ಮನನ್ನು ಹೊರಬಿಟ್ಟಬೆನ್ನಿಗೇ ಕಂಪೆನಿಗಳು ತಮ್ಮ ಲಸಿಕೆಗಳನ್ನೂ ಹೊರಬಿಡುತ್ತಿವೆ. ಈಗಾಗಲೇ 'ಬೂಸ್ಟರ್' ತೆಗೆದುಕೊಳ್ಳಲು ಸರಕಾರ ಪರೋಕ್ಷ ಒತ್ತಡವನ್ನು ಜನರ ಮೇಲೆ ಹೇರುತ್ತಿದೆ. ಅದರ ಬೆನ್ನಿಗೇ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ಸರಕಾರ ಅನುಮೋದನೆಯನ್ನು ನೀಡಿದೆ. ಈಗಾಗಲೇ ಔಷಧಿ ಕಂಪೆನಿ ಈ ಔಷಧಿಗೆ 800 ರೂಪಾಯಿ ದರವನ್ನು ನಿಗದಿ ಮಾಡಿದೆ. ಸರಕಾರಕ್ಕೆ 325 ರೂ. ಗೆ ಮಾರುವುದಕ್ಕೂ ಸಿದ್ಧತೆ ನಡೆಸುತ್ತಿದೆ. ದೇಶದಲ್ಲಿ ಮತ್ತೆ ಕೊರೋನ ಹೆಸರಿನಲ್ಲಿ ಭಯವನ್ನು ಬಿತ್ತಿ, ನಿರ್ಬಂಧ, ಲಾಕ್‌ಡೌನ್‌ಗಳ ಬೆದರಿಕೆಯನ್ನು ಒಡ್ಡಿ ಈ ಔಷಧಿಗಳ ಮಾರಾಟಕ್ಕೆ ಸರಕಾರ ಇಳಿದಿದೆ ಎಂದು ಹಲವು ತಜ್ಞರು ಆರೋಪಿಸುತ್ತಿದ್ದಾರೆ. ಅದಕ್ಕೆ ಪುಷ್ಟಿಕೊಡುವಂತೆ ಈಗಾಗಲೇ ರಾಜಕಾರಣಿಗಳು ಹೇಳಿಕೆಗಳನ್ನು ನೀಡಿದ್ದಾರೆ. ಸರಕಾರ ಹೊಸ ಹೊಸ ಆದೇಶಗಳನ್ನು ನೀಡತೊಡಗಿದೆ.

ಕೊರೋನ ದೇಶವನ್ನು ಒಮ್ಮೆ ಆವರಿಸಿ ಹೊರಟು ಹೋಗಿದೆ. ಕೊರೋನ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಲಸಿಕೆಯ ಅಗತ್ಯವಿರುವುದಿಲ್ಲ ಎನ್ನುವುದನ್ನು ಹಲವು ತಜ್ಞ ವೈದ್ಯರು ಪದೇ ಪದೇ ಹೇಳುತ್ತಿದ್ದಾರೆ. ಜೊತೆಗೆ ದೇಶಾದ್ಯಂತ ದೊಡ್ಡ ಸಂಖ್ಯೆಯ ಜನರು ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಕೂಡ. ಹೀಗಿರುವಾಗ ಮತ್ತೆ ಹೊಸದಾಗಿ ಬೂಸ್ಟರ್‌ಗಳನ್ನು, ಮೂಗಿನ ಮೂಲಕ ನೀಡುವ ಲಸಿಕೆಗಳನ್ನು ಜನರ ಮೇಲೆ ಹೇರುವ ಅಗತ್ಯವಿದೆಯೆ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಲಸಿಕೆಗಳಿಂದ ಸಂತ್ರಸ್ತರಾದ ಹಲವು ಕುಟುಂಬಗಳು ನ್ಯಾಯಕ್ಕಾಗಿ ಸುಪ್ರೀಂಕೋರ್ಟಿಗೆ ಹೋಗಿವೆ. ದೇಶದಲ್ಲಿ ಹೆಚ್ಚುತ್ತಿರುವ ಯುವಕರ ಹೃದಯಾಘಾತಗಳಿಗೂ ಲಸಿಕೆಗಳಿಗೂ ಸಂಬಂಧವಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಯಾವುದೇ ಲಸಿಕೆಯನ್ನು ಜನರ ಮೇಲೆ ಹೇರುವುದಾದರೂ ಅದರ ಬಗ್ಗೆ ಪೂರ್ಣ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ನಾಳೆ ಯಾರಿಗಾದರೂ ಲಸಿಕೆಯಿಂದ ತೊಂದರೆಯಾದರೆ ಅದಕ್ಕೆ ಪರಿಹಾರವನ್ನು ಸರಕಾರವೇ ನೀಡಬೇಕು. ಇದಕ್ಕೆ ಸಿದ್ಧವಿಲ್ಲ ಎಂದಾದರೆ, ಸರಕಾರ ಜನರ ಮೇಲೆ ಲಸಿಕೆಯನ್ನು ಯಾವುದೇ ರೀತಿಯಲ್ಲಿ ಹೇರುವುದಕ್ಕೆ ಮುಂದಾಗ ಬಾರದು. ಇನ್ನಿತರ ರೋಗಗಳಿಂದ ನರಳುತ್ತಿರುವ ಜನರಿಗೆ ಆಸ್ಪತ್ರೆಗಳಲ್ಲಿ ಪ್ರವೇಶ ಸಿಗದಂತೆ ಭಯಭೀತಿ ಸೃಷ್ಟಿಸಿ ಅವರ ಸಾವು ನೋವಿಗೆ ಸರಕಾರವೇ ಕಾರಣವಾಗಬಾರದು. ಚೀನಾದಲ್ಲಿ ಬಂದ ಮಳೆಗೆ ಭಾರತದಲ್ಲಿ ಕೊಡೆ ಹಿಡಿಯುವ ಮೂರ್ಖತನವನ್ನು ಸರಕಾರ ಪ್ರದರ್ಶಿಸಬಾರದು.

Similar News