ಪ್ರಧಾನಿಯಿಂದ ನಿತ್ಯ ನೀತಿ ಸಂಹಿತೆ ಉಲ್ಲಂಘನೆ

Update: 2024-04-23 04:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಹತ್ತು ವರ್ಷಗಳಿಂದ ಯಾವ ಅಡ್ಡಿ ಆತಂಕಗಳಿಲ್ಲದೆ ನಿಚ್ಚಳ ಬಹುಮತದೊಂದಿಗೆ ಅಧಿಕಾರ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಚುನಾವಣೆಯಲ್ಲಿ ಜನರ ಬಳಿ ಹೇಳಿಕೊಳ್ಳಲು ಯಾವ ಸಾಧನೆಗಳೂ ಇಲ್ಲವೇ? ತಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಲಾಯಿತು. ಹಣದುಬ್ಬರವನ್ನು ನಿಯಂತ್ರಿಸಲಾಯಿತೇ? ವಸತಿ ರಹಿತ ಬಡವರಿಗಾಗಿ ಎಷ್ಟು ಮನೆಗಳನ್ನು ಕಟ್ಟಿಸಲಾಯಿತು ಎಂಬುದನ್ನು ಮತದಾರರಿಗೆ ಹೇಳಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರೆ ಅಭ್ಯಂತರವಿಲ್ಲ. ಆದರೆ 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಪ್ರಧಾನಿ ಸ್ಥಾನದಲ್ಲಿ ಕುಳಿತು ಈ ಸಲದ ಚುನಾವಣಾ ಪ್ರಚಾರದಲ್ಲಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಾರದೋ ಅದಕ್ಕಿಂತ ಕೆಳ ಮಟ್ಟಕ್ಕೆ ಇಳಿದು ಮಾತನಾಡುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ. ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಕಳೆದ ಶ್ರಾವಣ ತಿಂಗಳಲ್ಲಿ ಮಾಂಸ ತಿಂದರು ಎಂದು ಮೋದಿಯವರು ಟೀಕಿಸಿದರು. ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಾಗ ಭಜನೆ ಮಾಡುವವರ ಮೇಲೆ ಹಲ್ಲೆ ನಡೆಯುತ್ತಿದೆ ಎಂದರು. ಇನ್ನೊಂದು ಕಡೆ ‘‘ನಾನು ದ್ವಾರಕಾದಲ್ಲಿ ನೀರಿನೊಳಗೆ ಹೋಗಿ ಶ್ರೀ ಕೃಷ್ಣನನ್ನು ಪೂಜಿಸಿದೆ. ಆದರೆ ಕಾಂಗ್ರೆಸ್ ನಾಯಕ ಅದನ್ನು ಟೀಕಿಸುತ್ತಿದ್ದಾರೆ’’ ಎಂದರು. ರವಿವಾರ ರಾಜಸ್ಥಾನದ ಜಯಪುರದಲ್ಲಿ ಮಾತಾಡಿದ ಇದೇ ಮೋದಿಯವರು ಮನಮೋಹನ್ ಸಿಂಗ್‌ರ ಹಿಂದಿನ ಯಾವುದೋ ಹೇಳಿಕೆಯನ್ನು ಅಪ್ರಸ್ತುತವಾಗಿ ಉಲ್ಲೇಖಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ ಚಿನ್ನ, ಬೆಳ್ಳಿ, ಹಣ ಸೇರಿದಂತೆ ದೇಶದ ಸಂಪನ್ಮೂಲಗಳನ್ನೆಲ್ಲ ಮುಸಲ್ಮಾನರಿಗೆ ಕೊಡುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ದೇವರು ಮತ್ತು ಧರ್ಮದ ಹೆಸರಿನಲ್ಲಿ ಮತ ಯಾಚಿಸುವುದು ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆದರೆ ಮೋದಿಯವರು ನಿತ್ಯವೂ ಆಡುತ್ತಿರುವ ದ್ವೇಷದ ಪ್ರಚೋದನಕಾರಿ ಮಾತುಗಳು ಮಾಧ್ಯಮಗಳಲ್ಲಿ ಪ್ರಕಟವಾದರೂ ಚುನಾವಣಾ ಆಯೋಗ ಜಾಣ ಮೌನ ತಾಳಿದೆ. ಬಹುಶಃ ಚುನಾವಣಾ ನೀತಿ ಸಂಹಿತೆ ಆಳುವ ಪಕ್ಷಕ್ಕೆ ಹಾಗೂ ಪ್ರಧಾನಿಗೆ ಅನ್ವಯವಾಗುವುದಿಲ್ಲವೇನೋ. ಸಿಬಿಐ, ಈ.ಡಿ., ಐಟಿಗಳಂತೆ ಚುನಾವಣಾ ಆಯೋಗವೂ ಬಿಜೆಪಿಯ ಒಂದು ಅಂಗವಾಗಿ ಕಾರ್ಯನಿರ್ವಹಿಸುತ್ತದೇನೋ ಎಂಬ ಸಂದೇಹ ಸಹಜವಾಗಿ ಬರುತ್ತದೆ.

ತಮ್ಮ ನಾಯಕನೇ ಈ ರೀತಿ ನಾಲಿಗೆ ಹರಿ ಬಿಡುವುದರಿಂದ ಧರ್ಮದ ನಶೆಯೇರಿಸಿಕೊಂಡಿರುವ ಬಿಜೆಪಿಯ ಯತ್ನಾಳ್, ಸಿ.ಟಿ. ರವಿ., ಅಶೋಕ್, ಈಶ್ವರಪ್ಪ ಮುಂತಾದ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿತ್ಯ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದ್ವೇಷವನ್ನು ಕಾರುತ್ತಲೇ ಇದ್ದಾರೆ. ಇವರು ಮತ್ತು ಇವರ ನಾಯಕ ಎಷ್ಟು ಹತಾಶರಾಗಿದ್ದಾರೆಂದರೆ ಚುನಾವಣಾ ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಇವರ ಜಾಹೀರಾತುಗಳಲ್ಲೂ ಯಾವುದೇ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಅಡಕವಾಗಿಲ್ಲ. ಅದೇ ಮುಸ್ಲಿಮ್ ದ್ವೇಷ ಎಲ್ಲೆಡೆ ಹೆಡೆಯಾಡುತ್ತಿದೆ.

ಬೆಲೆ ಏರಿಕೆ, ನಿರುದ್ಯೋಗ, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಯಂಥ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜನಸಾಮಾನ್ಯರ ನಡುವೆ ದ್ವೇಷದ ಕಿಚ್ಚು ಹೊತ್ತಿಸಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರುವ ಹೊಲಸು ರಾಜಕೀಯಕ್ಕೆ ಈ ದೇಶದ ಪ್ರಧಾನಿ ಕೈ ಹಾಕಿದ್ದಾರೆ.ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಇವರು ಮಾಡಿದ್ದು ಇದನ್ನೇ. ತನ್ನ ವಿರೋಧಿಗಳನ್ನೆಲ್ಲ ನಗರ ನಕ್ಸಲರೆಂದು ಕರೆಯುತ್ತಾ ದೇಶದ ತುಂಬಾ ಚುನಾವಣೆ ಪ್ರಚಾರ ನಡೆಸಿರುವ ಇಂತಹ ವ್ಯಕ್ತಿ ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನದಲ್ಲಿ ಇರುವುದು ದೇಶ ನಾಚಿಕೆ ಪಡಬೇಕಾದ ಸಂಗತಿಯಾಗಿದೆ.

ನಿರಂಕುಶ ಪ್ರಭುವಿನಂತೆ ವರ್ತಿಸುತ್ತಾ ಸಾಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ದುರ್ಬಲಗೊಳಿಸುತ್ತಾ ಹೋದ ಮೋದಿಯವರು ಇತ್ತೀಚೆಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಬಳಿಕ ಹತಾಶರಾಗಿದ್ದಾರೆ. ಈ ಬಗ್ಗೆ ಉನ್ನತ ನ್ಯಾಯಾಲಯದ ತೀರ್ಪು ಬಂದ ನಂತರವೂ ಚುನಾವಣಾ ಬಾಂಡ್ ಯೋಜನೆಯನ್ನು ಬಿಜೆಪಿ ಹಾಗೂ ಸ್ವತಃ ಪ್ರಧಾನಿ ಸಮರ್ಥಿಸಿಕೊಂಡು,ಕೋರ್ಟ್ ತೀರ್ಪನ್ನು ಟೀಕಿಸುತ್ತಿದ್ದಾರೆ.

ಚುನಾವಣಾ ಬಾಂಡ್ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಗಿಂತ ಚುನಾವಣಾ ಬಾಂಡ್ ವ್ಯವಸ್ಥೆ ಪಾರದರ್ಶಕವಾಗಿತ್ತೆಂದು ಬಹಿರಂಗವಾಗಿ ಹೇಳುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ.

ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ದೇಣಿಗೆ ನೀಡಿದವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ಸೂಚನೆ ನೀಡಿದ ನಂತರದಲ್ಲಿ ಬಹಿರಂಗವಾದ ವಿವರಗಳು ಇಡೀ ಯೋಜನೆಯನ್ನು ರದ್ದು ಪಡಿಸಿರುವುದು ಸಮರ್ಥನೀಯ ಎಂದು ಹೇಳುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ಮೋದಿಯವರು ಸದರಿ ಯೋಜನೆ ದುರ್ಬಳಕೆ ಆಗಿದೆ ಎಂಬ ಆರೋಪಗಳನ್ನು ತಿರಸ್ಕರಿಸುತ್ತಾರೆ. ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವ ಹಾಗೂ ವ್ಯಾಪಕವಾಗಿ ದುರ್ಬಳಕೆಯಾಗಿರುವ ಯೋಜನೆಯೊಂದನ್ನು ಪ್ರಧಾನಿ ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ ಮಾತ್ರವಲ್ಲ ಆತಂಕದ ಸಂಗತಿಯಾಗಿದೆ.

ಪ್ರಧಾನಮಂತ್ರಿ ಸ್ಥಾನದಲ್ಲಿ ಇರುವ ವ್ಯಕ್ತಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯರನ್ನು ಜಾತಿ ಮತದ ಆಧಾರದಲ್ಲಿ ವಿಭಜಿಸಿ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಪ್ರಚೋದನಕಾರಿ ಮಾತುಗಳಿಗೆ ಚುನಾವಣಾ ಆಯೋಗ ಇನ್ನು ಮೇಲಾದರೂ ಕಡಿವಾಣ ಹಾಕಬೇಕು. ಮೋದಿಯವರ ಭಾಷಣಗಳನ್ನು ನಿರ್ಬಂಧಿಸಬೇಕು. ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅವರನ್ನು ತೆಗೆದು ಹಾಕಬೇಕು. ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡಬೇಕೇ ಹೊರತು ಕೇಂದ್ರದ ಆಡಳಿತ ಪಕ್ಷದ ಕೈಗೊಂಬೆಯಂತೆ ಕುಣಿಯಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News