×
Ad

ಎಫ್‍ಆರ್‍ಪಿ ದರ 100 ರೂ., ಕಾರ್ಖಾನೆಗಳಿಂದ 50 ರೂ. ಹೆಚ್ಚುವರಿ ಪಾವತಿಗೆ ಆದೇಶ

39 ದಿನಗಳ ಧರಣಿ ಕೈಬಿಟ್ಟ ಕಬ್ಬು ಬೆಳೆಗಾರರು

Update: 2022-12-30 18:08 IST

ಬೆಂಗಳೂರು, ಡಿ.30: ಕಬ್ಬು ಬೆಳೆಗಾರರ ಕೆಲವು ಬೇಡಿಕೆಗಳಿಗೆ ರಾಜ್ಯ ಸರಕಾರ ಕೊನೆಗೂ ಸ್ಪಂದಿಸಿದ್ದು, ಕಬ್ಬಿನ ಎಫ್‍ಆರ್‍ಪಿ ದರಕ್ಕೆ ಹೆಚ್ಚುವರಿಯಾಗಿ ಪ್ರತಿ ಮೆ.ಟನ್‍ಗೆ 100 ರೂ. ಹಾಗೂ ಎಥೆನಾಲ್ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿ 50 ರೂ. ದರ ನಿಗದಿ ಪಡಿಸುವ ಮೂಲಕ ಒಟ್ಟು 150 ರೂ. ನೀಡಲು ಆದೇಶ ಹೊರಡಿಸಿರುವ ಹಿನ್ನೆಲೆ ಸತತ 39 ದಿನಗಳ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿಯನ್ನು ಕೈಬಿಟ್ಟಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ದೂರವಾಣಿಯಲ್ಲಿ ನಮ್ಮೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರ ಬೇಡಿಕೆ ಅಸ್ತು ಎಂದಿದ್ದಾರೆ. 150 ದರವನ್ನು ಕೂಡಲೇ ಹೆಚ್ಚುವರಿಗೊಳಿಸಿ ಆದೇಶ ಹೊರಡಿಸಲಾಗಿದೆ. ರೈತರ ಇನ್ನುಳಿದ ಬೇಡಿಕೆಗಳನ್ನು ಶೀಘ್ರದಲ್ಲೆ ಬಗೆಹರಿಸುವ ಕುರಿತು ಚರ್ಚೆ ನಡೆದಿರುವುದರಿಂದ ಚಳುವಳಿ ಕೈ ಬಿಡುವಂತೆ ಸಚಿವರು ಮನವಿ ಮಾಡಿದರು. ರಾಜ್ಯ ಸರಕಾರದ ಪ್ರತಿನಿಧಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜನರಲ್ ಮ್ಯಾನೇಜರ್ ಬಸವರಾಜ್ ಸೂಮಣ್ಣನವರ್ ಧರಣಿ ಸ್ಥಳಕ್ಕೆ ಆಗಮಿಸಿ ಹೆಚ್ಚುವರಿ ದರ ನಿಗದಿಯ ಸರಕಾರದ ಅಧಿಕೃತ ಆದೇಶ ಪ್ರತಿಯನ್ನು ನೀಡಿದರು. ಈ ಕಾರಣದಿಂದ ಸರಕಾರದ ಮನವಿಗೆ ಒಪ್ಪಿ ಧರಣಿಯನ್ನು ಕೈಬಿಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಬಾಕಿ ಸಮಸ್ಯೆಗಳ ಬಗ್ಗೆ, ರಾಜ್ಯ ಸರಕಾರದ ನಿರ್ಧಾರವನ್ನು ಒಂದು ತಿಂಗಳವರೆಗೆ ಕಾದು ನೋಡುತ್ತೇವೆ. ಸದ್ಯ ರಾಜ್ಯದ ಕಬ್ಬು ಬೆಳೆಗಾರರ ಸತತ ಹೋರಾಟಕ್ಕೆ ಸರಕಾರ ಸ್ಪಂದಿಸಿರುವುದು ಸಮಾಧಾನ ತಂದಿದೆ. ಈ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ 905 ಕೋಟಿ ರೂ. ಹಣ ಹೆಚ್ಚುವರಿ ಸಿಕ್ಕಂತಾಗಿದೆ. ಇದು ರೈತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.

ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ, ಯಾರ ಅನುಮತಿ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು 250, 300 ರೂ. ಏರಿಕೆ ಮಾಡಿರುವ ಹಣದಲ್ಲಿ ಕಾರ್ಖಾನೆಗಳಿಂದ 150 ರೂ. ಕಡಿಮೆ ಮಾಡುವ ಆದೇಶವೂ ಆದರೆ ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತದೆ. ಸದ್ಯದಲ್ಲಿಯೇ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು, ಸಕ್ಕರೆ ಮಂತ್ರಿಗಳನ್ನು ಭೇಟಿ ಮಾಡಿ ರೈತರ ಇನ್ನಿತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಪಾಟೀಲ್, ಹತ್ತಳ್ಳಿ ದೇವರಾಜ್, ಕುಮಾರ್ ಬುಬಾಟಿ, ಬರಡನಪುರ ನಾಗರಾಜ್, ಶಂಕರ್ ಕಾಜಗಾರ್, ಕಾಟೂರ್ ಮಹದೇವಸ್ವಾಮಿ, ಹನುಮಯ್ಯ ಇದ್ದರು.

''ಕಳಸಾ-ಬಂಡೂರಿ ಮಹದಾಯಿ ಯೋಜನೆಗೆ ಡಿಪಿಆರ್ ಅನುಮೋದನೆ ಸ್ವಾಗತಾರ್ಹ''

ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ್ ಜಿಲ್ಲೆಗಳ 3,90 ಟಿಎಂಸಿ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರಕಾರ 1,300 ಕೋಟಿ ರೂ.ಗಳಿಗೆ ಡಿಪಿಆರ್ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಇದು ಚುನಾವಣೆ ಆಕರ್ಷಣೆಯ ಯೋಜನೆಯಾಗಬಾರದು ಕಾಲಮಿತಿಯೊಳಗೆ ಕಾಮಗಾರಿ ಆರಂಭವಾಗಿ ಅನುಷ್ಠಾನಗೊಳ್ಳಬೇಕು. 

-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

Similar News